ರಸ್ತೆ ಪಕ್ಕ ದೋಸೆ ಹಾಕೊಂಡು ಬದುಕುತ್ತೀನಿ: ನಟಿ ಅದಿತಿ ಪ್ರಭುದೇವ ಈ ನಿರ್ಧಾರ ಮಾಡಿದ್ದೇಕೆ?
ನಟಿ ಅದಿತಿ ಪ್ರಭುದೇವ ಅವರು ಮದುವೆ ಬಳಿಕ ನಟ ವಿನಯ್ ರಾಜ್‌ಕುಮಾರ್ ನಟನೆಯ "ಅಂದೊಂದಿತ್ತು ಕಾಲ"ದಲ್ಲಿ ನಟಿಸಿದ್ದು, ಇದೇ ಆಗಸ್ಟ್ 29ರಂದು ರಿಲೀಸ್ ಆಗಲಿದೆ. ಇದೇ ಸಿನಿಮಾದ ಮುಂಗಾರು ಮಳೆಯಲ್ಲಿ ಹಾಡು ಟ್ರೆಂಡಿಂಗ್‌ನಲ್ಲಿದೆ. ಮದುವೆಯಾದ ಬಳಿಕ ಅದಿತಿ ಪ್ರಭುದೇವ ಅವರು ಸಿನಿಮಾಗಳಲ್ಲಿ ಮುಂದುವರಿದಿದ್ದಾರೆ. ಇತ್ತೀಚೆಗಷ್ಟೇ ಅವರು ಮದುವೆಯಾದ ಮೇಲೆ ಅವಕಾಶಗಳು ಸಿಗಲ್ಲ ಅನ್ನೋದನ್ನ ನಾನು ಒಪ್ಪಲ್ಲ ಎಂದಿದ್ರು. ಆದರೆ ಈಗ ರಸ್ತೆ ಪಕ್ಕ ದೋಸೆ ಮಾರಿಕೊಂಡಾದರೂ ಬದುಕುತ್ತೀನಿ ಎಂಬ ಅಚ್ಚರಿ ಮಾತುಗಳನ್ನಾಡಿದ್ದಾರೆ. ಇದಕ್ಕೆ ಕಾರಣ ಕೂಡ ಅವರೇ ತಿಳಿಸಿದ್ದಾರೆ.
́́'ನನ್ನ ಆರಂಭಿಕ ದಿನಗಳ ಬಗ್ಗೆ ಹೇಳಬೇಕಂದ್ರೆ, ನಾನು ಅವಕಾಶಗಳು ಸಿಕ್ಕರೂ ಹೀಗೇ ಇರ್ತೀನಿ, ಸಿಗದೇ ಇದ್ದರೂ ಹೀಗೇ ಇರ್ತೀನಿ. ಅವಕಾಶ ಸಿಗಲೇಬೇಕು ಅಂತೆಲ್ಲ ಒದ್ದಾಡಲ್ಲ. ಆದರೆ ನಂಗೆ ಏನಂದ್ರೆ ಕೆಲಸ ಮಾಡ್ತಾ ಇರಬೇಕು. ನಿಧಾನ ಆದ್ರೂ, ವೇಗವಾಗಿ ಆದ್ರೂ ಸರಿ ಕೆಲಸ ಮಾಡುತ್ತಾ ಇರಬೇಕು. ಮನೇಲಾದ್ರೂ ಕೆಲಸ ಮಾಡಿಕೊಂಡಿರಬೇಕು ಅಂತ ಇರ್ತೀನಿ' ಎಂದು "ವಿಜಯ ಕರ್ನಾಟಕ" ಸಂದರ್ಶನದಲ್ಲಿ ಅದಿತಿ ಹೇಳಿಕೊಂಡಿದ್ದಾರೆ.

'ನನಗೆ ಆರಂಭದಲ್ಲಿ ಸುಲಭವಾಗಿ ಅವಕಾಶ ಕೊಟ್ಟರು. ಲಕ್ಷಾಂತರ ಮಂದಿ ಅದೇ ಅವಕಾಶಕ್ಕಾಗಿ ಎಷ್ಟೆಲ್ಲ ಕಷ್ಟ ಪಟ್ಟಿರುತ್ತಾರೆ? ಹಾಗೆ ನೋಡಿದ್ರೆ ನಾನು ತುಂಬಾ ಲಕ್ಕಿ ಎಂದು ಸಂತಸ ಹಂಚಿಕೊಂಡಿದ್ದಾರೆ. ಆರಂಭದಲ್ಲೇ ಒಂದು ಸೀರಿಯಲ್‌ನಲ್ಲಿ ಅವಕಾಶ, ನಂತರ ಕಲರ್ಸ್‌ನಲ್ಲಿ ದೊಡ್ಡ ಅವಕಾಶ ಸಿಕ್ತು. ಹಾಗೆ ನೋಡಿದ್ರೆ ದೇವರು ನನಗೆ ಒಳ್ಳೆಯ ಅವಕಾಶಗಳನ್ನೇ ಕೊಟ್ಟಿದ್ದಾನೆ. ಸಿಕ್ಕ ಎಲ್ಲ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಕೆಲಸ ಮಾಡಿದ್ದೀನಿ. ರೋಡ್ ಸೈಡಲ್ಲಿ ದೋಸೆ ಹಾಕ್ಕೊಂಡು ಆದ್ರೂ ದುಡಿತೀನಿ, ಕೆಲಸ ಮಾತ್ರ ನಿಲ್ಲಿಸಲ್ಲ ಎಂದು ನಾನು ಮನೆಯಲ್ಲಿ ಆಗಾಗ ಹೇಳುತ್ತಿರುತ್ತೇನೆ' ಎಂದಿದ್ದಾರೆ.
'ನೋಡುವವರಿಗೆ ಅದಿತಿ ಕ್ಯಾಮೆರಾ ಮುಂದೆ ತುಂಬಾ ಸೈಲೆಂಟ್ ಅನಿಸುತ್ತೆ. ಆದರೆ ನಮ್ಮ ತಲೆಯಲ್ಲಿ ನೂರಾರು ವಿಚಾರಗಳು ಓಡುತ್ತಿರುತ್ತೆ. ಈಗ ನಾವು ಯಾರನ್ನೇ ನೋಡಿದ್ರೂ ಅವರು ತುಂಬಾ ಆರಾಮಾಗಿ ಇದ್ದಾರಲ್ಲ ಅಂದುಕೊಳ್ತೀವಿ. ಅದೇ ರೀತಿ ಸಿನಿಮಾನೂ ಹಾಗೆ, ಎಷ್ಟು ಚೆಂದ ಅಲ್ವಾ ಅನ್ಕೋತಾರೆ. ಹಾಗಿದ್ದಾಗ ನೂರಾರು ಮಂದಿ ಒಂದು ಕಡೆ ಸೇರಿ ಸಿನಿಮಾ ಮಾಡೋದು ನಿಜಕ್ಕೂ ಕಷ್ಟವಾದ ವಿಚಾರ. ಎಲ್ಲ ಸಿನಿಮಾಗಳು ಹಾಗೆನೇ, ಎಲ್ಲ ಸೇರಿ ಒಂದು ಹೂವಾಗುತ್ತೆ' ಎಂದು ಹೇಳಿದ್ದಾರೆ.

'ನಟರಿಗೇ ಹೆಚ್ಚು ಸಂಭಾವನೆ ಸಿಗುತ್ತೆ'
'ಯಾವುದೇ ಸಿನಿಮಾ ಆದ್ರೂ ಹೀರೋಗಳಿಗೆ ಹೆಚ್ಚು ಸಂಭಾವನೆ ಸಿಗುತ್ತೆ. ಸೀರಿಯಲ್ ಮಾಡುವಾಗ ನನಗೇ ಜಾಸ್ತಿ ಸಂಭಾವನೆ ಎಂದು ಹೇಳ್ತಿದ್ದೆ. ಆದರೆ ಈಗ ಖಂಡಿತವಾಗಿಯೂ ಹೀರೋಗಳಿಗೇ ನಟಿಯರಿಗಿಂತ ಹೆಚ್ಚು ಸಂಭಾವನೆ ಸಿಗೋದು ಎಂದಿದ್ದಾರೆ. ಇನ್ನು "ಅಂದೊಂದಿತ್ತು ಕಾಲ" ಸಿನಿಮಾ ಕಥೆಯೂ ಇಷ್ಟ ಆಯ್ತು, ಅದರೊಂದಿಗೆ ರಾಜ್‌ಕುಮಾರ್ ಅವರ ಕುಟುಂಬದ ಜೊತೆ ನಟಿಸುವುದೇ ಸಂತೋಷ. ಹಾಗಾಗಿ ಸಿನಿಮಾವನ್ನ ಖುಷಿಯಾಗಿ ಮಾಡಿದೆ ಎಂದಿದ್ದಾರೆ. ಮೊದಲಿಗೆ ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಅವರೇ ನಟ ಎಂದು ಹೇಳಿರಲಿಲ್ಲ. ಕಥೆ ಕೇಳಿದೆ, ತುಂಬಾ ಇಷ್ಟ ಆಯ್ತು. ಸಿನಿಮಾರಂಗದ್ದೇ ಕಥೆ ಆಗಿದ್ದರಿಂದ ಇಷ್ಟವಾಯ್ತು. ಆ ಮೇಲೆ ವಿನಯ್ ಅವರು ಈ ಸಿನಿಮಾ ಹೀರೋ ಅಂದ್ರು, ಆಗ ಡಬಲ್ ಖುಷಿ ಆಯ್ತು' ಎಂದು ಖುಷಿ ಹಂಚಿಕೊಂಡಿದ್ದಾರೆ.












Click it and Unblock the Notifications