ಮೊದಲು ನಿಮ್ಮ ಪಕ್ಕದ ರಾಜ್ಯಗಳ ಭಾಷೆ ಕಲಿಯಿರಿ: ಕಮಲ್ ಹಾಸನ್ ಹೀಗಂದಿದ್ದೇಕೆ?
ಹಿಂದಿ ಹೇರಿಕೆ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಕೂಡ ಹಿಂದಿ ಭಾಷಿಕರ ಹಾವಳಿ ಹಾಗೂ ದಬ್ಬಾಳಿಕೆ ಕಡಿಮೆ ಇಲ್ಲ. ತಮಿಳುನಾಡಿನಲ್ಲೂ ಹಿಂದಿ ಹೇರಿಕೆಗೆ ಮೊದಲಿನಿಂದಲೂ ವಿರೋಧವಿದೆ. ಈ ಬಗ್ಗೆ ಕಾಲಿವುಡ್ ಖ್ಯಾತ ನಟ ಕಮಲ್ ಹಾಸನ್ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಿಂದಿ ಹೇರಿಕೆ ಉಲ್ಲೇಖಿಸಿ ಅವರು ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಸಂದೇಶವೊಂದನ್ನು ರವಾನಿಸಿದ್ದಾರೆ.
ಕಮಲ್ ಹಾಸನ್ ತಮ್ಮ ಮುಂಬರುವ ಸಿನಿಮಾ ಥಗ್ ಲೈಫ್ ಪ್ರಚಾರಕ್ಕಾಗಿ ಕೇರಳದ ಕೊಚ್ಚಿಗೆ ತೆರಳಿದ್ದರು. ಈ ವೇಳೆ ಅವರು ಹಿಂದಿ ಭಾಷಾ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ. ತಮಿಳಿನಲ್ಲೇ ಮಾತನಾಡಿರುವ ಅವರು ಕೇರಳದ ಜನರು ಹಿಂದಿ ಭಾಷೆಗಿಂತ ಮೊದಲು ನಮ್ಮ ನೆರೆಯ ದಕ್ಷಿಣ ಭಾರತದ ರಾಜ್ಯಗಳ ಭಾಷೆಗಳನ್ನು ಕಲಿಯಬೇಕು ಎಂದು ಹೇಳಿದ್ದಾರೆ.

ಕೇರಳದ ಅಭಿಮಾನಿಗಳಿಗೆ ಈ ರೀತಿ ನೇರವಾಗಿ ಹೇಳಿದ್ದಾರೆ. ಮೊದಲು, ನೀವು ನಿಮ್ಮ ಪಕ್ಕದ ರಾಜ್ಯದ ಭಾಷೆಗಳನ್ನು ಕಲಿತುಕೊಳ್ಳಿ, ನಂತರ ನಾವು ಹಿಂದಿ ಕಲಿಯುವ ಬಗ್ಗೆ ಮಾತನಾಡುತ್ತೇವೆ. ನಾವೆಲ್ಲರೂ ದ್ರಾವಿಡರು, ಒಂದೇ ಕುಟುಂಬದವರು. ನೀವು ತಮಿಳುನಾಡಿನಲ್ಲಿ ಮಲಯಾಳಂ ಮಾತನಾಡಬಹುದು, ಆದರೆ ನೀವು ಬಹಳ ಸಮಯ ಮಾತನಾಡಿದರೆ, ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತೆ. ಆದರೆ ನೀವು ಕೇರಳದಲ್ಲಿ ತಮಿಳು ಮಾತನಾಡಿದರೆ, ಜನರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಕಮಲ್ ಹೇಳಿದ್ದಾರೆ.
ಈ ರೀತಿ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಲು ಧೈರ್ಯ ಬೇಕು ಎಂದು ಕಮಲ್ ಹಾಸನ್ ಹೇಳಿಕೊಂಡಿದ್ದಾರೆ. ನಮ್ಮ ಭಾಷೆಯು ಕಣ್ಮರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ರಾಜ್ಯದಲ್ಲಿ ಅಂತಹ ಹೇಳಿಕೆ ನೀಡಲು ಎಷ್ಟು ಧೈರ್ಯ ಬೇಕು ಎಂದು ನಿಮಗೆ ತಿಳಿದಿದೆಯೇ? ನಾವೆಲ್ಲರೂ ದ್ರಾವಿಡರು. ಆ ಹೆಮ್ಮೆಯೊಂದಿಗೆ, ನಾವು ನಮ್ಮ ಕುಟುಂಬಕ್ಕೆ ಥಗ್ ಲೈಫ್ ನೀಡುತ್ತೇವೆ. ನಮಸ್ಕಾರಂ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಜೂನ್ 5ಕ್ಕೆ ಥಗ್ ಲೈಫ್ ರಿಲೀಸ್
ಸುಮಾರು ನಾಲ್ಕು ದಶಕಗಳ ನಂತರ ಥಗ್ ಲೈಫ್ ಸಿನಿಮಾ ಮೂಲಕ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಒಗ್ಗೂಡಿದ್ದಾರೆ. ಇವರು ಕೊನೆಯ ಬಾರಿಗೆ 1987ರ ನಾಯಗನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಚಿತ್ರಕಥೆಯನ್ನು ಕಮಲ್ ಮತ್ತು ಮಣಿ ಇಬ್ಬರೂ ಬರೆದಿದ್ದು, ಮಣಿರತ್ನಂ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಸಿಂಬು, ತ್ರಿಶಾ ಕೃಷ್ಣನ್, ಅಭಿರಾಮಿ, ಐಶ್ವರ್ಯಾ ಲಕ್ಷ್ಮಿ, ಅಶೋಕ್ ಸೆಲ್ವನ್, ಜೋಜು ಜಾರ್ಜ್, ನಾಸರ್, ಅಲಿ ಫಜಲ್, ಪಂಕಜ್ ತ್ರಿಪಾಠಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಈ ಸಿನಿಮಾ ಒಟಿಟಿ ರಿಲೀಸ್ ಬಗ್ಗೆಯೂ ಮಾತನಾಡಿರುವ ಕಮಲ್, ಥಗ್ ಲೈಫ್ ತನ್ನ ಥಿಯೇಟ್ರಿಕಲ್ ಮತ್ತು ಒಟಿಟಿ ಬಿಡುಗಡೆಯ ನಡುವೆ 8 ವಾರಗಳ ಅಂತರವನ್ನು ಕಾಣಲಿದೆ. ಇದು ಒಂದು ಪ್ರಯೋಗವೂ ಅಲ್ಲ, ಇದು ಪ್ರಾಯೋಗಿಕವಾದ ಕೆಲಸ. ನಮ್ಮ ಸಿನಿಮಾಗಾಗಿ ನೆಟ್‌ಫ್ಲಿಕ್ಸ್ ಒಟಿಟಿ ಒಪ್ಪಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಬಹುಶಃ ಇತರರು ಅನುಸರಿಸಬಹುದಾದ ಯೋಜನೆಯಾಗಿದೆ. ಇದು ಚಿತ್ರರಂಗವನ್ನು ಆರೋಗ್ಯಕರವಾಗಿಸುತ್ತದೆ. ಈ ಅವಕಾಶವನ್ನು ಪಡೆದುಕೊಂಡ ಮೊದಲಿಗರು ನಾವೇ ಎಂದು ನಮಗೆ ಸಂತೋಷವಾಗಿದೆ ಎಂದಿದ್ದಾರೆ.












Click it and Unblock the Notifications