ಬಿಗ್‌ಬಾಸ್ ಸ್ಪರ್ಧಿ ಜಗದೀಶ್‌ಗೆ ಎದುರಾಯ್ತು ದೊಡ್ಡ ಆಪತ್ತು!
ಈ ಬಾರಿಯ ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಸಖತ್ ಕ್ರೇಜ್ ಹುಟ್ಟಿಸಿ, ಕೊನೆಗೂ ಶುರುವಾಗಿದೆ. ಇನ್ನು ಈ ಬಾರಿ ದೊಡ್ಮನೆಗೆ ಘಟಾನುಘಟಿ ಸ್ಪರ್ಧಿಗಳು ಕಾಲಿಟ್ಟಿದ್ದು, ಹೊಸ ಅಧ್ಯಾಯಕ್ಕೆ ನಾಂದಿಯಾಗಿದೆ. ಈ ಬಾರಿ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಸೇರಿಕೊಂಡಿರುವ ಜಗದೀಶ್ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಸೋಶಿಯಲ್ ಮೀಡಿಯಾಗಳಿಂದಲೇ ಹೆಚ್ಚು ಖ್ಯಾತಿ ಗಳಿಸಿದ್ದ ಜಗದೀಶ್ ಅವರು ಲಾಯರ್ ಜಗದೀಶ್ ಹಾಗೂ ವಕೀಲ್ ಸಾಬ್ ಎನ್ನು ಟೈಟಲ್ ಕೂಡ ಹೊಂದಿದ್ದಾರೆ. ಹಾಗಾಗಿ ಇವರನ್ನು ಬಹುತೇಕರು ಲಾಯರ್ ಜಗದೀಶ್ ಎಂದೇ ಕರೆಯುವುದೂ ಉಂಟು. ಆದರೆ, ಇದೇ ವಿಚಾರವಾಗಿ ಜಗದೀಶ್ ಅವರಿಗೆ ಈ ಆಪತ್ತು ಎದುರಾಗಿದೆ.

ಜಗದೀಶ್ ಅವರನ್ನು ಲಾಯರ್ ಜಗದೀಶ್ ಎಂದು ಕರೆಯುತ್ತಿರುವ ವಿಚಾರಕ್ಕೆ ವಕೀಲರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಬಿಗ್‌ಬಾಸ್ ಶೋ ಪ್ರಸಾರ ಮಾಡುತ್ತಿರುವ ವಾಹಿನಿಗೂ ಪತ್ರ ಬರೆದಿದೆ. ಬಿಗ್‌ಬಾಸ್ ಸ್ಪರ್ಧಿಯಾಗಿರುವ ಜಗದೀಶ್ ಪ್ರಸ್ತುವ ವಕೀಲರೇ ಅಲ್ಲ. ಹಾಗಾಗಿ ಅವರನ್ನು ವಕೀಲ ಜಗದೀಶ್, ಲಾಯರ್ ಜಗದೀಶ್, ಲಾಯರ್ ಸಾಬ್ ಎಂದೆಲ್ಲ ಕರೆಯಬಾರದು ಚಾನಲ್‌ಗೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ.
ಪತ್ರದಲ್ಲೇನಿದೆ?: ಬಿಗ್‌ಬಾಸ್ ಸ್ಪರ್ಧಿಯಾಗಿರುವ ಕೆ.ಎನ್.ಜಗದೀಶ್ ಮಹದೇವ್ ಅವರನ್ನು ವಕೀಲರು ಎಂದು ಕರೆಯುತ್ತಿರುವುದು ಸಂಘದ ಗಮನಕ್ಕೆ ಬಂದಿದೆ. ಅಸಲಿಗೆ ಅವರು ವಕೀಲರೇ ಅಲ್ಲ. ಆದರೂ ಅವರನ್ನು ವಕೀಲರು ಹಾಗೂ ವಕೀಲ್ ಸಾಬ್ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟಾಗಿದೆ. ಚಾನಲ್‌ನ ಈ ನಡೆಗೆ ಅನೇಕ ವಕೀಲರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದೆ.

ಜಗದೀಶ್ ಅವರಿಗೆ ಈ ಹಿಂದೆಯೇ ಕರ್ನಾಟಕ ವಕೀಲರ ಪರಿಷತ್ತು ರಾಜ್ಯದಲ್ಲಿ ಕಾನೂನು ವೃತ್ತಿ ನಡೆಸದಂತೆ ಆದೇಶ ಹೊರಡಿಸಿದೆ. ದೆಹಲಿ ಬಾರ್ ಕೌನ್ಸಿಲ್ ಕೂಡ ಜಗದೀಶ್ ಅವರು ವಕೀಲರಾಗಿ ನೋಂದಣಿಯಾಗಿದ್ದ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಆದರೆ, ಅಲ್ಲಿಯೂ ಅವರು ನಕಲಿ ದಾಖಲೆ ಸೃಷ್ಟಿಸಿರುವುದು ದೃಢಪಟ್ಟಿತ್ತು. ನಂತರ ಅವರ ನೋಂದಣಿಯನ್ನೇ ರದ್ದುಗೊಳಿಸಿ, ಎಲ್ಲ ಪ್ರಮಾಣಪತ್ರಗಳನ್ನು ವಾಪಸ್ ನೀಡುವಂತೆ ಆದೇಶಿಸಲಾಗಿತ್ತು.
ಆದರೆ ವಕೀಲರೇ ಅಲ್ಲದ ಜಗದೀಶ್ ಅವರ ಹಿನ್ನೆಲೆಯನ್ನು ಒಮ್ಮೆ ಪರಿಶೀಲಿಸದೆ, ಅವರನ್ನು ನಿಮ್ಮ ಚಾನಲ್‌ನಲ್ಲಿ ವಕೀಲರು ಎಂದು ಕರೆಯುತ್ತಿರುವುದು ನಮ್ಮ ವಕೀಲ ವೃಂದಕ್ಕೆ ಭಾರಿ ನೋವುಂಟು ಮಾಡಿದೆ ಎಂದು ಪತ್ರದಲ್ಲಿ ತಿಳಿಸಿದೆ.
ಇನ್ನು ಮುಂದಾದರೂ ನೀವು ಜಗದೀಶ್ ಅವರನ್ನು ವಕೀಲರೆಂದು ಬಿಂಬಿಸಬಾರದು. ಇದನ್ನು ಅಲ್ಲಿರುವ ಸಹ ಸ್ಪರ್ಧಿಗಳಿಗೂ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಈ ಮನವಿಯನ್ನು ಪುರಸ್ಕರಿಸದೇ ಇದ್ದಲ್ಲಿ ವಕೀಲರ ಸಂಘವು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪತ್ರದ ಮೂಲಕ ತಿಳಿಸಿದ್ದಾರೆ.
ಬಿಗ್‌ಬಾಸ್ ಮನೆ ಪ್ರವೇಶಿಸಿದ ದಿನದಿಂದಲೂ ಉಳಿದ ಸ್ಪರ್ಧಿಗಳೊಂದಿಗೆ ಕಿರಿಕ್ ಮಾಡಿಕೊಂಡಿರುವ ಜಗದೀಶ್ ಅವರಿಗೆ ಇದೀಗ ಹೊಸ ಆಪತ್ತು ಎದುರಾಗಿದ್ದು, ತನಗೆ ಖ್ಯಾತಿ ನೀಡಿದ್ದ ವಕೀಲ ಹಾಗೂ ಲಾಯರ್ ಪದಗಳೇ ಇಂದು ಮುಳುವಾಗುತ್ತಿದೆ.












Click it and Unblock the Notifications