ಸಿನಿಮಾ ರಂಗಕ್ಕೆ ಕಾಲಿಟ್ಟ ಮಾಜಿ ಸಚಿವ ಲಕ್ಷ್ಮಣ ಸವದಿ!
ಬೆಂಗಳೂರು, ಅಕ್ಟೋಬರ್ 03; ಕರ್ನಾಟಕದ ಹಲವು ರಾಜಕೀಯ ನಾಯಕರು ಸಿನಿಮಾ, ಧಾರವಾಹಿಗಳಲ್ಲಿ ಬಣ್ಣ ಹಚ್ಚುವ ಮೂಲಕ ತೆರೆಯ ಮೇಲೆ ಬಂದಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಬ್ಯುಸಿಯಾಗಿರುವ ರಾಜಕೀಯ ನಾಯಕರು ಸಹ ಇದ್ದಾರೆ. ಈ ಸಾಲಿಗೆ ಈಗ ಕಾಂಗ್ರೆಸ್ ಶಾಸಕರೊಬ್ಬರು ಸೇರಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ, ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ರಾಜಕೀಯದ ನಡುವೆಯೂ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು 1,31,404 ಮತಗಳನ್ನು ಪಡೆದು ಅಥಣಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ನಾಗಾ ರೆಡ್ಡಿ ಎಂಬುವವರು ನಿರ್ದೇಶನ ಮಾಡುತ್ತಿರುವ 'ದೇಸಾಯಿ' ಹೆಸರಿನ ಕನ್ನಡ ಸಿನಿಮಾದಲ್ಲಿ ಲಕ್ಷ್ಮಣ ಸವದಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜಕೀಯ ಕೆಲಸ ಕಾರ್ಯಗಳ ನಡುವೆಯೇ ಆಪ್ತರ ಒತ್ತಾಯಕ್ಕೆ ಮಣಿದು ಬಣ್ಣ ಹಚ್ಚುತ್ತಿದ್ದಾರೆ.
ಮಹಾಂತೇಶ್ ಚೊಳಚಗುಡ್ಡ ಎಂಬುವವರು 'ದೇಸಾಯಿ' ಹೆಸರಿನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕರು ಲಕ್ಷ್ಮಣ ಸವದಿ ಆಪ್ತರು. ಈ ಹಿನ್ನಲೆಯಲ್ಲಿ ನಿರ್ಮಾಪಕರ ಒತ್ತಾಯಕ್ಕೆ ಮಣಿದು ಲಕ್ಷ್ಮಣ ಸವದಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಶೂಟಿಂಗ್; ಈ ಚಿತ್ರದ ಚಿತ್ರೀಕರಣ ಸದ್ಯ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆಯುತ್ತಿದೆ. ಲಕ್ಷ್ಮಣ ಸವದಿ ಚಿತ್ರೀಕರಣದಲ್ಲಿ ಪಾಲ್ಗೊಂಡು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
'ದೇಸಾಯಿ' ಸಿನಿಮಾದಲ್ಲಿ ಕುಸ್ತಿ ಪಟುಗಳಿಗೆ ಪ್ರಶಸ್ತಿ ನೀಡುವ ಸನ್ನಿವೇಶ ಒಂದಿದೆ. ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡುವ ಪಾತ್ರದಲ್ಲಿ ಅಥಣಿಯ ಶಾಸಕ ಲಕ್ಷ್ಮಣ ಸವದಿ ನಟಿಸುತ್ತಿದ್ದಾರೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರು; ಲಕ್ಷ್ಮಣ ಸವದಿ 2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಟಳ್ಳಿ ವಿರುದ್ಧ ಸೋಲು ಕಂಡರು. ಚುನಾವಣೆಯಲ್ಲಿ ಸೋತರೂ ಸಹ ಬಿಜೆಪಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾದರು. ಸಾರಿಗೆ ಇಲಾಖೆಯ ಹೊಣೆಯನ್ನು ಅವರಿಗೆ ನೀಡಲಾಯಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಥಣಿ ಉಪ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾದರು, ಗೆದ್ದರು.
ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಟಿಕೆಟ್ ಬೇಕು ಎಂದು ಲಕ್ಷ್ಮಣ ಸವದಿ ಬಹಿರಂಗವಾಗಿಯೇ ಹೇಳಿದ್ದರು. ಆದರೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಹೇಶ್ ಕುಮಟಳ್ಳಿ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡ ಲಕ್ಷ್ಮಣ ಸವದಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ, ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
ಬಿಜೆಪಿ ತೊರೆದ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದರು. ಅಥಣಿ ಕ್ಷೇತ್ರದ ಚುನಾವಣೆ ರಾಜ್ಯದ ಗಮನ ಸೆಳೆಯಿತು. ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ 55,282 ಮತಗಳನ್ನು ಪಡೆದು ಸೋಲು ಕಂಡರು. ಲಕ್ಷ್ಮಣ ಸವದಿ ಗೆಲುವು ಕಂಡರು.












Click it and Unblock the Notifications