ನವಿಲಾಗಿ ಕುಣಿದ ಕಿಶನ್-ನಿವೇದಿತಾ ಗೌಡ, ಗರಿ ನೋಡಿ ಕೇಸ್ ಹಾಕ್ತಾರೆ ಹುಷಾರ್ ಅಂತಿದ್ದಾರೆ ಫ್ಯಾನ್ಸ್
ಮೊನ್ನೆ ತಾನೇ ತನಿಷಾ ಕುಪ್ಪಂಡ ಜೊತೆ ವಿಧಾನಸೌಧದ ಮುಂದೆ ಬೆಂಕಿಯಂತೆ ಕುಣಿದ ಕಿಶನ್ ಇದೀಗ ನವಿಲಾಗಿ ನಿವೇದಿತಾ ಜೊತೆ ಕುಣಿದಿದ್ದಾರೆ. ಇಷ್ಟೊಂದು ಗರಿ ಎಲ್ ಸಿಕ್ತಪ್ಪಾ, ಕೇಸಾಗುತ್ತೆ ಹುಷಾರ್ ಅಂತಿದ್ದಾರೆ ನೆಟ್ಟಿಗರು. ಕಿಶನ್ ಬಿಳಗಲಿ ಇತ್ತೀಚೆಗೆ ರೀಲ್ಸ್ ಮೂಲಕವೇ ಸೌಂಡ್ ಮಾಡ್ತಿದ್ದಾರೆ. ಈ ಹಿಂದೆ ಆಗಾಗ ಅಮವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ಬೆಳದಿಂಗಳ ಬಾಲೆಯಂಥಾ ಹುಡುಗೀರ ಜೊತೆಗೆ ರೊಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕುತ್ತ ಫ್ಯಾನ್ಸ್ ಮನ ಮುದಗೊಳಿಸುತ್ತಿದ್ದ ಕಿಶನ್ ಈಗೀಗ ವಾರಕ್ಕೊಬ್ಬ ಸುಂದರಿ ಜೊತೆಗೆ ಅಟೆಂಡೆನ್ಸ್ ಹಾಕ್ತಿದ್ದಾರೆ. ಅಂದಹಾಗೆ ಈ ಬಾರಿ ಅವರ ಜೊತೆ ಹೆಜ್ಜೆ ಹಾಕಿದ ಬೆಡಗಿ ದಿ ಗ್ರೇಟ್ ನಿವೇದಿತಾ ಗೌಡ.
ನವಿಲುಗರಿ ಕಂಡು ಪ್ರಶ್ನೆಗಳ ಸುರಿಮಳೆ
ಕತ್ತಲೆ ಬ್ಯಾಗ್ರೌಂಡಲ್ಲಿ ಮೈತುಂಬ ನವಿಲಗರಿ ಹಚ್ಚಿಕೊಂಡು ಕಿಶನ್ ನವಿಲಾಗಿ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ರೆ ನಿವೇದಿತಾ ಹೆಣ್ಣು ನವಿಲಾಗಿ ಬಾಗಿ ಬಳುಕಿ ಬೆರಗು ಮೂಡಿಸುತ್ತಾರೆ. ಇವರ ಕಾಸ್ಟ್ಯೂಮ್, ಹಿನ್ನೆಲೆಯ ಬಣ್ಣ, ಡಾನ್ಸ್ ಮಾಡೋ ರೀತಿ ಎಲ್ಲ ಇಂಟರೆಸ್ಟಿಂಗ್ ಆಗಿದೆ. ಆದರೆ ಸಮಸ್ಯೆ ಆಗಿರೋದು ನವಿಲುಗರಿ. ನವಿಲುಗರಿ ವನ್ಯ ಉತ್ಪನ್ನವಾಗಿರುವ ಕಾರಣ ಇದರ ಬಗ್ಗೆ ನೆಟ್ಟಿಗರು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಒಬ್ಬರು ಇಷ್ಟೊಂದು ನವಿಲಗರಿ ನಿಮಗೆ ಹೇಗೆ ಸಿಕ್ಕಿತು ಅಂತ ಪ್ರಶ್ನೆ ಮಾಡಿದರೆ ಇನ್ನೊಬ್ಬರು ಹುಷಾರು, ವಿಷ್ಯ ಗೊತ್ತಾದ್ರೆ ಅರಣ್ಯ ಇಲಾಖೆಯವ್ರು ಹುಡುಕ್ಕೊಂಡು ಬರ್ತಾರೆ ಅಂತ ಎಚ್ಚರಿಕೆ ನೀಡಿದ್ದಾರೆ.

ನಿವೇದಿತಾ ಗೌಡ ಇತ್ತೀಚೆಗೆ ತನ್ನ ಹಾಗೂ ಮಾಜಿ ಪತಿ ಚಂದನ್ ಶೆಟ್ಟಿ ವಿಚ್ಛೇದನ ಬಗ್ಗೆ ಮುಕ್ತವಾಗಿ ಮಾತನಾಡಿ ಸುದ್ದಿಯಾಗಿದ್ದರು. ಅಷ್ಟಕ್ಕೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಲವ್ ಶುರುವಾದದ್ದು ಬಿಗ್ಬಾಸ್ನಿಂದ. ಅಲ್ಲಿಯೇ ಅವರನ್ನು ಜೋಡಿ ಎಂದು ಬ್ರ್ಯಾಂಡ್ ಮಾಡಲಾಗಿತ್ತು. ಇದೇ ತಮ್ಮ ಬದುಕಿಗೆ ಮುಳ್ಳಾಯಿತು ಎಂದು ನಿವೇದಿತಾ ಹೇಳಿದ್ದರು.
'ನಮ್ಮ ಮದುವೆಯ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾಗಿತ್ತು. ನಾವು ಬಿಗ್ಬಾಸ್ಗೆ ಹೋಗಿದ್ದಕ್ಕೆ ಅಲ್ಲಿಯೇ ನಮ್ಮನ್ನು ಜೋಡಿ ಎಂದು ಬ್ರ್ಯಾಂಡ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಅದೇ ತುಂಬಿತ್ತು, ಹೋದಲ್ಲೆಲ್ಲ ನೀವು ಮದುವೆ ಆಗಬೇಕು ಎಂದು ಹೇಳುತ್ತಿದ್ದರು. ನಾವು ಆ ಪ್ರಭಾವಕ್ಕೆ ಒಳಗಾದೆವು. ಮದುವೆ ಆದೆವು, ಆದರೆ ನಮ್ಮ ನಡುವೆ ಹೊಂದಾಣಿಕೆಯೇ ಇರಲಿಲ್ಲ. ನಮ್ಮಿಬ್ಬರ ನಡುವೆ ಪರಸ್ಪರ ಗೌರವ ಇದೆ. ಬೇರೆಯವರ ಖಾಸಗಿ ಜೀವನದ ಗೌರವಿಸೋ ಕಾರಣಕ್ಕೆ ಡಿವೋರ್ಸ್ ಬಗ್ಗೆ ನಾವು ಮಾತನಾಡಿಲ್ಲ. ಅದು ಅನಗತ್ಯ ಸಹ, ನನ್ನ ಹತ್ತಿರದವರಿಗೆ ಗೊತ್ತಾದರೆ ಸಾಕು, ಎಲ್ಲರಿಗೂ ಗೊತ್ತಾಗುವ ಅಗತ್ಯ ಇಲ್ಲ. ಜನರು ಅವರಿಗೆ ಏನು ಬೇಕೋ ಅದನ್ನು ನಂಬುತ್ತಾರೆ. ಅದು ಅವರಿಗೆ ಬಿಟ್ಟಿದ್ದು, ಎಲ್ಲರನ್ನೂ ಕನ್ವಿನ್ಸ್ ಮಾಡೋಕೆ ಆಗಲ್ಲ' ಎಂದು ಹೇಳಿದ್ದರು.
'ಡಿವೋರ್ಸ್ ಏಕೆ ಆಯಿತು ಎಂದು ಕಾರಣ ಹೇಳೋಕೆ ನಾನು ಹೋಗುವುದಿಲ್ಲ. ಅದು ನಮ್ಮಿಬ್ಬರ ವೈಯಕ್ತಿಕ ವಿಷಯ. ಆದರೆ ವಿಚ್ಛೇದನದ ಬಳಿಕ ಸಂಬಂಧ ಇಲ್ಲದೋರೆಲ್ಲ ಬಂದು ಏನೇನೋ ಹೇಳೋಕೆ ಶುರು ಮಾಡಿದರು. ಎಲ್ಲದಕ್ಕೂ ಫುಲ್ ಸ್ಟಾಪ್ ಇಡಬೇಕೆಂದು ನಾವು ಸರಿ ವಿಷಯ ಹೇಳಲು ಮುಂದಾದೆವು ಎಂದರು. ನಿವೇದಿತಾ ತನ್ನ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಆಗಾಗ ಇನ್ಸ್ಟಾದಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ. ಅದ್ದೂರಿ ಲೈಫ್ಸ್ಟೈಲ್ ಅವರದು. ಗ್ಲಾಮರಸ್ ಆಗಿರೋದು ಅವರ ಹವ್ಯಾಸ.
ಇನ್ನೊಂದೆಡೆ ಕಿಶನ್ ರೀಲ್ಸ್ ಮಾಡೋದರಲ್ಲಿ ಎಕ್ಸ್ಪರ್ಟ್ ಆಗ್ಬಿಟ್ಟಿದ್ದಾರೆ. ಅವರು ನಟಿಯರ ಜೊತೆಗೆ ಡ್ಯಾನ್ಸ್ ಮಾಡೋದನ್ನು ನೋಡಿ ಹಲವರು ಕಾಮೆಂಟ್ ಮಾಡುತ್ತಾರೆ. ಇನ್ನು ಯಾರನ್ನು ಬಾಕಿ ಉಳಿಸಿದ್ದೀರಿ ಕಿಶನ್ ಅಂತ. ಕೊಂಚ ವಿವಾದ ಇರುವ ನಟಿಯರೊಂದಿಗೆ ಡ್ಯಾನ್ಸ್ ರೀಲ್ಸ್ ಮಾಡಿದರಂತೂ ಕಿಶನ್ ಪೋಸ್ಟ್ಗಳು ರೇಸ್ ಕಾರ್ ನಷ್ಟು ಫಾಸ್ಟ್ ಆಗಿ ಜನರನ್ನು ರೀಚ್ ಆಗುತ್ತವೆ. ಸದ್ಯಕ್ಕೆ ನಿವೇದಿತಾ ಗೌಡ ಜೊತೆಗೆ 'ನವಿಲೇ ಹೆಣ್ ನವಿಲೇ' ಅಂತ ರೀಲ್ಸ್ ಮಾಡಿರೋದು ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅನ್ನಬಹುದು.
ಬರಹ: ಭವಾನಿ ಭಟ್













Click it and Unblock the Notifications