Kiccha Sudeep: ನಟ್ಟು ಬೋಲ್ಟ್ ಬಗ್ಗೆ ನಾನಾಗೇ ಕೆದಕಿ ಮಾತಾಡಿಲ್ಲ, ಚಿತ್ರರಂಗವನ್ನ ನಾನು ಬಿಟ್ಟುಕೊಡಲ್ಲ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಲ ತಿಂಗಳ ಹಿಂದೆ "ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತಿದೆ" ಎಂಬ ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಇದಕ್ಕೆ ಹಲವು ತಿಂಗಳ ಬಳಿಕ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ, "ಎಲ್ಲರ ನಟ್ಟು ಬೋಲ್ಟ್ ಟೈಟೇ ಇದೆ" ಎಂದಿದ್ದರು. ಇದಾದ ಬಳಿಕ ಡಿಕೆಶಿ ಹಾಗೂ ಸುದೀಪ್ ನಡುವೆ ಮುನಿಸು ಎಂದೆಲ್ಲ ಚರ್ಚೆಗಳು ನಡೆದಿದ್ದವು. ಇತ್ತೀಚೆಗೆ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ವಿಘ್ನ ಎದುರಾದಾಗಲೂ ಇದೇ ಹೇಳಿಕೆ ತಳುಕು ಹಾಕಿಕೊಂಡಿತ್ತು. ಈ ಬಗ್ಗೆ ಮತ್ತೆ ಮಾತನಾಡಿರುವ ಸುದೀಪ್, ನಟ್ಟು ಬೋಲ್ಟ್ ಬಗ್ಗೆ ನಾನಾಗೇ ಕೆದಕಿ ಮಾತನಾಡಿಲ್ಲ, ಚಿತ್ರರಂಗವನ್ನ ಬಿಟ್ಟುಕೊಡಲ್ಲ" ಎಂದಿದ್ದಾರೆ.
'ಡಿ.ಕೆ.ಶಿವಕುಮಾರ್ ಸಾಹೇಬರು ನನಗೆ ಬಹಳ ಪರಿಚಯಸ್ಥರು. ಅವರು ತುಂಬಾ ತಮಾಷೆ ಮಾಡಿಕೊಂಡಿರುವ ವ್ಯಕ್ತಿ. ಟಿವಿಗಳಲ್ಲಿ ಕಾಣುವಷ್ಟು ಗಂಭೀರವಾಗಿರಲ್ಲ. ಒಬ್ಬ ಮನುಷ್ಯನಿಗೆ ತನ್ನ ಪವರ್ ಏನು ಅಂತ ಗೊತ್ತಾದಾಗ ಅವರು ಯಾಕೆ ಮಾತನಾಡಬೇಕು? ಹಿಂದಿನಿಂದಲೇ ಬಂದು ಹೇಳಿದ್ದನ್ನ ಮಾಡಬಹುದಿತ್ತು. ಆದರೆ ಅವರು ಅದನ್ನು ಹೇಳಿದ್ರು ಅಂದ್ರೆ ಅದನ್ನ ಮಾಡಲ್ಲ ಎಂದರ್ಥ' ಎಂದಿದ್ದಾರೆ.

'ಡಿಕೆ ಅವರಿಗೆ ಕೆಲವು ಅರೆಬರೆ ಮಾಹಿತಿ ನೀಡಲಾಗಿತ್ತು. ಅದು ಅವರ ತಪ್ಪಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರಿಂದ ಆ ಮಾತು ಬರಬಾರದಿತ್ತು ಎನ್ನುವುದು ನನ್ನ ವೈಯಕ್ತಿಕ ಉದ್ದೇಶವಾಗಿತ್ತು. ಇನ್ನೊಂದೆಡೆ ನಾನು ಚಿತ್ರರಂಗದವನು, ಹಾಗಾಗಿ ನಾನು ಚಿತ್ರರಂಗವನ್ನು ಯಾರಿಗೋಸ್ಕರವೂ ಬಿಟ್ಟುಕೊಡುವವನಲ್ಲ. ಹಾಗಾಗಿ ನಾನು ಅದನ್ನ ಹೇಳಲೇಬೇಕಾಯ್ತು' ಎಂದು ಟಿವಿ9 ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
'ನಾನು ಉತ್ತರ ನೀಡಿದರಲ್ಲೂ ಎರಡು ರೀತಿ ಇದೆ. ಒಂದು ನೇರವಾಗಿ ಹೀರೋ ತರ ಮಾತನಾಡುವುದು, ಇನ್ನೊಂದು ಚಿತ್ರರಂಗದ ವ್ಯಕ್ತಿಯಾಗಿ ಹಾಗೂ ಅವರ ಸ್ನೇಹಿತನಾಗಿ ಸೂಕ್ಷ್ಮವಾಗಿ ಮಾತನಾಡುವುದು, ಎರಡೂ ಬೇಕಾಗುತ್ತೆ. ಇಲ್ಲಿ ಉತ್ತರನೂ ಕೊಡಬೇಕಾಗುತ್ತೆ, ಸೂಕ್ಷ್ಮತೆಯೂ ಇರಬೇಕಾಗುತ್ತೆ, ಚಿತ್ರರಂಗವನ್ನೂ ಬಿಟ್ಟುಕೊಡಬಾರದು. ಯಾರಾದರೂ ಒಬ್ಬರು ಹೇಳಬೇಕಿತ್ತು, ನಾನು ಹೇಳಿದೆ' ಎಂದಿದ್ದಾರೆ.
'ಪ್ರಶ್ನೆ ಕೇಳಿದ್ರು ಉತ್ತರ ಕೊಟ್ಟೆ'
'ಡಿ.ಕೆ.ಶಿವಕುಮಾರ್ ಅವರು ಕೂಡ ನನ್ನ ಮಾತನ್ನು ನೆಗೆಟಿವ್ ಆಗಿ ತೆಗೆದುಕೊಂಡಿಲ್ಲ. ಅದು ಅವರ ತಪ್ಪಲ್ಲ, ನಮ್ಮವರೊಬ್ಬರು ಮಾಡಿದ್ದು. ನಾವು ಅಹಂನಲ್ಲಿ ಮಾತನಾಡುವುದಕ್ಕೂ, ವಿಚಾರವನ್ನು ಸೂಕ್ಷ್ಮವಾಗಿ ನಿಭಾಯಿಸುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ನಾವಾಗೇ ಕೆದಕಿ ಯಾರ ಬಗ್ಗೆಯೂ ಮಾತನಾಡಿಲ್ಲ. ಬಾ ನಾನು ಯಾರಂತ ತೋರಿಸ್ತೀನಿ ಅನ್ನೋ ಅಹಂ ಕೂಡ ಇಲ್ಲ. ಹೇಳಬೇಕಿತ್ತು, ಅದಕ್ಕೊಂದು ರೀತಿ ಇತ್ತು, ವೇದಿಕೆ ಇತ್ತು. ಅವರಾಗಿಯೇ ಕೇಳಿದ್ರು, ಅದಕ್ಕೆ ನಾನು ಉತ್ತರ ಕೊಟ್ಟೆ. ಅದು ಬೇರೆಯವರಂತೆ ಅವಕಾಶಕ್ಕಾಗಿ ಕಾದು ಆಡಿರುವ ಮಾತುಗಳಲ್ಲ. ಅಂತಹ ಕೆಲಸವನ್ನು ನಾನು ಮಾಡುವುದೂ ಇಲ್ಲ. ಕೇಳದ ಪ್ರಶ್ನೆಗಳಿಗೆ ನಾನಾಗಿಯೇ ಉತ್ತರ ಕೊಟ್ಟಿಲ್ಲ' ಎಂದಿದ್ದಾರೆ ಕಿಚ್ಚ.
ಇತ್ತೀಚೆಗೆ ಬಿಗ್‌ಬಾಸ್ ಕಾರ್ಯಕ್ರಮ ದಿಢೀರ್ ನಿಂತಾಗ ಡಿ.ಕೆ.ಶಿವಕುಮಾರ್ ಅವರೇ ಸಮಸ್ಯೆ ಬಗೆಹರಿಸಿದ್ದರು. ಇದಕ್ಕೆ ಸುದೀಪ್ ಬಿಗ್‌ಬಾಸ್ ವೇದಿಕೆಯಲ್ಲಿ ಥ್ಯಾಂಕ್ಸ್ ಕೂಡ ಹೇಳಿದ್ರು. ಈ ಬಗ್ಗೆಯೂ ಮಾತನಾಡಿರುವ ಅವರು, 'ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅಡ್ಡಿಯಾದಾಗಲೂ ರಾತ್ರೋರಾತ್ರಿ ನನಗೆ ಸ್ಪಂದಿಸಿದರು. ನಮ್ಮಿಬ್ಬರ ಸಂಬಂಧ ಚೆನ್ನಾಗಿ ಇದ್ದಾಗ ಇದೆಲ್ಲವೂ ಸಾಧ್ಯವಾಗುತ್ತೆ. ನಾವು ಸಂಪರ್ಕ ಮಾಡುವವರ ಜೊತೆಗೆ ನಮ್ಮ ಸಂಬಂಧ ಸರಿ ಇಲ್ಲದೆ ಹೋದರೆ ಇದೆಲ್ಲ ಆಗಲ್ಲ. ಅವರೊಂದಿಗೆ ನಾವು ಚೆನ್ನಾಗಿ ಇದ್ದಾಗ, ನಮ್ಮೊಂದಿಗೆ ಅವರೂ ಚೆನ್ನಾಗಿ ಇರ್ತಾರೆ' ಎಂದಿದ್ದಾರೆ.












Click it and Unblock the Notifications