Kiccha Sudeep: ಕಿತ್ತೋಗಿರೋ ನನ್ನ ಮಕ್ಕಳಿಗೆಲ್ಲ ತಲೆ ಕೆಡಿಸಿಕೊಳ್ಳಬೇಡಿ: ಸುದೀಪ್ ಸಿಟ್ಟಾಗಿದ್ದೇಕೆ?
ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಅಭಿಮಾನಿಗಳ ಮುಂದೆ ಪ್ರತ್ಯಕ್ಷವಾಗಿ ಸರ್‌ಪ್ರೈಸ್ ನೀಡಿದ್ದರು. ಇದೇ ವೇಳೆ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟರ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುವುದು, ಅಶ್ಲೀಲ ಕಾಮೆಂಟ್ ಮಾಡುವುದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ, ಟ್ರೋಲ್ ಮಾಡುವವರ ಬಗ್ಗೆಯೂ ಕಿಚ್ಚ ನೇರವಾಗಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ತಮ್ಮ ಅಭಿಮಾನಿಗಳಿಗೆ ಸುದೀಪ್ ಮಹತ್ವದ ಸಂದೇಶ ಕೊಟ್ಟಿದ್ದಾರೆ.
ಪ್ರತಿ ವರ್ಷವೂ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಈ ಬಾರಿ ತಮ್ಮ ತಾಯಿಯ ಅಗಲಿಕೆ ಹಿನ್ನೆಲೆ ಮನೆಯ ಹತ್ತಿರ ಯಾರೂ ಬರಬೇಡಿ ಎಂದು ಸುದೀಪ್ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಹುಟ್ಟುಹಬ್ಬದ ಹಿಂದಿನ ದಿನವೇ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹೇಳಿದ್ದರು. ಅದರಂತೆ ಕಿಚ್ಚನನ್ನು ನೋಡಲು ಫ್ಯಾನ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರವೇ ಸೇರಿದ್ದರು. ಈ ವೇಳೆ ಸುದೀಪ್ ಫ್ಯಾನ್ಸ್‌ಗೆ ಕಿವಿಮಾತು ಹೇಳಿದ್ದಾರೆ.

́'ಯಾರಿಗೂ ರಿಯಾಕ್ಟ್ ಮಾಡ್ಬೇಡಿ'
'ಒಂದೇ ಒಂದು ಮಾತು ಕೇಳಿಸ್ಕೊಳ್ಳಿ. ನೀವೆಲ್ಲ ನನ್ನ ತುಂಬಾ ಪ್ರೀತಿ ಮಾಡ್ತೀರಿ ಅಂತಾ ಗೊತ್ತು. ಆನ್‌ಲೈನ್‌ನಲ್ಲಿ ಯಾರೇ ಯಾವುದೇ ಪೇಜ್‌ನಿಂದ ನನಗೆ ಎಷ್ಟೇ ಕೆಟ್ಟದಾಗಿ ಬೈದರೂ ಯಾರೂ ರಿಯಾಕ್ಟ್ ಮಾಡಬೇಡಿ. ನಮ್ಮ ಅಫೀಶಿಯಲ್ ಫ್ಯಾನ್ ಪೇಜ್‌ಗಳಿಂದಲೂ ಅಷ್ಟೇ, ಯಾವ ಕಲಾವಿದರಿಗೂ ಅವಮಾನ ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ.
'ನೀವೆಲ್ಲ ಇಷ್ಟು ಪ್ರೀತಿಸೋ ಈ ಕಿಚ್ಚನಿಗೆ ಯಾವುದೇ ರೀತಿಯ ಅವಮಾನ ಆದ್ರೂ ತಡೆದುಕೊಳ್ಳೋ ಶಕ್ತಿ ಇದೆ. ಅವಮಾನಗಳಿಂದ ನಾನು ಯಾವತ್ತೂ ಬಿದ್ದಿಲ್ಲ, ಹೊಗಳಿಕೆಯಿಂದ ಯಾವತ್ತೂ ಎದ್ದಿಲ್ಲ, ನಮ್ಮ ಸಿನಿಮಾ ಅಷ್ಟೇ ನಮ್ಮ ಆಸ್ತಿ. ಹಾಗಾಗಿ ಯಾವ ಪೇಜ್‌ಗಳಿಗೂ ತಲೆಬಾಗಬೇಡಿ. ಯಾವ ಅವಮಾನಕ್ಕೂ ತಲೆ ಹಾಕಬೇಡಿ. ನಿಮಗೆ ನಿಜವಾಗಿಯೂ ಆ ಫೋನ್ ತಗೊಂಡು ಏನಾದ್ರೂ ಮಾಡಲೇಬೇಕು ಅಂತಿದ್ರೆ ಒಂದೆರಡು ಒಳ್ಳೆಯ ಕೆಲಸ ಮಾಡಿ' ಎಂದಿದ್ದಾರೆ.
'ಯಾರ್ ಯಾರೋ ಕಿತ್ತೋಗಿರೋ ನನ್ನ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಫ್ಯಾನ್ಸ್‌ಗೆ ಕಿವಿಮಾತು ಹೇಳಿದ್ದಾರೆ. ನೀವೇನು ಮಾಡ್ತೀರೋ ನಿಮ್ಮ ಮನೆಯಲ್ಲಿರೋ ಮಕ್ಕಳೂ ಅದನ್ನೇ ಕಲಿಯೋದು. ಒಳ್ಳೆಯದನ್ನಷ್ಟೇ ಮಾಡಿ, ನಾನು ಯಾರ ಬಗ್ಗೆನೂ ತಲೆಕೆಡಿಸಿಕೊಳ್ಳಲ್ಲ. ನೀವು ಯಾಕೆ ತಲೆ ಕೆಡಿಸಿಕೊಳ್ತಿದ್ದೀರ?' ಎಂದು ಅಭಿಮಾನಿಗಳಿಗೆ ಕಿಚ್ಚ ಹೇಳಿದ್ದಾರೆ.
ಕೆಲ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಕೊಳಕು ಭಾಷೆಯಲ್ಲಿ ಕಾಮೆಂಟ್ ಮಾಡುವುದು, ಟ್ರೋಲ್ ಮಾಡುವುದು, ಅಶ್ಲೀಲ ಪದಗಳಿಂದ ನಿಂದಿಸುವುದು ಹೆಚ್ಚಾಗಿತ್ತು. ಇದಕ್ಕೆ ಸುದೀಪ್ ಫ್ಯಾನ್ಸ್ ಕೂಡ ಕೌಂಟರ್ ಕೊಡುತ್ತಿದ್ದರು. ಬೇರೆ ನಟರ ಅಭಿಮಾನಿಗಳ ಹೆಸರಲ್ಲಿ ಸುದೀಪ್ ಅವರಿಗೆ ಅವಮಾನವಾಗುವಂತೆ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಅವರು ಮಾಡಿದ್ದನ್ನೇ ನೀವೂ ಮಾಡಬೇಡಿ ಎಂದು ಕಿಚ್ಚ ಸುದೀಪ್ ಬುದ್ಧಿಮಾತು ಹೇಳಿದ್ದಾರೆ.












Click it and Unblock the Notifications