ಕಾಶ್ಮೀರ ಭಯೋತ್ಪಾದಕ ದಾಳಿ: ಭಾರತದ ವಿರುದ್ಧ ಬರೆದ ಬರಹವನ್ನು ಮೆಚ್ಚಿಕೊಂಡ ನಟಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಿಂದಾಗಿ ಇಡೀ ಭಾರತ ದೇಶವೇ ಆಕ್ರೋಶಗೊಂಡಿದೆ. ಅಮಾಯಕ ಪ್ರವಾಸಿಗರನ್ನು ಕೊಂದ ಪಾಕ್ ಪಾಪಿಗಳನ್ನು ಸದೆಬಡೆಯಲೇಬೇಕು ಅನ್ನೋ ಕೂಗು ಜೋರಾಗಿದೆ. ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವಂತೆ ಒತ್ತಡ ಹೆಚ್ಚಾಗಿದೆ. ಇತ್ತ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಉಗ್ರರನ್ನು ಹೊಸೆದು ಹಾಕಲು ಸಂಚು ರೂಪಿಸುತ್ತಿದೆ. ಇದೆಲ್ಲದರ ನಡುವೆ ಭಾರತದ ವಿರುದ್ಧ ಬರೆದ ಬರಹವೊಂದನ್ನ ನಟಿಯೊಬ್ಬರು ಮೆಚ್ಚಿಕೊಂಡಿದ್ದಾರೆ.
ಹೌದು ಏಪ್ರಿಲ್ 22ರಂದು ಪಹಲ್ಗಾಮ್ ವೀಕ್ಷಣೆಗೆ ಬಂದ ಪ್ರವಾಸಿಗರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ನೋಡ ನೋಡುತ್ತಿದ್ದಂತೆ ಪ್ರವಾಸಿಗರ ಪ್ರಾಣ ತೆಗೆದು ಅಟ್ಟಹಾರ ಮೆರೆದಿದ್ದಾರೆ. ಪುಟ್ಟ ಮಕ್ಕಳು, ಪತ್ನಿ, ಪೋಷಕರ ಮುಂದೆ ಪುರುಷರ ಮೇಲೆ ಗುಂಡು ಹಾರಿಸಿ ಕೇಕೆ ಹಾಕಿದ್ದಾರೆ.

ನಮ್ಮನ್ನು ಏನೂ ಮಾಡಬೇಡಿ ಬಿಟ್ಟುಬಿಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಬಿಟ್ಟಿಲ್ಲ. ಕಂಡಕಂಡಲ್ಲಿ ಗುಂಡು ಹಾರಿಸಿ ಪ್ರಾಣ ತೆಗೆದಿದ್ದಾರೆ ಪಾಕ್ ಉಗ್ರ ಕ್ರೂರಿಗಳು. ಈ ಘಟನೆ ಇಡೀ ದೇಶವನ್ನೇ ಕೆರಳಿಸಿದೆ. ನೀವು ಉಗ್ರರನ್ನು ಸದೆಬಡಿಯಿರಿ ಇಲ್ಲ ನಮ್ಮನ್ನು ಗಡಿಯಲ್ಲಿ ಬಿಡಿ ಎಂದು ಭಾರತೀಯರು ಸೇನೆ ಹಾಗೂ ಕೇಂದ್ರ ಸರ್ಕಾರವನ್ನು ಕೇಳ ತೊಡಗಿದ್ದಾರೆ. ಇದು ಭಾರತೀಯ ಸೇನೆಯ ತಾಳ್ಮೆ, ಶಕ್ತಿ ಹಾಗೂ ಸಾಮಾರ್ಥವನ್ನು ಪ್ರಶ್ನೆ ಮಾಡಿದಂತಿದೆ. ಹೀಗಾಗಿ ಇಷ್ಟರಲ್ಲೇ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತೀಯ ಸೇನೆ ಸಂಚು ರೂಪಿಸುತ್ತಿದೆ.
ಈ ಘಟನೆ ಕ್ರೀಡಾಪಟುಗಳು, ರಾಜಕೀಯ ಗಣ್ಯರು, ಸಿನಿ ತಾರೆಯರು ಸೇರಿದಂತೆ ಎಲ್ಲಾ ಕ್ಷೇತ್ರದ ವರ್ಗದವರು ಕೂಡ ರೊಚ್ಚಿಗೇಳುವಂತೆ ಮಾಡಿದೆ. ಹೀಗಿರುವಾಗ ಓರ್ವ ನಟಿ ಭಾರತದ ವಿರುದ್ಧ ಬರೆದ ಬರಹವೊಂದನ್ನು ಮೆಚ್ಚಿಕೊಂಡು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ?

ತೆಲುಗಿನ ಮುಖ ಚಿತ್ರಂ ಮೂಲಕ ಚಿತ್ರರಂಗಕ್ಕೆ ಬಂದ ಮುಂಬೈನ ಚೆಲುವೆ ಆಯೇಶಾ ಖಾನ್ ಭಾರತದ ವಿರುದ್ಧ ಬರೆದ ಬರಹವನ್ನು ಮೆಚ್ಚಿಕೊಂಡಿದ್ದಾರೆ. ಇವರು ಓಂ ಭೀಮ್ ಬುಷ್ ಹಾಗೂ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭಾರತದಲ್ಲಿ ಇದ್ದಕೊಂಡು ಕಾಶ್ಮೀರದಲ್ಲಿ ಭಾರತೀಯರಿಗೆ ಪ್ರವೇಶ ಇಲ್ಲ ಎಂದು ಬರೆಯಲಾಗಿದ್ದ ಬರಹವನ್ನು ಮೆಚ್ಚಿಕೊಂಡು ವಿವಾದಕ್ಕೀಡಾಗಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲದೆ ಆಯೇಷಾ ಬಿಗ್‌ಬಾಸ್ ಸೀಸನ್ 17ರಲ್ಲಿ ಕೂಡ ಕಾಣಿಸಿಕೊಂಡಿದ್ದರು. ಅಷ್ಟಕ್ಕೂ ಆಯೇಷಾ ಹೀಗೆ ಹೇಳಿದ್ದು ಯಾಕೆ?
ಕಾಶ್ಮೀರಿ ಕವಿ ಮತ್ತು ಲೇಖಕ ಜಲೀಸ್ ಹೈದರ್ ಪಹಲ್ಗಾಮ್ ದಾಳಿಯ ನಂತರ ಒಂದು ಪೋಸ್ಟ್ ಅನ್ನು ಹಾಕಿದ್ದಾರೆ. ಆ ಲೇಖನದಲ್ಲಿ ನಾನು ಕೆಲವೊಂದು ಸತ್ಯವನ್ನು ಮಾತನಾಡಲೇಬೇಕು ಎಂದು ಬರೆದುಕೊಂಡಿದ್ದಾರೆ. ಕಾಶ್ಮೀರದ ಪಹಲ್ಗಾಮ್ ಅನ್ನು ಪಿಕ್‌ನಿಕ್ ಸ್ಪಾಟ್ ಎಂದು ಎಲ್ಲರೂ ಕೂಡ ಭಾವಿಸುತ್ತಾರೆ. ಆದರೆ ಅದು ಬಿಕ್‌ನಿಕ್ ಸ್ಪಾಟ್ ಅಲ್ಲ. ಬದಲಿಗೆ ಅದು ಮಿಲಿಟರಿ ಪ್ರದೇಶ. ಇಲ್ಲಿ ಇದ್ದವರೇ ಶಾಂತಿಯಿಂದ ಬದುಕಲು ಆಗುತ್ತಿಲ್ಲ. ಹಿಂಸಾಚಾರ, ನಿರಂತರ ಬೆದರಿಕೆ ಮತ್ತು ಕಣ್ಗಾವಲಿನಲ್ಲಿ ಬದುಕುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸತ್ಯವನ್ನು ಒಪ್ಪಿಕೊಳ್ಳದೇ ಈ ಭೂಮಿಯನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಸುಳ್ಳು ಹೇಳಲಾಗುತ್ತಿದೆ. ಇಲ್ಲಿ ತೆಗೆಸಿಕೊಳ್ಳುವ ಒಂದೊಂದು ಫೋಟೋ ಕೂಡ ಹಿಂಸೆಯ ರೂಪವಾಗಿದೆ. ನಮ್ಮ ತಾಯ್ನಾಡನ್ನು ನಿಮ್ಮ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ನಿಮಗೆ ಸ್ವಾಗತ ಇಲ್ಲ. ಭಾರತೀಯರಿಗೆ ಕಾಶ್ಮೀರಕ್ಕೆ ಪ್ರವೇಶ ಇಲ್ಲ ಎಂದು ಜಲೀಸ್ ಹೈದರ್ ಬರೆದುಕೊಂಡಿದ್ದಾರೆ.
ಇದೀಗ ಈ ಲೇಖನವನ್ನು ನಟಿ ಆಯೇಷಾ ಮೆಚ್ಚಿಕೊಂಡ ವಿವಾದಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಯೇಷಾ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ನಿಮಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಅಲ್ಲಿಗೆ ಹೋಗಿ ವಾಸ ಮಾಡಿ ಎಂದು ಕೆಲವರು ಸಲಹೆಗಳನ್ನು ನೀಡುತ್ತಿದ್ದಾರೆ.
ನಮ್ಮ ದೇಶದಲ್ಲಿ ನೆಲೆಸಿ, ನಮ್ಮ ದೇಶದ ಅನ್ನ ತಿಂದು, ನಮ್ಮ ದೇಶಕ್ಕೆ ವಿರುದ್ಧವಾಗಿ ಮಾತನಾಡುವವರ ಪರ ಮಾತನಾಡುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಆದರೆ ಆಯೇಷಾ ಇದ್ಯಾವುದಕ್ಕೂ ಉತ್ತರ ನೀಡಿಲ್ಲ. ಮುಂದೆ ಇದಕ್ಕೆ ಪ್ರತಿಕ್ರಿಯೆ ನೀಡ್ತಾರಾ ಕಾದು ನೋಡಬೇಕಿದೆ.












Click it and Unblock the Notifications