'ಸೋನು ನಿಗಮ್ ಹಾಡಿರೋ ಯಾವ ಸಿನಿಮಾ ಕೂಡ ರಿಲೀಸ್ ಆಗಲ್ಲ'
ಕನ್ನಡ ಹಾಡು ಕೇಳಿದ್ದಕ್ಕೆ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿರುವ ಗಾಯಕ ಸೋನು ನಿಗಮ್ ಅವರನ್ನು ಬಂಧಿಸಬೇಕು ಎಂದು ಎಲ್ಲೆಡೆ ಒತ್ತಾಯ ಕೇಳಿಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಕೂಡ ಸೋನು ನಿಗಮ್ ಬಂಧನಕ್ಕೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿರುವ ಸೋನು ನಿಗಮ್ ಅವರನ್ನ ಕನ್ನಡದಿಂದಲೇ ಬ್ಯಾನ್ ಮಾಡಬೇಕು. ಕನ್ನಡ ಸಿನಿಮಾಗಳಲ್ಲಿ ಇನ್ನು ಅವರು ಹಾಡಬಾರದು ಎಂದು ಚಿತ್ರರಂಗಕ್ಕೆ, ಸಂಗೀತ ನಿರ್ದೇಶಕರಿಗೂ ಖಡಕ್ ಎಚ್ಚರಿಕೆ ಕೊಡಲಾಗಿದೆ.
ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶೀಘ್ರವೇ ಸೋನು ನಿಗಮ್ ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ಇದಕ್ಕೇನೇ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದು ಎಂದಿದ್ದಾನೆ. ಕರ್ನಾಟಕ ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ, ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗಲು ಸಾಧ್ಯ? ಕನ್ನಡದ ಅನ್ನ ತಿಂದು ಕೊಬ್ಬಿರುವ ಇವನು ಅದು ಹೇಗೆ ಕರ್ನಾಟಕದಲ್ಲಿ ಇನ್ಮುದೆ ಕಾರ್ಯಕ್ರಮಗಳನ್ನು ನಡೆಸುತ್ತಾನೆ ನೋಡೋಣ ಎಂದು ಸವಾಲ್ ಹಾಕಿದ್ದಾರೆ. ಕರ್ನಾಟಕದ ಯಾವ ನಿರ್ಮಾಪಕರೂ ಸೋನು ನಿಗಮ್‌ನಿಂದ ಹಾಡಿಸಬಾರದು. ಯಾವ ಸಂಸ್ಥೆಗಳು ಕೂಡ ಇವನ ಶೋ ನಡೆಸಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರಿಗೆ ಪಾಠ ಕಲಿಸುತ್ತೇವೆ̤ ಸೋನು ನಿಗಮ್ ಹಾಡಿರೋ ಯಾವ ಸಿನಿಮಾ ಕೂಡ ರಿಲೀಸ್ ಆಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸೋನು ನಿಗಮ್ ಕೊಟ್ಟಿರುವ ಹೇಳಿಕೆ ಕೇವಲ ಕನ್ನಡಿಗರನ್ನು ಕೀಳಾಗಿ ಕಂಡಿರುವುದಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ವಿಲನ್‌ಗಳಂತೆ ಮಾಡುವ ಹುನ್ನಾರ ಹೊಂದಿದೆ. ಹೀಗಾಗಿ ಅವನ ಮೇಲೆ ಈ ಕೂಡಲೇ ದೂರು ದಾಖಲಾಗಿ ಬಂಧನವಾಗಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಇಂತಹವರನ್ನ ಕರ್ನಾಟಕದ ನೆಲದಲ್ಲಿ ಅನ್ನ ಹಾಕಿ ಸಾಕುವುದನ್ನು ಇನ್ನು ಮುಂದಾದರೂ ನಾವು ಕೈಬಿಡಬೇಕು ಎಂದಿದ್ದಾರೆ.

ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ ಮತ್ತೊಂದು ಹುಳು ಸೋನು ನಿಗಮ್‌ನನ್ನು ಕನ್ನಡ ಚಿತ್ರರಂಗ ಮತ್ತು ಕರ್ನಾಟಕಕ್ಕೆ ನಿರ್ಬಂಧಿಸಬೇಕು ಮತ್ತು ಆತನ ವಿರುದ್ಧ ಕನ್ನಡಿಗರು ದಾಖಲಿಸಿರುವ ದೂರಿನ ಆಧಾರದ ಮೇಲೆ ಕೂಡಲೇ ಆತನನ್ನು ಬಂಧಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕೂಡ ಆಗ್ರಹಿಸಿದೆ. ಸೋನು ನಿಗಮ್ ಭಾವಚಿತ್ರಕ್ಕೆ ಮಸಿ ಬಳಿಯುವ ಮೂಲಕ ಆಕ್ರೋಶ ಹೊರಹಾಕಿದೆ.
ಏನಿದು ವಿವಾದ?: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಕಾರ್ಯಕ್ರಮದಲ್ಲಿ ಸೋನು ನಿಗಮ್ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಕನ್ನಡಿಗರು ಕನ್ನಡ ಹಾಡು ಹಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಕೋಪಗೊಂಡಿದ್ದ ಸೋನು ನಿಗಮ್ ಇದೇ ಕಾರಣಕ್ಕೆ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಾಗಿದ್ದು ಎಂದಿದ್ದರು. ಈ ವಿಡಿಯೋ ವೈರಲ್ ಆಗಿ ಗಾಯಕನ ವಿರುದ್ಧ ಖಂಡನೆ ವ್ಯಕ್ತವಾಗಿದೆ. ಬಳಿಕ ಮತ್ತೊಂದು ವಿಡಿಯೋದಲ್ಲಿ ಸ್ಪಷ್ಟನೆ ನೀಡಿರುವ ಸೋನು ನಿಗಮ್ ಅದರಲ್ಲೂ ಕನ್ನಡಿಗರನ್ನು ಕೆಣಕುವಂತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಕನ್ನಡದಿಂದ ಅವರನ್ನು ಬ್ಯಾನ್ ಮಾಡಬೇಕು ಹಾಗೂ ಬಂಧಿಸಬೇಕು ಎಂದು ಕನ್ನಡಿಗರು ಪಟ್ಟು ಹಿಡಿದಿದ್ದಾರೆ.












Click it and Unblock the Notifications