ನಿಶ್ಚಿತಾರ್ಥಕ್ಕೂ ಮುನ್ನ ಬ್ರೇಕಪ್ ಮಾಡಿಕೊಂಡ ವೈಷ್ಣವಿ ಗೌಡ, ಆ ಶಾಕ್‌ನಿಂದ ಹೊರಬಂದಿದ್ದೇಗೆ?
ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರಲು ಸಜ್ಜಾಗಿದ್ದು, ಅನುಕೂಲ್ ಮಿಶ್ರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಸರ್‌ಪ್ರೈಸ್ ನೀಡಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆಮಾತಾಗಿರುವ ವೈಷ್ಣವಿ ಅವರು ಸದ್ಯ ಸೀತಾರಾಮ ಸೀರಿಯಲ್‌ನಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆಯೇ ಸದ್ದಿಲ್ಲದೆ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಎಲ್ಲರಿಗೂ ಶಾಕ್ ನೀಡಿದ್ದಾರೆ. ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಈ ಜೋಡಿಗೆ ಶುಭಕೋರುತ್ತಿದ್ದಾರೆ. ಮತ್ತೊಂದೆಡೆ ಈ ಹಿಂದೆಯೂ ಮದುವೆಗೆ ಸಜ್ಜಾಗಿದ್ದ ವೈಷ್ಣವಿ ಅವರ ಬದುಕಿನಲ್ಲಿ ನಡೆದಿದ್ದ ಕಹಿ ದುರಂತದ ಬಗ್ಗೆ ಈಗ ಮತ್ತೆ ಚರ್ಚೆಯಾಗುತ್ತಿದೆ.
ಬಿಗ್‌ಬಾಸ್‌ನಲ್ಲೂ ಮಿಂಚಿದ್ದ ನಟಿ ವೈಷ್ಣವಿ ಗೌಡ ಅವರು ಮದುವೆ ಬಗ್ಗೆ ದೊಡ್ಡ ಕನಸುಗಳನ್ನು ಬಿಚ್ಚಿಟ್ಟಿದ್ದರು. ಮೂರು ವರ್ಷಗಳ ಹಿಂದೆ ಅವರ ಮದುವೆ ಕೂಡ ಫಿಕ್ಸ್ ಆಗಿತ್ತು. ವ್ಯಕ್ತಿಯೊಬ್ಬರ ಜೊತೆ ಮದುವೆ ಮಾತುಕತೆ ನಡೆದು, ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಹೂವು ಮುಡಿಸುವ ಶಾಸ್ತ್ರ ಕೂಡ ನೆರವೇರಿತ್ತು. ಇನ್ನೇನು ನಿಶ್ಚಿತಾರ್ಥ, ಮದುವೆ ಎನ್ನುವಷ್ಟರಲ್ಲಿ ವೈಷ್ಣವಿ ಬದುಕಲ್ಲಿ ಕಹಿ ಘಟನೆಯೊಂದು ನಡೆದೇ ಹೋಗಿತ್ತು. ಈ ವಿಚಾರದಿಂದ ಅವರು ಬಹಳ ನೊಂದಿದ್ದರು.

ನಟ ವಿದ್ಯಾಭರಣ್ ಅವರೊಂದಿಗೆ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದಿತ್ತು. 2016ರಲ್ಲಿ ಚಾಕ್ಲೆಟ್ ಬಾಯ್ ಸಿನಿಮಾ ಶೂಟಿಂಗ್ ಮಾಡುವಾಗ ವೈಷ್ಣವಿ ವಿದ್ಯಾಭರಣ್ ನಡುವೆ ಪರಿಚಯವಾಗಿತ್ತು. ಇಬ್ಬರೂ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ವೈರಲ್ ಆದ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ಹಾರ ಬದಲಿಸಿಕೊಂಡು ಸಂಭ್ರಮದಿಂದ ಸಿಹಿ ತಿನ್ನಿಸಿದ್ದರು. ಹಾಗಾಗಿ ವೈಷ್ಣವಿ ಅವರ ನಿಶ್ಚಿತಾರ್ಥ ನಡೆದೇ ಹೋಯ್ತು ಎಂದೇ ಎಲ್ಲರೂ ಭಾವಿಸಿದ್ದರು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವೈಷ್ಣವಿ ಅದು ನಿಶ್ಚಿತಾರ್ಥವಲ್ಲ, ಹಣ್ಣು ಕಾಯಿ ಇಡುವ ಶಾಸ್ತ್ರ ಮಾತ್ರ ಎಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಸಂಬಂಧ ಮುರಿದುಬಿದ್ದಿತ್ತು.

ವೈಷ್ಣವಿ ಗೌಡ ಅವರ ಈ ಮದುವೆ ಶಾಸ್ತ್ರದ ಫೋಟೋಗಳು ವೈರಲ್ ಆದ ಬಳಿಕ ಯುವತಿಯೊಬ್ಬರು ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಇದರಲ್ಲಿ ಆ ಯುವತಿಯು ನಟ ವಿದ್ಯಾಭರಣ್ ಅವರ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದರು. ಇದು ಕೂಡ ಎಲ್ಲೆಡೆ ಹರಿದಾಡಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತು. ಬಳಿಕ ವಿದ್ಯಾಭರಣ್ ಜೊತೆ ಬ್ರೇಕಪ್ ಮಾಡಿಕೊಂಡು, ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದರು. ಈ ಘಟನೆ ಬಳಿಕ ವೈಷ್ಣವಿ ಗೌಡ ಅವರು ತುಂಬಾ ನೊಂದಿದ್ದರು. ದಿನ ಕಳೆದಂತೆ ಅವರು ಈ ನೋವಿನಿಂದ ಹೊರಬಂದು ಇದೀಗ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈಷ್ಣವಿ ಅವರು ಈಗ ಅನುಕೂಲ್ ಮಿಶ್ರಾ ಎಂಬುವವರನ್ನು ಮದುವೆಯಾಗಲು ನಿರ್ಧರಿಸಿದ್ದು, ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಅನುಕೂಲ್ ಮಿಶ್ರಾ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಮೂಲತಃ ಉತ್ತರ ಪ್ರದೇಶದವರು ಎಂದು ಹೇಳಲಾಗಿದೆ. ಅನುಕೂಲ್ ಅವರಿಗೆ ಕನ್ನಡ ಅಷ್ಟಾಗಿ ಗೊತ್ತಿಲ್ಲ, ಆದರೂ ಭಾವಿ ಪತ್ನಿಗಾಗಿ ಕನ್ನಡ ಕಲಿಯಲು ಪ್ರಯತ್ನಿಸಿದ್ದಾರೆ. ಹಿಂದಿ, ಇಂಗ್ಲಿಷ್ ಮಾತನಾಡುವ ಅನುಕೂಲ್ ಮುಂದಿನ ದಿನಗಳಲ್ಲಿ ವೈಷ್ಣವಿ ಜೊತೆಗೆ ವ್ಲಾಗ್ ಕೂಡ ಮಾಡಲಿದ್ದಾರೆ ಎನ್ನಲಾಗಿದೆ.












Click it and Unblock the Notifications