Oscars 2025: ಆಸ್ಕರ್ ಅಂಗಳಕ್ಕೆ ಕನ್ನಡ ಕಿರುಚಿತ್ರ
ಕನ್ನಡ ಸಿನಿಮಾರಂಗ ಸದ್ಯ ಸಂಕಷ್ಟದ ದಿನಗಳಲ್ಲಿದೆ. ಈ ವರ್ಷ ಹೇಳಿಕೊಳ್ಳುವಂತ ಮೆಗಾ ಹಿಟ್ ಸಿನಿಮಾ ಬರದೇ ಇರುವುದು, ಪರಭಾಷಾ ಸಿನಿಮಾಗಳ ಹಾವಳಿ, ದರ್ಶನ್ ಬಂಧನ ಸೇರಿದಂತೆ ಹಲವು ಸಮಸ್ಯೆಗಳು ಕನ್ನಡ ಚಿತ್ರರಂಗವನ್ನು ಬಾಧಿಸಿವೆ. ಇದೆಲ್ಲದರ ನಡುವೆ ಕನ್ನಡ ಸಿನಿಮಾ ಪ್ರೇಮಿಗಳು, ಕನ್ನಡಿಗರು ಹೆಮ್ಮೆ ಪಡುವ ಸುದ್ದಿಯೊಂದು ಸಿಕ್ಕಿದೆ. ಕನ್ನಡದ ಕಿರುಚಿತ್ರವೊಂದು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ.
ಚಿದಾನಂದ ಎಸ್ ನಾಯಕ್ ನಿರ್ದೇಶಿಸಿರುವ ಕನ್ನಡ ಕಿರುಚಿತ್ರ ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿತ್ತು (Sunflowers Were the First Ones to Know) ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ 2025 ಗೆ ಅರ್ಹತೆ ಪಡೆದಿದೆ. ಚಿದಾನಂದ ಎಸ್ ನಾಯಕ್ ಅಧ್ಯಯನ ಮಾಡಿದ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿಯ ಗರಿ
ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿತ್ತು ಕಿರುಚಿತ್ರ ಈ ವರ್ಷದ ಆರಂಭದಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್‌ನ ಲಾ ಸಿನೆಫ್ ಸೆಲೆಕ್ಷನ್‌ನಲ್ಲಿ ಮೊದಲ ಬಹುಮಾನ ಗೆದ್ದುಕೊಂಡಾಗ ಸಾಕಷ್ಟು ಸುದ್ದಿ ಮಾಡಿತ್ತು. ಭಾರತೀಯ ಜಾನಪದ ಕಥೆಗಳು ಮತ್ತು ಸಂಪ್ರದಾಯಗಳ ಕುರಿತಾದ ಈ ಕಿರುಚಿತ್ರವು 16 ನಿಮಿಷಗಳ ಅವಧಿಯದ್ದಾಗಿದೆ. ಈ ಕಿರುಚಿತ್ರಕ್ಕೆ ಚಿತ್ರದ ತಂಡದಲ್ಲಿ ಸೂರಜ್ ಠಾಕೂರ್ ಛಾಯಾಗ್ರಾಹಣವಿದ್ದು, ಮನೋಜ್ ವಿ ಸಂಕಲನ ಮತ್ತು ಅಭಿಷೇಕ್ ಕದಮ್ ಧ್ವನಿ ವಿನ್ಯಾಸ ಮಾಡಿದ್ದಾರೆ. ಕಾನ್‌ನ ಲಾ ಸಿನೆಫ್ ಜ್ಯೂರಿಯು ಚಲನಚಿತ್ರವನ್ನು ಕಿರು ಚಿತ್ರದ ಕಥೆ ಹೇಳುವಿಕೆ ಮತ್ತು ಅತ್ತುತ್ತಮ ನಿರ್ದೇಶನಕ್ಕಾಗಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿತ್ತು.
ತಮ್ಮ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಸ್ಪರ್ಧೆಗೆ ಆಯ್ಕೆಯಾದ ಬೆನ್ನಲ್ಲೇ ಪತ್ರಿಕಾ ಹೇಳಿಕೆ ನೀಡಿರುವ ನಿರ್ದೇಶಕ ಚಿದಾನಂದ್, "ನನಗೆ ನೆನಪಿರುವವರೆಗೂ ಈ ಕಥೆಯನ್ನು ಹೇಳಬೇಕು ಎನ್ನುವುದು ಆಸೆಯಾಗಿದೆ. ನಮ್ಮ ಗುರಿ ಈ ಕಥೆಗಳನ್ನು ಕೇಳುವ ಅನುಭವವನ್ನು ಮರುಸೃಷ್ಠಿಸುವುದಷ್ಟೇ ಅಲ್ಲದೆ, ಅವುಗಳನ್ನು ಪ್ರಾಮಾಣಿಕವಾಗಿ ಬದುಕುವ ಅನುಭವಾಗಿದೆ, ಇದು ಜಗತ್ತಿನಾದ್ಯಂತ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಸ್ಪರ್ಧಾತ್ಮಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಈಗ ವಿಶ್ವದ ಅತ್ಯುತ್ತಮ ಕಿರುಚಿತ್ರಗಳ ಜೊತೆಗೆ ಸ್ಪರ್ಧಿಸಲಿದೆ.












Click it and Unblock the Notifications