Nayana Nagaraj: ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಗಿಣಿರಾಮ'ನ ಬೆಡಗಿ ನಯನಾ ನಾಗರಾಜ್, ವಿಡಿಯೋ ನೋಡಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿಣಿರಾಮ' ಸೀರಿಯಲ್ ಮೂಲಕ 'ಮಹತಿ' ಎಂದು ಖ್ಯಾತರಾದ ನಟಿ ನಯನಾ ನಾಗರಾಜ್. ನಯನಾ ನಾಗರಾಜ್ ಈಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಬಹುಕಾಲದ ಗೆಳೆಯನನ್ನು ವರಿಸಲಿದ್ದಾರೆ ಕನ್ನಡ ಕಿರುತೆರೆಯ 'ಮಹತಿ'.
ನಟಿ ನಯನಾ ನಾಗರಾಜ್ ಕಿರುತೆರೆಯಲ್ಲಿ ಪಾಪ ಪಾಂಡು, ಗಿಣಿರಾಮ ಧಾರಾವಾಹಿಗಳಿಂದ ಹೆಸರು ಮಾಡಿದವರು. ಉತ್ತಮ ಗಾಯಕಿಯಾಗಿಯೂ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದು, ತಮ್ಮ ಹತ್ತು ವರ್ಷಗಳಿಂದ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ತಯಾರಿ ನಡೆಸಿದ್ದಾರೆ. ಹೀಗಾಗಿ ಮನೆಯಲ್ಲಿಯೇ ತುಂಬಾ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಗಿಣಿರಾಮನ ಬೆಡಗಿಯ ನಿಶ್ಚಿತಾರ್ಥ
ನಟಿ ನಯನಾ ನಾಗರಾಜ್ ಅವರು ಸುಹಾಸ್ ಶಿವಣ್ಣ ಎಂಬುವವರನ್ನು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ದಶಕದ ಪ್ರೀತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸಿರುವ ನಟಿ ನಯನಾ ನಾಗರಾಜ್ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬದವರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ.
"ಒಂದು ದಶಕದ ಪ್ರೀತಿ, ನಗು ಮತ್ತು ಒಂದಷ್ಟು ಪ್ರಶ್ನೆಗಳು.... ನಮ್ಮ ರಿಲೇಷನ್ಶಿಪ್ನಲ್ಲಿ ಇನ್ನೊಂದು ಹಂತಕ್ಕೆ ಹೋಗುವ ಬಟನ್ ಒತ್ತಲು ನಾವಿಬ್ಬರೂ ರೆಡಿಯಾಗಿದ್ದೇವೆ" ಎಂದು ನಟಿ ನಯನಾ ನಾಗರಾಜ್ ಅವರು ತಮ್ಮ ಎಂಗೇಜ್‌ಮೆಂಟ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ನಯನಾ ನಾಗರಾಜ್ ಅವರ ನಿಶ್ಚಿತಾರ್ಥದ ವಿಡಿಯೋ ಈಗ ಸಕತ್ ವೈರಲ್ ಆಗಿದ್ದು, ಅಭಿಮಾನಿಗಳು ನೆಚ್ಚಿನ ನಟಿಯ ಮುಂದಿನ ಬದುಕಿಗೆ ಶುಭ ಹಾರೈಸಿದ್ದಾರೆ.
ಮನೆಯಲ್ಲಿಯೇ ಶಾಸ್ತ್ರೋಕ್ತವಾಗಿ ಹೂ ಮುಡಿಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ನೆರವೇರಿರುವುದನ್ನು ಕಾಣಬಹುದು. ಈ ಸುಂದರ ಕಾರ್ಯಕ್ರಮದಲ್ಲಿ ನಟಿ ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದಾರೆ. ಹಸಿರು ನೀಲಿ ಬಣ್ಣದ ಸೀರೆ, ಕೈಗೆ ಕೆಲವೇ ಕೆಲವು ಹಸಿರು ಬಳೆಗಳು, ಕೊರಳಿಗೆ ಚಿಕ್ಕ ಸರ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವರ ಸುಹಾಸ್ ಶಿವಣ್ಣ ಕೂಡ ತುಂಬಾ ಸಿಂಪಲ್ ಆಗಿ ಪ್ಯಾಟು ಶರ್ಟ್ ಧರಿಸಿದ್ದಾರೆ. ಇಬ್ಬರ ಮುಖದಲ್ಲಿ ನಗು ಉಕ್ಕಿ ಹರಿಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
ಇನ್ನು, ನಯನಾ ನಾಗರಾಜ್ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡ ಕೇವಲ ಒಂದು ದಿನದಲ್ಲೇ ಒಂದೂವರೆ ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಸುಮಾರು 95 ಸಾವಿರ ಮಂದಿ ವಿಡಿಯೋಗೆ ಲೈಕ್ ಒತ್ತಿದ್ದಾರೆ. ನಟಿ ಅಂಕಿತಾ ಅಮರ್, ಚಂದನ, ಅಶ್ವಿತಿ ಶೆಟ್ಟಿ, ನಟ ಸಾಗರ ಬಿಳಿಗೌಡ ಸೇರಿದಂತೆ ನಯನಾ ಅವರ ಅಭಿಮಾನಿಗಳು ಶುಭ ಕೋರಿದ್ದಾರೆ.












Click it and Unblock the Notifications