'3 ವರ್ಷ ಇದ್ದಾಗ ಅಪ್ಪ-ಅಮ್ಮ ದೂರಾದ್ರು': ಮತ್ತೆ ತಾಯಿ ಮಡಿಲು ಸೇರಿದ್ದೇಗೆ ದೀಪಿಕಾ ದಾಸ್
ಕನ್ನಡ ಕಿರುತೆರೆಯ ನಟಿಯಾಗಿದ್ದ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಇದೀಗ #ಪಾರು ಪಾರ್ವತಿ ಸಿನಿಮಾದಲ್ಲಿ ನಾಯಕಿ ನಟಿಯಾಗುವ ಮೂಲಕ ಕನ್ನಡದ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ತುಂಬಾ ಸ್ಟ್ರಾಂಗ್ ವ್ಯಕ್ತಿತ್ವದಂತೆ ಕಾಣುವ ದೀಪಿಕಾ ದಾಸ್ ಜೀವನದಲ್ಲಿಯೂ ಕೆಲವು ನೋವಿನ ವಿಚಾರಗಳಿವೆ. ಇದೀಗ ಮೊದಲ ಬಾರಿಗೆ ನಟಿ ದೀಪಿಕಾ ದಾಸ್ ತಮ್ಮ ತಂದೆ-ತಾಯಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ನಾನು ತುಂಬಾ ಚಿಕ್ಕವಳು, ನಾನು ಮೂರು ವರ್ಷ ಇದ್ದಾಗ ಅಪ್ಪ-ಅಮ್ಮ ಬೇರೆ ಬೇರೆಯಾದರು. ನಮ್ಮ ಅಮ್ಮ ತುಂಬಾ ಸ್ವಾಭಿಮಾನಿ. ಒಂದು ರೂಪಾಯಿಯನ್ನು ಸಹ ಅಪ್ಪನ ಬಳಿ ಕೇಳುತ್ತಿರಲಿಲ್ಲ. ನಮಗೆ ಏನಾದರೂ ಕೊಡಿಸುವಾಗಲೂ ಕೂಡ ಅಪ್ಪನಿಂದ ಒಂದು ರೂಪಾಯಿ ತೆಗೆಸುತ್ತಿರಲಿಲ್ಲ. ನಮ್ಮ ಅಪ್ಪ ಕೊಡಲು ಬಂದರೂ ಸಹ ಅವರು ಒಪ್ಪಿಕೊಳ್ಳುತ್ತಿರಲಿಲ್ಲ' ಎಂದರು.

'ನನಗೆ ಚಿಕ್ಕವಳಿದ್ದಾಗ ಅಮ್ಮನ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ನಾನು ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ಆದರೆ ನಿಜ ಹೇಳಬೇಕು ಅಂದರೆ ನಮ್ಮ ಅಪ್ಪ ಹೋದ ಮೇಲೆ ಅಮ್ಮನ ಬೆಲೆ ಏನೂ ಅಂತಾ ಗೊತ್ತಾಯ್ತು. ನಮ್ಮ ತಂದೆ ಈಗಿಲ್ಲ. ನಾನು ನಟನೆಗೆ ಬಂದು ಒಂದು ವರ್ಷ ಆಗಿತ್ತು ಅಷ್ಟೇ. ಕೃಷ್ಣ ರುಕ್ಮಿಣಿ ಧಾರಾವಾಹಿ ಮಾಡಿ ಒಂದು ವರ್ಷ ಆಗಿತ್ತು. ಅದರ ನಡುವೆ ಬೇರೆ ಸಿನಿಮಾ ನೋಡುತ್ತಿದೆ. ಈ ಮಧ್ಯೆ ಅಪ್ಪ ತೀರಿ ಹೋದರು'.
'ಅಪ್ಪ ಅಮ್ಮ ದೂರಾದ ಸಮಯದಲ್ಲಿ ಅಮ್ಮನ ಕಷ್ಟ ಅಷ್ಟು ಗೊತ್ತಾಗಲಿಲ್ಲ. ಯಾಕೆಂದರೆ ನಾನು ಅಪ್ಪನ ಜೊತೆ ಇದ್ದೆ. ಆದರೆ ಅಪ್ಪ ಹೋದ ಮೇಲೆ ಅಮ್ಮನ ಕಷ್ಟಗಳು ನನಗೆ ಗೊತ್ತಾಯ್ತು. ಜೊತೆಯಲ್ಲಿ ಇಲ್ಲ ಅಂದಾಕ್ಷಣ ನಮ್ಮ ಮಧ್ಯೆ ಕೋಪ ಇರಲಿಲ್ಲ. ಪ್ರತಿ ಸಲ ನಮಗೋಸ್ಕರ ಬರುತ್ತಿದ್ದರು. ನಮ್ಮ ಜೊತೆ ಸಮಯ ಕಳೆಯುತ್ತಿದ್ದರು. ಆದರೆ ನಾವೇ ಹೋಗುತ್ತಿರಲಿಲ್ಲ. ನಾವೇ ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ಇಲ್ಲಿ ಅಪ್ಪ ಜಾಸ್ತಿ ಪ್ರೀತಿ ಕೊಡುತ್ತಿದ್ದರಿಂದ ಅಲ್ಲಿ ಜಾಸ್ತಿ ಕನೆಕ್ಟ್ ಆಗುತ್ತರಲಿಲ್ಲ' ಎಂದರು.

'ಅಪ್ಪ ಹೋದ ಮೇಲೆ ನಿಜವಾಗಿಯೂ ಗೊತ್ತಾಗಿದ್ದು ನಮ್ಮ ಅಮ್ಮ ನಮಗೆ ಅವರದೇ ಆದ ರೀತಿಯಲ್ಲಿ ನಮಗೆ ಪ್ರೀತಿ ಕೊಡುತ್ತಿದ್ದರು ಅಂತಾ. ಮೊದಲು ಅವರು ಕೊಡುತ್ತಿದ್ದ ಪ್ರೀತಿಗೆ ನಾವು ಗೌರವ ಕೊಡುತ್ತಿರಲಿಲ್ಲ. ಅಪ್ಪ ಹೋದ ಮೇಲೆ ಅಮ್ಮನೇ ಅಪ್ಪ-ಅಮ್ಮ ಎರಡೂ ಆಗಿ ನಮಗೆ ಬಲವಾಗಿ ನಿಂತರು. ಅದರಿಂದಲೇ ಇವತ್ತು ದೀಪಿಕಾ ದಾಸ್ ನಿಂತಿರುವುದು. ಅಪ್ಪನ ಜೊತೆಗಿದ್ದಾಗ ಮುದ್ದಿನ ಮಗಳಾಗಿದ್ದೆ. ಆದರೆ ಅಮ್ಮ ದೀಪಿಕಾ ದಾಸ್ ಎನ್ನುವ ವ್ಯಕ್ತಿತ್ವವನ್ನು ಸೃಷ್ಟಿ ಮಾಡಿದರು' ಎಂದು ತಮ್ಮ ತಾಯಿಯ ಬಗ್ಗೆ ದೀಪಿಕಾ ದಾಸ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.












Click it and Unblock the Notifications