ಕನ್ನಡಿಗರಿಗೆ ಹೆದರಿ ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್, ಕೋರಿದ್ದೇನು?
ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳುವವರೆಗೆ ಅವರ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಲಾಗಿದೆ. ಆದರೂ ಯಾವ ಕಾರಣಕ್ಕೂ ಕ್ಷಮೆ ಕೇಳಲ್ಲ, ನನ್ನ ತಪ್ಪಿಲ್ಲ ಎಂದು ಮೊಂಡಾಟ ಮುಂದುವರಿಸಿರುವ ಕಮಲ್ ಹಾಸನ್ ಅವರು ಕನ್ನಡಿಗರ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ತಮ್ಮ ಬಗ್ಗೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಕಾನೂನು ಪ್ರಯೋಗಕ್ಕೆ ಮುಂದಾಗಿರುವ ಕಮಲ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು, ತಮ್ಮ ಥಗ್ ಲೈಫ್ ಸಿನಿಮಾ ರಿಲೀಸ್ ಹೊತ್ತಲ್ಲೇ ಕನ್ನಡದ ಬಗ್ಗೆ ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಕನ್ನಡ ತಮಿಳಿನಿಂದ ಹುಟ್ಟಿದ್ದು ಎನ್ನುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಜೂನ್ 5ರಂದು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಕರ್ನಾಟಕದಲ್ಲಿ ಯಾವ ಕಾರಣಕ್ಕೂ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಇದರ ನಡುವೆ ಕಮಲ್ ಹಾಸನ್ ತಮ್ಮ ಸಿನಿಮಾ ಬಿಡುಗಡೆಗೆ ಯಾವುದೇ ಅಡ್ಡಿ ಆತಂಕ ಎದುರಾಗದಂತೆ ನೋಡಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಭಾಷಾ ವಿವಾದದ ನಡುವೆ ತಮ್ಮ "ಥಗ್ ಲೈಫ್" ಸಿನಿಮಾವನ್ನು ಕರ್ನಾಟಕದಲ್ಲಿ ಯಾವುದೇ ತೊಂದರೆಯಿಲ್ಲದೆ ಪ್ರದರ್ಶಿಸಲು ನಿರ್ದೇಶನ ನೀಡುವಂತೆ ಕೋರಿ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಕೌಂಟರ್ ಕೊಡಲು ಕಮಲ್ ಕಾನೂನಿನ ಮೊರೆ ಹೋಗಿದ್ದಾರೆ. ಈಗಾಗಲೇ ಕಮಲ್ ಹಾಸನ್ ವಿರುದ್ಧ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಸಿನಿಮಾ ರಿಲೀಸ್ ಆದರೆ ಥಿಯೇಟರ್‌ಗೆ ಬೆಂಕಿ ಹಚ್ಚುವುದಾಗಿ ಕನ್ನಡಪರ ಸಂಘಟನೆಗಳು ಕೂಡ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ವಿವಾದದ ಬಗ್ಗೆ ಎರಡು ಬಾರಿ ಪ್ರತಿಕ್ರಿಯಿಸಿದ ಕಮಲ್ ಹಾಸನ್, ನಾನು ತಪ್ಪು ಮಾಡಿದ್ದರಷ್ಟೇ ಕ್ಷಮೆ ಕೇಳುತ್ತೇನೆ. ಈಗ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಮತ್ತೆ ಮತ್ತೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಕನ್ನಡಿಗರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಮಲ್ ಅಭಿಮಾನಿಗಳು ಕೂಡ ಹೆಚ್ಚಾಗಿದ್ದಾರೆ. ಸಿನಿಮಾ ರಿಲೀಸ್‌ಗೆ ಇನ್ನು ಮೂರು ಮಾತ್ರವೇ ಬಾಕಿ ಇರುವ ಹಿನ್ನೆಲೆ ಕನ್ನಡಿಗರ ಹೋರಾಟ ಮಣಿಸಲು ಕಮಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಥಗ್‌ಲೈಫ್ ರಿಲೀಸ್‌ಗೆ ಭದ್ರತೆ ಕೊಡಿ
ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ತಮ್ಮ ಮುಂಬರುವ ಚಿತ್ರ 'ಥಗ್ ಲೈಫ್' ಬಿಡುಗಡೆಗೆ ತಡೆ ನೀಡಿದ್ದು, ಮುಂದಿನ ಒಂದು ದಿನದೊಳಗೆ ಕ್ಷಮೆ ಕೇಳುವಂತೆ ಡೆಡ್‌ಲೈನ್ ನೀಡಿದೆ. ಇದರ ನಡುವೆ ನಟ ಕಮಲ್ ಹಾಸನ್ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತಮ್ಮ ಕಂಪನಿಯ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಸಿಇಒ ಮೂಲಕ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯು ತಮ್ಮ ಸಿನಿಮಾ ಪ್ರದರ್ಶನವನ್ನು ನಿಲ್ಲಿಸದಂತೆ ತಡೆಯುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಚಲನಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆಯೂ ಅವರು ಕಮಲ್ ಕೋರಿದ್ದಾರೆ.












Click it and Unblock the Notifications