Jani Master: ಅಪ್ಪು ಸಮಾಧಿ ದರ್ಶನ ಪಡೆದ ಜಾನಿ ಮಾಸ್ಟರ್‌ಗೆ ಫುಲ್ ಕ್ಲಾಸ್, ಕಾರಣವೇನು?
ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ (Jani Master) ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇತ್ತೀಚೆಗಷ್ಟೇ ಯುವತಿಗೆ ಲೈಂಗಿಕ ಕಿರುಕುಳ ಕೇಸ್‌ನಲ್ಲಿ ಜೈಲು ಸೇರಿ ಬಂದಿರುವ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಭೇಟಿ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ನಿನ್ನೆ ಬೆಂಗಳೂರಿಗೆ ಬಂದಿರುವ ಜಾನಿ ಮಾಸ್ಟರ್ ಅವರು ಕಂಠೀರವ ಸ್ಟುಡಿಯೋದಲ್ಲಿರುವ ನಟ ಪುನೀತ್, ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಗಳ ದರ್ಶನ ಪಡೆದಿದ್ದಾರೆ. ಈ ಫೋಟೋಗಳನ್ನು ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು, ಜಾನಿ ಮಾಸ್ಟರ್ ಫೋಟೋಗಳಿಗೆ ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ.

ಜಾನಿ ಮಾಸ್ಟರ್ ಅವರ ನಡೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. "ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ನೀವು ಅಪ್ಪು ಅವರ ಸಮಾಧಿಗೆ ಭೇಟಿ ನೀಡಿದ್ದೇ ತಪ್ಪು" ಎಂದು ನೇರವಾಗಿ ಹಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. "ದೇವರೆಂದು ಪೂಜಿಸುವ ಅಪ್ಪು ಅವರ ಸಮಾಧಿಗೆ ನೀವು ಹೋಗಬಾರದಿತ್ತು.." ಎಂದು ಹೇಳಿದ್ದಾರೆ. "ನೀವು ಡ್ಯಾನ್ಸ್ ಮಾತ್ರ ಚೆನ್ನಾಗಿ ಮಾಡ್ತೀರಿ ಅಂತ ಗೊತ್ತಿತ್ತು, ಜೊತೆಗೆ ಓವರ್ ಆಕ್ಟಿಂಗ್ ಚೆನ್ನಾಗಿ ಮಾಡ್ತೀರಿ" ಎಂದು ಕೆಲವರು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
ತೆಲುಗು ಚಿತ್ರರಂಗದಿಂದ ಹೊರಹೊಮ್ಮಿದ್ದ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಕನ್ನಡ ಚಿತ್ರರಂಗಕ್ಕೂ ಚಿರಪರಿಚಿತರು. ತಮ್ಮ ಡ್ಯಾನ್ಸ್ ಕಲೆಯ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದ ಅವರು ನಟ ಪುನೀತ್ ರಾಜ್‌ಕುಮಾರ್ ಅವರಿಗೂ ನ್ಯತ್ಯ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಪುನೀತ್ ರಾಜ್‌ಕುಮಾರ್ ಹಾಗೂ ಜಾನಿ ಮಾಸ್ಟರ್ ಅವರು ಉತ್ತಮ ಒಡನಾಟ ಹೊಂದಿದ್ದರು.

ನಟ ಅಪ್ಪು ಅವರ ನಿಧನರಾದಾಗಲೂ ಜಾನಿ ಮಾಸ್ಟರ್ ಭಾವುಕರಾಗಿ ಕಣ್ಣೀರು ಹಾಕಿದ್ದರು. ನನ್ನ ಅಣ್ಣನನ್ನು ಕಳೆದುಕೊಂಡೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದರು. ಬಳಿಕ ಅವರ ನಿವಾಸಕ್ಕೆ ಬಂದು ಪುನೀತ್ ಪತ್ನಿ ಅಶ್ವಿನಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಈ ರೀತಿ ಪುನೀತ್ ಅವರೊಂದಿಗೆ ಜಾನಿ ಮಾಸ್ಟರ್ ಮೊದಲಿನಿಂದಲೂ ಒಳ್ಳೆಯ ಒಡನಾಟ ಹೊಂದಿದ್ದರು.
ಆದರೆ, ಇತ್ತೀಚೆಗೆ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂತು. ತನ್ನ ಅವರ ತಂಡದಲ್ಲೇ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದರು. ಈ ಹಿನ್ನೆಲೆ ಜಾನಿ ಮಾಸ್ಟರ್ ಅವರು ತೆಲಂಗಾಣ ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು. ಇತ್ತೀಚೆಗೆ ಅವರು ಇದೇ ಕೇಸ್‌ನಲ್ಲಿ ಜಾಮೀನು ಪಡೆದು ಹೊರಬಂದಿದ್ದಾರೆ.

ತಮ್ಮ ಮೇಲೆ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪದಿಂದಾಗಿ ಸದ್ಯ ಚಿತ್ರರಂಗದಲ್ಲಿ ಕೂಡ ಅವರಿಗೆ ಅವಕಾಶಗಳು ಕೈತಪ್ಪುತ್ತಿವೆ ಎನ್ನುವ ಮಾತಿದೆ. ಆದರೆ ಕನ್ನಡ ಸಿನಿಮಾದಲ್ಲಿ ಅವರಿಗೆ ಮತ್ತೆ ಪ್ರಾಜೆಕ್ಟ್ ಸಿಕ್ಕಿರುವ ಹಿನ್ನೆಲೆ ಜಾನಿ ಮಾಸ್ಟರ್ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ನನ್ನ ಮುಂದಿನ ಪ್ರಾಜೆಕ್ಟ್ ಆರಂಭಿಸುವ ಮುನ್ನ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸರ್ ಅವರ ಆಶೀರ್ವಾದ ಪಡೆದೆ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications