ಕುಡಿದ ಮತ್ತಿನಲ್ಲಿ ರಂಪಾಟ: 'ಜೈಲರ್' ಸಿನಿಮಾ ನಟ ವಿನಾಯಗನ್ ಬಂಧನ
ಕುಡಿದ ಅಮಲಿನಲ್ಲಿ ರಂಪಾಟ ಮಾಡಿದ 'ಜೈಲರ್' ಸಿನಿಮಾ ನಟ ವಿನಾಯಗನ್ ಅವರನ್ನು ಕೇರಳದ ಕೊಚ್ಚಿಯಲ್ಲಿ ಪಲೀಸರು ಬಂಧಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜೈಲರ್ ಸಿನಿಮಾದಲ್ಲಿ ವಿಲನ್ ವರ್ಮಾ ಪಾತ್ರಧಾರಿಯಾಗಿದ್ದ ವಿನಾಯಗನ್, ನಿಜ ಜೀವನದಲ್ಲಿಯೂ ವಿಲನ್ ಪ್ರವೃತ್ತಿ ತೋರಿಸಿದ್ದಾರೆ.
ನಟ ವಿನಾಯಗನ್ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ಆತನ ವಿರುದ್ಧ ನಿವಾಸಿಗಳಿಂದ ದೂರು ದಾಖಲಾಗಿತ್ತು. ದೂರಿನ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆತನನ್ನು ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಗೆ ಕರೆದಿದ್ದರು. ವಿಚಾರಣೆಗಾಗಿ ಬಂದ ಅವರು ಠಾಣೆಯಲ್ಲೂ ತಮ್ಮ ವರಸೆ ತೆಗೆದಿದ್ದಾರೆ. ಕೂಗಾಡಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಅಕ್ಟೋಬರ್ 24ರಂದು ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬಂಧನದ ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ವಿನಾಯಕನ್ ಟಿಕೆ ಜೈಲರ್ ಸಿನಿಮಾದಲ್ಲಿ ವಿಚಿತ್ರ ವಿಲನ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎಸಿನಿಕೊಂಡಿದ್ದರು.
ಇವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ದುಲ್ಕರ್ ಸಲ್ಮಾನ್ ಜೊತೆಗೆ ನಟಿಸಿದ್ದ 'ಕಪಾಟಿಪದಂ'ಸಿನಿಮಾ ವಿನಾಯಗನ್‌ಗೆ ದೊಡ್ಡ ಜನಪ್ರಿಯತೆ ಗಳಿಸಿಕೊಟ್ಟಿತು. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ವಿನಾಯಗನ್ ನಟಿಸಿದ್ದಾರೆ.
ಮಾತ್ರವಲ್ಲದೆ ಬಿಗುಗಡೆಗೆ ಸಜ್ಜಾಗಿರುವ 'ಧ್ರುವ ನಚ್ಚತ್ತಿರಂ' ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ಸೈಡ್ ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಕಂಪೋಸರ್ ಕೂಡ ಹೌದು.












Click it and Unblock the Notifications