'ನಾನು ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ' ಎಂದ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಆಕ್ರೋಶ
ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ರಾಹ್ಮಣ ಸಮುದಾಯದ ಬಗ್ಗೆ ಅವರ ಹೇಳಿಕೆಗೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವಾಗ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಅವರು ತಮ್ಮ ಮಾತಿಗೆ ಕ್ಷಮೆ ಕೇಳಿದ್ದಾರೆ.
ಸಮಾಜ ಸುಧಾರಕರಾದ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಅವರ ಕುರಿತಾದ 'ಫುಲೆ' ಚಿತ್ರದ ಕುರಿತು ನಡೆಯುತ್ತಿರುವ ವಿವಾದದ ಮಧ್ಯೆ ಅನುರಾಗ್ ಕಶ್ಯಪ್ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ಅನುರಾಗ್ ಕಶ್ಯಪ್ ಹೇಳಿದ್ದೇನು? 'ನಾನು ಬ್ರಾಹ್ಮಣನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನೀಗಾ' ಎಂದು ಪ್ರಶ್ನೆ ಮಾಡುವ ಮೂಲಕ ಸಮುದಾಯವೊಂದಕ್ಕೆ ಅನುರಾಗ್ ಧಕ್ಕೆ ತಂದಿದ್ದಾರೆ. ಅನುರಾಗ್ ಅವರ ಈ ಮಾತಿಗೆ ಬ್ರಾಹ್ಮಣ ಸಮುದಾಯ ಕೆಂಡವಾಗಿದೆ. ಹೀಗಾಗಿ ಅನುರಾಗ್ ಕಶ್ಯಪ್ ಮೇಲೆ ಮುಂಬೈನಲ್ಲಿ ದೂರು ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಈ ಹೇಳಿಕೆ ಬಳಿಕ ಅನುರಾಗ್ ಅವರು ತಮ್ಮ ಮಗಳು, ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಅನುರಾಗ್, 'ನನ್ನನ್ನೂ ನಿಂದಿಸಿ. ನನ್ನ ಕುಟುಂಬದವರು ಏನೂ ಹೇಳಿಲ್ಲ, ಎಂದಿಗೂ ಹೇಳುವುದೂ ಇಲ್ಲ. ಬ್ರಾಹ್ಮಣರೇ, ದಯವಿಟ್ಟು ಮಹಿಳೆಯರನ್ನು ಬಿಟ್ಟುಬಿಡಿ. ಮನುಸ್ಮೃತಿ ಮಾತ್ರವಲ್ಲ, ಶಾಸ್ತ್ರಗಳು ಸಹ ಸಭ್ಯತೆಯನ್ನು ಕಲಿಸುತ್ತವೆ. ಇಷ್ಟೊಂದು ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದೀರಿ. ನೀವು ನಿಜವಾಗಿಯೂ ಯಾವ ರೀತಿಯ ಬ್ರಾಹ್ಮಣರು ಎಂಬುದನ್ನು ನೀವೇ ನಿರ್ಧರಿಸಿ. ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಕ್ಷಮೆಯಾಚಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಅನುರಾಗ್ ಕಶ್ಯಪ್ ಬ್ರಾಹ್ಮಣರ ಬಗ್ಗೆ ಮಾತಾಡಿದ್ದು ಯಾಕೆ?
ನಿರ್ದೇಶಕ ಅನುರಾಗ್ ಕಶ್ಯಪ್ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದಾಗ ಈ ವಿವಾದ ಪ್ರಾರಂಭವಾಯಿತು. ಒಬ್ಬ ಬಳಕೆದಾರರು 'ನಿಮ್ಮ ತಂದೆ ಬ್ರಾಹ್ಮಣರು' ಎಂದು ಕೇಳಿದ್ದರು. ಇದಕ್ಕೆ ಅನುರಾಗ್ ಕಶ್ಯಪ್ ಕೋಪವನ್ನು ವ್ಯಕ್ತಪಡಿಸಿ 'ನಾನು ಬ್ರಾಹ್ಮಣನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಯಾವುದೇ ತೊಂದರೆ ಇಲ್ಲ' ಎಂದಿದ್ದಾರೆ. ಇದಾದ ನಂತರ ಅನುರಾಗ್ ಕಶ್ಯಪ್ ಅವರ ಈ ಪೋಸ್ಟ್ ವೈರಲ್ ಆಗಿದೆ. ಇದು ಅನೇಕ ಬ್ರಾಹ್ಮಣ ಸಂಘಟನೆಗಳನ್ನು ಕೆರಳಿಸಿದೆ.

'ಫುಲೆ' ಚಿತ್ರದ ಬಗ್ಗೆ ವಿವಾದ
ಈ ಇಡೀ ವಿವಾದ ಬಾಲಿವುಡ್ ನಟ ಪ್ರತೀಕ್ ಗಾಂಧಿ ಮತ್ತು ನಟಿ ಪತ್ರಲೇಖಾ ಅವರ 'ಫುಲೆ' ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿದೆ. ಈ ಚಿತ್ರವು ಏಪ್ರಿಲ್ 11, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯು ಸೂಚಿಸಿದ ಬದಲಾವಣೆಗಳ ನಂತರ, ಅದು ಈಗ ಏಪ್ರಿಲ್ 25, 2025 ರಂದು ಬಿಡುಗಡೆಯಾಗಲಿದೆ.
ಈ ಚಿತ್ರದ ಬಗ್ಗೆ ಅಖಿಲ ಭಾರತ ಬ್ರಾಹ್ಮಣ ಸಮಾಜದಂತಹ ಗುಂಪುಗಳು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿವೆ. ವಾಸ್ತವವಾಗಿ ಈ ಚಿತ್ರ ಬ್ರಾಹ್ಮಣ ಸಮುದಾಯವನ್ನು ನಕಾರಾತ್ಮಕ ರೀತಿಯಲ್ಲಿ ತೋರಿಸುತ್ತಿದೆ ಎಂದು ಹೇಳಲಾಗುತ್ತಿದೆ. ನಿರ್ಮಾಪಕರು ಅವಮಾನಿಸುವ ಉದ್ದೇಶ ಹೊಂದಿಲ್ಲ ಮತ್ತು ಸಿಬಿಎಫ್‌ಸಿ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಅನುರಾಗ್ ಕಶ್ಯಪ್ ಪೋಸ್ಟ್ ವಿವಾದವನ್ನು ಸೃಷ್ಟಿಸಿದೆ.












Click it and Unblock the Notifications