Navagraha Collection: ನವಗ್ರಹ ರೀ-ರಿಲೀಸ್..ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತೇ?
ಬೆಂಗಳೂರು, ನವೆಂಬರ್ 09: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಆರೋಪಿಯಾಗಿದ್ದಾರೆ. ಈವರೆಗೂ ಬಳ್ಳಾರಿ ಜೈಲು ಸೇರಿದ್ದ ನಟ ದರ್ಶನ್‌ಗೆ ಆರೋಗ್ಯದ ಕಾರಣದ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ. ಆರು ವಾರಗಳ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ದರ್ಶನ್ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದರಿಂದ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತೆರೆ ಕಾಣಬೇಕಿದ್ದ ಡೆವಿಲ್ ಸಿನಿಮಾ ಅಪೂರ್ಣವಾಗಿದೆ. ಹೀಗಾಗಿ ದರ್ಶನ್ ಸಿನಿಮಾಗಾಗಿ ಕಾದಿದ್ದ ಅಭಿಮಾನಿಗೆ ನಿರಾಸೆಯಾಗಿದೆ. ಹೀಗಾಗಿ ದರ್ಶನ್ ಅಭಿನಯದ ಹಳೆ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗುತ್ತಿದ್ದು, ಇದೀಗ ನವಗ್ರಹ ಸಿನಿಮಾವನ್ನು ಕೂಡ ರೀ ರಿಲೀಸ್ ಮಾಡಲಾಗಿದೆ.

ನವೆಂಬರ್ 07ರಂದು ನವಗ್ರಹ ಸಿನಿಮಾ ರೀ-ರಿಲೀಸ್ ಆಗಿದ್ದು, ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ಎಲ್ಲೆಡೆ ನವಗ್ರಹ ಸಿನಿಮಾ ರೀ-ರಿಲೀಸ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
2008ರಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವ ನವಗ್ರಹ ಸಿನಿಮಾ 16 ವರ್ಷಗಳ ನಂತರ ಮತ್ತೆ ದೊಡ್ಡ ಪರದೆ ಮೇಲೆ ಬಂದಿದೆ. ಟಿವಿಗಳಲ್ಲಿ ನೂರು ಬಾರಿ ಈ ಸಿನಿಮಾಗಳನ್ನು ಕಂಡವರು ಸಹ ಮತ್ತೆ ಥಿಯೇಟರ್‌ಗೆ ಬಂದು ಅದೇ ಮೊದಲಿನ ಉತ್ಸಾಹದಲ್ಲಿ ಸಿನಿಮಾ ನೋಡುತ್ತಿದ್ದಾರೆ. ಅಂದಹಾಗೆ ಪ್ರತಿವರ್ಷ ದಸರಾ ಸಮಯದಲ್ಲಿ ನವಗ್ರಹ ಸಿನಿಮಾ ಟಿವಿಗಳಲ್ಲಿ ಪ್ರಸಾರವಾಗುತ್ತದೆ.
ಇನ್ನು ಬೆಂಗಳೂರಿನ ಪ್ರಸನ್ನ ನರ್ತಕಿ, ಕಾಮಾಕ್ಯ, ಗೋವರ್ಧನ್ ಥಿಯೇಟರ್ ಸೇರಿದಂತೆ ರಾಜ್ಯದ ಸುಮಾರು 100 ಚಿತ್ರಮಂದಿರಗಳಲ್ಲಿ ನವಗ್ರಹ ಸಿನಿಮಾ ರೀ ರಿಲೀಸ್ ಆಗಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ನವಗ್ರಹ ಬಹುತೇಕ ಕಡೆ ಹೌಸ್ ಫುಲ್ ಬೋರ್ಡ್ ಕಾಣುವಂತೆ ಮಾಡಿದೆ. ಹೀಗಾಗಿ ರೀ ರಿಲೀಸ್ ಆದ ನವಗ್ರಹ ಚಿತ್ರದ ಕಲೆಕ್ಷನ್ ಎಷ್ಟಾಗಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.
ನವಗ್ರಹ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಲ್ಲಿ? ಎಷ್ಟು? ಎನ್ನುವುದರ ವಿವರ ಇಲ್ಲಿದೆ. ವಿತರಕರ ಪ್ರಕಾರ ನವಗ್ರಹ ಸಿನಿಮಾ ರೀ ರಿಲೀಸ್ ಮೊದಲ ದಿನ ಪ್ರಸನ್ನ ಥಿಯೇಟರ್ನಲ್ಲಿ ಸುಮಾರು 2.4 ಲಕ್ಷ ರೂಪಾಯಿ, ಮೈಸೂರಿನ ಸಂಗಮ್ ಚಿತ್ರ ಮಂದಿರದಲ್ಲಿ 2.6 ಲಕ್ಷ ರೂಪಾಯಿ ಮಂಡ್ಯ ಮತ್ತು ತುಮಕೂರಿನ ಚಿತ್ರ ಮಂದಿರಗಳಲ್ಲಿ ಸೇರಿ 1.66 ಲಕ್ಷ ಕಲೆಕ್ಷನ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಭಾನುವಾರ ಮತ್ತಷ್ಟು ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications