Darshan Thoogudeepa: ಬಳ್ಳಾರಿ ಜೈಲಿಗೆ ಬಂದ ಗಣೇಶ: 'ದರ್ಶನ್'ಗೆ ಭಾಗ್ಯ ಇಲ್ಲ
ದೇಶದೆಲ್ಲೆಡೆ ಇಂದು ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಗಣೇಶನನ್ನು ಪೂಜಿಸುವ ಭಾಗ್ಯ ಇಲ್ಲ. ಇದರಿಂದ ದರ್ಶನ್ ಬೇಸರಗೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಪ್ರತೀ ವರ್ಷ ಗಣೇಶ ಚತುರ್ಥಿಯಲ್ಲಿ ಭಾಗಿಯಾಗುತ್ತಿದ್ದ ದರ್ಶನ್ ಈ ಬಾರಿ ಅದನ್ನು ಮಿಸ್ ಮಾಡಿಕೊಂಡಿದ್ದಾರೆ.
ಹೌದು.... ಬಳ್ಳಾರಿ ಜೈಲಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಜೈಲನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದೆ. ಬಳ್ಳಾರಿ ಜೈಲು ಹೂವು, ಬಾಳೆ ಕಂಬ, ಹಣ್ಣು, ಮಾವಿನ ಎಲೆ, ಬಲೂನ್, ಲೈಟಿಂಗ್‌ನಿಂದ ಕಂಗೊಳಿಸುತ್ತಿದೆ. ಅಲ್ಲದೆ ಕೈದಿಗಳಿಗೆ ಸಿಹಿ ತಿಂಡಿ ಊಟವನ್ನು ಇವತ್ತು ನೀಡಲಾಗಿದೆ. ಮೋದಕ, ಬೆಲ್ಲದ ಕಡುಬು, ರವೆ ಪಾಯಿಸ ನೀಡಲಾಗಿದೆಯಂತೆ. ಜೈಲಿನಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿರುವಾಗ ದರ್ಶನ್ ಅವರಿಗೆ ಗಣೇಶನ ದರ್ಶನ ಹಾಗೂ ಪೂಜೆ ಅವಕಾಶ ಸಿಕ್ಕಿರಬಹುದು ಅಂತ ಅನಿಸಬಹುದು. ಆದರೆ ಜೈಲಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದರೂ ದರ್ಶನ್‌ಗೆ ಗಣೇಶನ ವಿಗ್ರಹವನ್ನು ನೋಡುವ ಅವಕಾಶ ನೀಡಲಾಗಿಲ್ಲ.

ಇಂದು ಬೆಳಗ್ಗೆ ಗಣೇಶನ ವಿಗ್ರಹವನ್ನಿಟ್ಟು ಪೂಜೆ ಮಾಡಲಾಗಿದೆ. ಪ್ರತಿ ವರ್ಷ ಬಳ್ಳಾರಿ ಜೈಲಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಜೈಲು ಸಿಬ್ಬಂದಿಗಳು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ, ಕೈದಿಗಳು ಅಲಂಕಾರ ಮಾಡಿ ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಅಲಂಕಾರಕ್ಕೆ ಮಾತ್ರ ಕೈದಿಗಳಿಗೆ ತಿಳಿಸಲಾಗಿದ್ದು ಸಿಬ್ಬಂದಿಗಳು ಮಾತ್ರ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಈ ವರ್ಷದ ದರ್ಶನ್ ಜೈಲಿನಲ್ಲಿ ಇರುವುದರಿಂದ ಸರಳವಾಗಿ ಹಬ್ಬವನ್ನು ಆಚರಿಸಲಾಗಿದೆ. ಕೈದಿಗಳಿಗೆ ಗಣೇಶನ ದರ್ಶನಕ್ಕೆ ಹಾಗೂ ಕೈ ಮುಗಿದು ಪ್ರಾರ್ಥನೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ನೀಡಲಾಗಿಲ್ಲ. ಜೈಲಿನಲ್ಲಿ ಈ ಬಾರಿ ಕುಳಿತಿರುವ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಆದರೆ ನಟ ದರ್ಶನ್‌ಗೆ ಗಣೇಶನ ದರ್ಶನಕ್ಕೆ ಅವಕಾಶ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಆರೋಪಿ ದರ್ಶನ್ ಸೇರಿದಂತೆ ಇತರೆ ಮೂರು ಕೈದಿಗಳು ಇದ್ದಾರೆನ್ನಲಾಗುತ್ತಿದೆ. ಹೀಗೆ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಇರುವ ಯಾವೊಬ್ಬ ಕೈದಿಗೂ ಗಣೇಶನ ದರ್ಶನ್ ಪಡೆಯಲು ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ.
ದರ್ಶನ್‌ಗೆ ಟಿವಿ
ಇನ್ನೂ ಜೈಲಿಗೆ ಐದು ದಿನಗಳ ಬಳಿಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಟಿವಿ ನೋಡುವ ಭಾಗ್ಯ ಲಭಿಸಿದೆ. ಸತತ ಬೇಡಿಕೆಗಳ ಬಳಿಕ ದರ್ಶನ್ ಮನವಿಯನ್ನು ಪುರಷ್ಕರಿಸಿರುವ ಜೈಲಾಧಿಕಾರಿಗಳು ಸೆಲ್‌ಗೆ ಟಿವಿ ಅಳವಡಿಸಿದ್ದಾರೆ. ಜೈಲು ನಿಯಮದ ಪ್ರಕಾರ ವಿಚಾರಣಾಧೀನ ಕೈದಿಗೆ ಟಿವಿ ಸೌಲಭ್ಯ ನೀಡಬಹುದು. ಹೀಗಾಗಿ ಈ ಹಿಂದೆಯೇ ದರ್ಶನ್ ಟಿವಿಗೆ ಬೇಡಿಕೆ ಇಟ್ಟಿದ್ದರು. ಆದರೆ ಟಿವಿ ಕೆಟ್ಟುಹೋಗಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ. ಇದೀಗ ಹೊರ ಜಗತ್ತಿನ ಬೆಳವಣಿಗೆಗಳನ್ನು ಕಾಣಲು ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ.












Click it and Unblock the Notifications