Yograj Bhat: ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್ ದಾಖಲು; ಕಾರಣವೇನು
ಚಂದನವನಕ್ಕೆ ಯಾಕೋ ಸಮಯವೇ ಸರಿಯಿಲ್ಲ ಅನಿಸುತ್ತಿದೆ. ಏನೇ ಯಜ್ಞ ಯಾಗ ಮಾಡಿದರೂ ಒಂದಿಲ್ಲೊಂದು ಕಹಿ ಘಟನೆಗಳು ನಡೆಯುತ್ತಿವೆ. ದರ್ಶನ್ ಪ್ರಕರಣದಲ್ಲಿ ಚಿತ್ರರಂಗದ ಮೇಲಾಗಿರುವ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಮುಂಗಾರುಮಳೆ, ಗಾಳಿಪಟ ಸೇರಿದಂತೆ ಹಲವು ಹಿಟ್ ಸಿನಿಮಾ ಕೊಟ್ಟಿರುವ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಕೂಡ ಇದೀಗ ಎಫ್‌ಐಆರ್ ದಾಖಲಾಗಿದೆ.
ಯೋಗರಾಜ್ ಭಟ್ ಅವರ 'ಮನದ ಕಡಲು' ಸಿನಿಮಾ ಚಿತ್ರೀಕರಣದ ವೇಳೆ ದುರ್ಘಟನೆ ನಡೆದುಹೋಗಿದೆ. ಸಿನಿಮಾಗೆ ಲೈಟ್ ಮ್ಯಾನ್ ಕೆಲಸ ಮಾಡುತ್ತಿದ್ದವರೊಬ್ಬರು 30 ಅಡಿ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ಚಿತ್ರತಂಡದ ಹಲವರ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ನೆಲಮಂಗಲದ ಬಳಿ ಇರುವ ಅಡಕಮಾರನಹಳ್ಳಿ ಬಳಿ ಈ ಘಟನೆ ನಡೆದಿದೆ. ಚಿತ್ರೀಕರಣಕ್ಕೆ ಲೈಟಿಂಗ್ಸ್ ವ್ಯವಸ್ಥೆ ಮಾಡುತ್ತಿದ್ದ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದ ಪರಿಣಾಮ ಈ ದುರ್ಘಟನೆ ನಡೆದಿದೆ. ಮನದ ಕಡಲು ಸಿನಿಮಾದ ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ನಿರ್ದೇಶಕ ಯೋಗರಾಜ್ ಭಟ್, ಮ್ಯಾನೇಜರ್ ಸುರೇಶ್ ಸೇರಿದಂತೆ ಹಲವರ ಮೇಲೆ ದೂರು ದಾಖಲಾಗಿದ್ದು, ಚಿತ್ರತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮಂಗಳವಾರ ನಡೆದಿರುವ ಘಟನೆ
ಮನದ ಕಡಲು ಸಿನಿಮಾದ ಚಿತ್ರೀಕರಣ ಡಕಮಾರನಹಳ್ಳಿಯ ವಿ.ಆರ್.ಎಲ್. ಗೋಡೌನ್‌ನಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿತ್ತು. ಮಂಗಳವಾರ ಸಂಜೆ ಲೈಟ್ ಮ್ಯಾನ್ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರ್, 30 ಅಡಿ ಎತ್ತರದಲ್ಲಿ ಕಟ್ಟಿದ್ದ ಲೈಟ್ ಬಿಚ್ಚುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಮೋಹನ್ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿತ್ತು, ತಕ್ಷಣವೇ ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಸುರಕ್ಷತಾ ಸಾಧನಗಳನ್ನು ನೀಡದೆ ಕೆಲಸ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications