Guruprasad-Oscar Award: ಕನ್ನಡಕ್ಕೆ ಮಿಸ್ ಆಯ್ತು 'ಆಸ್ಕರ್ ಅವಾರ್ಡ್', ಯಾಕೆ?
ಬೆಂಗಳೂರು, ನವೆಂಬರ್ 03: ಕನ್ನಡ ಚಿತ್ರ ನಿರ್ದೇಶಕ, ನಟ 'ಮಠ' ಖ್ಯಾತಿಯ ಗುರುಪ್ರಸಾದ್ ಅವರ ಮೃತದೇಹ ಆತ್ಮಹತ್ಯೆ ಸ್ಥಿತಿಯಲ್ಲಿ ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿದೆ. ಇಂಡಸ್ಟ್ರಿಗೆ 'ಆಸ್ಕರ್ ಅವಾರ್ಡ್' ತಂದುಕೊಡುವಂತಹ ಅದ್ಭುತ ಸಿನಿಮಾ ಮಾಡಬೇಕು, ಎಂದು ಮಹಾನ್ ಗುರಿ ಹೊಂದಿದ್ದ ನಿರ್ದೇಶಕರೊಬ್ಬರ ಅಕಾಲಿಕ ಸಾವಿನಿಂದ ಚಿತ್ರರಂಗಕ್ಕೆ ಮಬ್ಬು ಕವಿದಂತಾಗಿದೆ. ನಿರಂತರ ಸೋಲಿನಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಈ ಕುರಿತು ಪೊಲೀಸರ ತನಿಖೆಯಿಂದ ಸತ್ಯ ತಿಳಿಯಬೇಕಿದೆ.
ನಿರ್ದೇಶಕ ಗುರು ಪ್ರಸಾದ್ ಅವರು ತಮ್ಮದೇ ಆದ ವಿಶೇಷ ಬಗೆಯ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದರು. ಕಡಿಮೆ ಖರ್ಚಿನಲ್ಲಿ ಸಿನಿಮಾ ತೆರೆಗೆ ತಂದು ಗೆದ್ದವರು. ಅವರು 'ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್' ಹೀಗೆ ಹಲವು ವಿಭಿನ್ನ ಸದಭಿರುಚಿಯ ಸಿನಿಮಾ ಕನ್ನಡಿಗರಿಗೆ ಉಣ ಬಡಿಸಿದ್ದಾರೆ.

ಕನ್ನಡದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಪ್ರೀತಿ ಅಭಿಮಾನಿ ಹೊಂದಿದ್ದರು. ಅದಕ್ಕಾಗಿಯೇ ಕನ್ನಡ ಚಿತ್ರರಂಗಕ್ಕೆ ಇದುವರೆಗೂ ಬಾರದ 'ಆಸ್ಕರ್ ಪ್ರಶಸ್ತಿ'ಯನ್ನು (Oscar Award) ತಂದುಕೊಡಬೇಕು. ಅಂತಹ ಅದ್ಭುತ ಸಿನಿಮಾ ನಿರ್ಮಿಸಬೇಕು ಎಂಬ ಮಹತ್ತರ ಕನಸು ಕಂಡಿದ್ದರು.
'ಆಸ್ಕರ್ ಅವಾರ್ಡ್' ಮತ್ತು ನಿರ್ದೇಶಕ ಗುರುಪ್ರಸಾದ್
ಜೀವಮಾನ ಸಾಧನೆಗೆ 'ಆಸ್ಕರ್ ಅವಾರ್ಡ್' ಕೊಡುವುದಿದ್ದರೆ ಅದು ವರನಟ ಡಾ.ರಾಜಕುಮಾರ್ ಅವರಿಗೆ ಕೊಡಬೇಕು ಎಂದು ಸ್ವತಃ ಅವರೇ ಹೇಳಿದ್ದರು. ಇಂತಹ ಮಹಾನ್ ನಟರಿದ್ದರೂ ಸಹ ಕನ್ನಡಕ್ಕೆ 'ಆಸ್ಕರ್ ಪ್ರಶಸ್ತಿ' ಬಂದಿಲ್ಲ. ಬೇರೆ ಬೇರೆ ಚಿತ್ರರಂಗಗಳು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಆಗಿದ್ದು ಕಂಡು, ನಮಗೇಕೆ ಸಿಕ್ಕಿಲ್ಲ ಎಂದು ಮಮ್ಮಲ ಮರುಗಿದ್ದರು. ಅಂದಿನಿಂದಲೇ ಶಪಥ ಮಾಡಿದ್ದ ನಿರ್ದೇಶಕ ಗುರುಪ್ರಸಾದ್ ಅವರು, ಭವಿಷ್ಯದಲ್ಲಿ ಆಸ್ಕರ್ ಅವಾರ್ಡ್ ತಂಡುಕೊಡುತ್ತೇನೆ. ಅದಕ್ಕಾಗಿ ಶ್ರಮಿಸುತ್ತೇನೆ ಎಂದೆಲ್ಲ ಮಾತನಾಡಿದ್ದರು. ಆ ಕುರಿತ ಒಂದಷ್ಟು ವಿಡಿಯೋಗಳು, ಸಂದರ್ಶನಗಳನ್ನು ನಾವು ನೋಡಬಹುದಾಗಿದೆ.

ಕನ್ನಡಿಗರಿಗೆ ಬುದ್ಧಿಶಕ್ತಿ, ಶಕ್ತಿ ಸಾಮರ್ಥ್ಯ ಇದೆ. ಅದನ್ನು ಬಳಸಿಕೊಂಡು ಒಳ್ಳೆಯ ಕಂಟೆಂಟ್ ಸಿನಿಮಾ ಕೊಟ್ಟು ಆಸ್ಕರ್ ಅವಾರ್ಡ್ ಹೊಡಿಬೇಕು. ಮುಂದೊಂದು ದಿನ ವೇದಿಕೆ ಮೇಲೆ ಕೈಯಲ್ಲಿ 'ಆಸ್ಕರ್ ಪ್ರಶಸ್ತಿ ಹಿಡಿದು ಅದನ್ನು ಕನ್ನಡಕ್ಕೆ ಅರ್ಪಿಸಬೇಕು. ಕನ್ನಡದ ಡಾ.ರಾಜಕುಮಾರ್ ಅವರಿಗೆ ಈ ಪ್ರಶಸ್ತಿ ಅರ್ಪಿಸಬೇಕು. ಅವಾರ್ಡ್ ಹಿಡಿದು ವೇದಿಕೆ ಮೇಲೆ 'ಎಲ್ಲಾದರೂ ಇರು ಎಂತಾದರೂ ಇರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹಾಡು ಹೇಳಬೇಕು'. ಮರುಕ್ಷಣ ನಾನು ಸತ್ತರೂ ಪರವಾಗಿಲ್ಲ ಎಂದಿದ್ದಾರೆ.
ಅಂತಹ ಒಬ್ಬ ಕಲಾವಿದ, ನಿರ್ದೇಶಕರು ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ. ಇದರಿಂದ ಕನ್ನಡಕ್ಕೆ ಬರಬೇಕಿದ್ದ ಆಸ್ಕರ್ ಅವಾರ್ಡ್ ಕನಸು ಭಗ್ನಗೊಂಡಿದೆ, ಸಂಭಾವ್ಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕೈತಪ್ಪಿದೆ ಎಂದು ಅವರ ಅಭಿಮಾನಿಗಳು, ಆಪ್ತರು ಬೇಸರ ವ್ಯಕ್ತಪಡಿಸಿದ್ದಾರೆ.
'ಕನ್ನಡಕ್ಕೆ ಆಸ್ಕರ್ ಬೇಕು' ಅಭಿಯಾನ ಆರಂಭಿಸುವೆ
ವಿಡಿಯೋವೊಂದರಲ್ಲಿ ಮಾತನಾಡಿದ್ದ ಗುರುಪ್ರಸಾದ್ ಅವರು, ತಮಿಳು ಚಿತ್ರರಂಗಕ್ಕೆ ಆಸ್ಕರ್ ಬಂದಿದೆ. ನಮಗೆ ಬಂದಿಲ್ಲ. 'ಕನ್ನಡಕ್ಕೆ ಆಸ್ಕರ್ ಬೇಕು' ಎಂದು ಅಭಿಯಾನ ಆರಂಭಿಸಲಿದ್ದೇನೆ ಎಮದು ಆಪ್ತರ ಬಳಿ ಹೇಳಿಕೊಂಡಿದ್ದರು.
ದೇಶವೇ ಕನ್ನಡ ಸಿನಿಮಾ ಬಗ್ಗೆ ಮಾತನಾಡುವಂತೆ ಅತ್ಯುತ್ತಮ ಕಂಟೆಂಟ್ ವುಳ್ಳು ಸಿನಿಮಾ ಮಾಡಬೇಕು ಎಂದು ಗುರುಪ್ರಸಾದ್ ಆಸೆ ಹೊಂದಿದ್ದರು. ಆ ಬಗ್ಗೆ ಅವರು ಕೆಲವು ಭಾರಿ ಹೇಳಿಕೊಂಡಿದ್ದ ವಿಡಿಯೋಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತಿವೆ.
ಅದ್ಭುತ ಸಿನಿಮಾಗಾಗೆ ಅವರ ಪ್ಲಾನ್ ಹೇಗಿತ್ತು?
ಅವರೇ ಹೇಳಿಕೊಂಡಂತೆ ನಾನು ಹತ್ತು ಇಪ್ಪತ್ತು ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡುವುದಿಲ್ಲ. ಒಂದು ಇಲ್ಲ ಒಂದು ಕಾಲು ಕೋಟಿಯಲ್ಲಿ (1.25 ಕೋಟಿ ರೂ.) ಸಿನಿಮಾ ಮಾಡಬೇಕು. ಅದಕ್ಕಾಗಿ ನನಗೆ ಐದು ವರ್ಷ ಸ್ಪಾನ್ಸರ್ ಮಾಡುವವರು ಸಿಕ್ಕರೆ, ಒಳ್ಳೆಯ ಕಂಟೆಂಟ್ ತಂದರೆ ಅವರಿಂದಲೇ ಸಿನಿಮಾ ಮಾಡಿಸಬಹುದು.
ಒಬ್ಬರಿಗೆ ಅಷ್ಟೊಂದು ಬಂಡವಾಳ ಹೊರೆ ಆಗದಂತೆ ಗುರುಪ್ರಸಾದ್ ಅವರು ಪ್ಲಾನ್ ಮಾಡಿಕೊಂಡಿದ್ದರು. ಸ್ನೇಹಿತರ ವಾಟ್ಸಾಪ್ ಗ್ರೂಪ್ ಮಾಡಿಕೊಂಡು. ಅವರಿಂದಲೇ ಪ್ರತಿ ಶೇರ್‌ಗೆ 20 ಸಾವಿರ ರೂ.ನಂತೆ ಒಬ್ಬರಿಗೆ ತಲಾ ಐದು ಶೇರ್ ಮಾರಬೇಕು. ಸುಮಾರು 50ಕ್ಕೂ ಹೆಚ್ಚು ಜನ ಸ್ನೇಹಿತರಿದ್ದಾರೆ. ಅವರಿಂದಲೇ ಹಣ ಹಾಕಿದರೆ ಸಿನಿಮಾಗೆ ಬಂಡವಾಳ ರೆಡಿ. ಯಾರಿಗೂ ಭಾರ ಆಗುವುದಿಲ್ಲ. ಅದೇ ಗ್ರೂಪ್‌ನಲ್ಲಿ ಶೂಟಿಂಗ್ ಅಪ್ಡೇಟ್ ಕೊಡಬಹುದು ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದ ಕ್ರಿಯೇಟಿವ್ ಡೈರೆಕ್ಟರ್ ಅಂತಲೂ ಕರೆಸಿಕೊಂಡಿದ್ದ ಗುರುಪ್ರಸಾದ್ ಅವರು ಇಹಲೋಕ ತ್ಯಜಿಸಿದ್ದಾರೆ.
ನಿರಂತರ ಸೋಲು, ಸಾಲ ಬಾಧೆಯಿಂದ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತರ ಕುಟುಂಬ, ಸ್ನೇಹಿತರು ಕಣ್ಣೀರಲ್ಲಿ ಮುಳುಗಿದ್ದಾರೆ.ಚಿತ್ರರಂಗ ಗಣ್ಯರು, ರಾಜಕಾರಣಗಳು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ..












Click it and Unblock the Notifications