ಹೊಸ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದೆ ದುನಿಯಾ ಖ್ಯಾತಿಯ ಸೂರಿ ಮತ್ತು ವಿಜಯ್ ಜೋಡಿ!?
ಬೆಂಗಳೂರು, ಏಪ್ರಿಲ್. 08: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸೂರಿ ಮತ್ತು ನಟ ದುನಿಯಾ ವಿಜಯ್ ಮತ್ತೆ ಹೊಸ ಸಿನಿಮಾದ ಮೂಲಕ ಒಂದಾಗುತ್ತಿದ್ದಾರೆ ಎಂಬ ವಿಷಯ ಹಬ್ಬುತ್ತಿದೆ. ಚಂದನವನದ ನಿರ್ಮಾಪಕರಾದ ಜಯಣ್ಣ ಮತ್ತು ಬೋಗೇಂದ್ರ ಅವರೊಂದಿಗೆ ಹೊಸ ಚಿತ್ರಕ್ಕೆ ಕೈಜೋಡಿಸುತ್ತಿದ್ದಾರೆ. ಅದು ಇನ್ನೂ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.
ಈ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹೊಸ ಮೈಲಿಗಲ್ಲಿಗೆ ಕಾರಣವಾದ 'ದುನಿಯಾ' ಜೋಡಿ ಮತ್ತೆ ಒಂದಾಗುತ್ತಿದೆ. ನಿರ್ದೇಶಕ ಸೂರಿ ಅವರ ಚೊಚ್ಚಲ ಸಿನಿಮಾ 2007 ರ ದುನಿಯಾ. ಅಲ್ಲಿಯವರೆಗೆ ಕನ್ನಡದಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ನಟ ವಿಜಯ್ ಅವರನ್ನು ನಾಯಕನನ್ನಾಗಿಸಿತು. ಅವರಿಗೆ ಚಿತ್ರರಂಗದಲ್ಲಿ ಹೊಸ ಗುರುತು ನೀಡಿತ್ತು.

ನಿರ್ದೇಶಕ ಸೂರಿ ಮತ್ತು ನಟ ವಿಜಯ್ ಕುಮಾರ್ ಇಬ್ಬರನ್ನೂ ಖ್ಯಾತಿಯ ಉತ್ತುಂಗಕ್ಕೆ ತೆಗೆದುಕೊಂಡು ಹೋದ ಚಿತ್ರ ಇದು. ಈ ಚಿತ್ರದಿಂದಲೇ ನಟ ವಿಜಯ್ ಕುಮಾರ್ 'ದುನಿಯಾ ವಿಜಯ್' ಎಂಬ ಹೆಸರಿನಿಂದ ಫೇಮಸ್ ಆದರು. ಸಿನಿಮಾದಲ್ಲಿ ಮುಗ್ದತೆ, ರೌಡಿಸಂ ಮತ್ತು ನೈಜ ಅಭಿನಯದಿಂದ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸ ದೃಷ್ಟಿಕೋನ ನೀಡಿದ ಸಿನಿಮಾವಾಗಿ ದುನಿಯಾ ಇಂದಿಗೂ ಹೆಸರುವಾಸಿಯಾಗಿದೆ.
ದುನಿಯಾ ನಂತರ, ನಿರ್ದೇಶಕ ಸೂರಿ ಮತ್ತು ನಟ ವಿಜಯ್ ಕುಮಾರ್ ಜೋಡಿ 2009 ರಲ್ಲಿ 'ಜಂಗ್ಲಿ' ಸಿನಿಮಾಗಾಗಿ ಮತ್ತೆ ಕೈಜೋಡಿಸಿತ್ತು. ಸಿನಿಮಾ ಕಮರ್ಷಿಯಲ್ ಹಿಟ್ ಆಗಿತ್ತು. ಈಗ, ಜಂಗ್ಲಿ ಬಿಡುಗಡೆಯಾದ 15 ವರ್ಷಗಳ ನಂತರ, ಮತ್ತೆ ಒಟ್ಟಿಗೆ ಕೈ ಜೋಡಿಸಲು ಮತ್ತು ತಮ್ಮ ಸಕ್ಸ್ ಘಳಿಗೆಯನ್ನು ಮರಳಿ ತರಲು ಸಿದ್ಧವಾಗಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಜಯಣ್ಣ ಫಿಲ್ಮ್ಸ್ ಈ ಹಿಂದೆ ದುನಿಯಾ ಸೇರಿದಂತೆ ನಿರ್ದೇಶಕ ಸೂರಿ ಅವರ ಕೆಲವು ಚಿತ್ರಗಳನ್ನು ವಿತರಣೆ ಮಾಡಿದೆ. ಆದರೆ ಪ್ರೊಡಕ್ಷನ್ ಹೌಸ್ ಮೊದಲ ಬಾರಿಗೆ ಒಂದು ಸಿನಿಮಾವನ್ನು ಇವರಿಗಾಗಿ ನಿರ್ಮಾಣ ಮಾಡುತ್ತಿದೆ. ಮೂಲಗಳ ಪ್ರಕಾರ, ವಿಜಯ್ ಕುಮಾರ್ ಜೊತೆಗೆ ತಾರಾಗಣದಲ್ಲಿ 'ಕಿಸ್' ಸಿನಿಮಾ ನಾಯಕ ವಿರಾಟ್ ಕೂಡ ಇರಬಹುದು ಎನ್ನಲಾಗಿದೆ.

ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ ಸೂರಿ, ಜಯಣ್ಣ ಪ್ರೊಡಕ್ಷನ್ಸ್‌ನೊಂದಿಗೆ ಕೆಲಸ ಮಾಡುವ ಬಗ್ಗೆ ಉತ್ಸಾಹ ಹೊರಹಾಕಿದ್ದರು. ಇದು ಹೋಮ್ ಬ್ಯಾನರ್‌ನೊಂದಿಗೆ ಕೆಲಸ ಮಾಡುವಂತೆ ಆಗುತ್ತಿದೆ ಎಂದು ತಿಳಿಸಿದ್ದರು. ಇಬ್ಬರ ಕಾಂಬೀನೇಷನ್‌ನ ಸಿನಿಮಾ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮುಂಬರುವ ನಿರ್ದೇಶಕ ಸೂರಿ ಮತ್ತು ನಟ ವಿಜಯ್ ಕುಮಾರ್ ಅವರ ಸಿನಿಮಾಕ್ಕೆ ಸುರೇಂದ್ರ ನಾಥ್ ಮತ್ತು ಅಮ್ರಿ ಜೊತೆಗೆ ಸೂರಿ ಕೂಡ ಸಂಪೂರ್ಣವಾಗಿ ಸ್ಕ್ರಿಪ್ಟ್‌ನತ್ತ ಗಮನ ಹರಿಸಿದ್ದಾರೆ. ಚಿತ್ರದ ಥೀಮ್ ಮತ್ತು ಕಂಟೆಂಟ್ ಫೈನಲ್ ಆದ ನಂತರ ಅಧಿಕೃತ ಘೋಷಣೆ ಮಾಡಲಾಗುವುದು.
ಭೀಮಾ ಸಿನಿಮಾದಲ್ಲಿ ಬ್ಯುಸಿಯಾದ ದುನಿಯಾ ವಿಜಯ್
ಇತ್ತ ನಟ ದುನಿಯಾ ವಿಜಯ್ ಕುಮಾರ್ ತಮ್ಮ ಬಹು ನಿರೀಕ್ಷಿತ ಸಿನಿಮಾ 'ಭೀಮಾ'ಗಾಗಿ ಕೆಲಸ ಮಾಡುತ್ತಿದ್ದಾರೆ. ತಾವೇ ಭೀಮಾ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ಬಿಡುಗಡೆಯಾಗಲಿದೆ. ಇದಆದ ಬಳಿಕ ನಿರ್ದೇಶಕ ಜಡೇಶಾ ಕೆ ಹಂಪಿ ಅವರೊಂದಿಗೆ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ. ನಿರ್ದೇಶಕ ಸೂರಿ ಜೊತೆಗಿನ ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬುದನ್ನು ಚಿತ್ರತಂಡವೇ ಘೋಷಿಸಬೇಕಿದೆ.












Click it and Unblock the Notifications