Mata Guruprasad: ನಿರ್ದೇಶಕ ಮಠ ಗುರು ಪ್ರಸಾದ್ ಆತ್ಮಹತ್ಯೆಗೆ ಶರಣು
ಬೆಂಗಳೂರು, ನವೆಂಬರ್ 03: ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ಸಂಭಾಷಣೆಗಾರ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಮಠ' ಸಿನಿಮಾ ನಿರ್ದೇಶನ ಮಾಡಿದ್ದ ಅವರು ಮಠ ಗುರು ಪ್ರಸಾದ್ ಎಂದೇ ಖ್ಯಾತಿಗಳಿಸಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಮಠ ಗುರುಪ್ರಸಾದ್ (52) ಮಾದನಾಯಕನಹಳ್ಳಿ ಬಳಿಯ ಟಾಟಾ ನ್ಯು ಹೆವೆನ್ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 8 ತಿಂಗಳಿನಿಂದ ಈ ಅಪಾರ್ಟ್‌ಮೆಂಟ್‌ನಲ್ಲಿ ಅವರು ಬಾಡಿಗೆಗೆ ವಾಸವಾಗಿದ್ದರು. ಭಾನುವಾರ ಅವರ ಶವ ಪತ್ತೆಯಾಗಿದ್ದು, ಪೊಲೀಸರ ತನಿಖೆ ಮುಂದುವರೆದಿದೆ.

ಭಾನುವಾರ ಬೆಳಗ್ಗೆ ಮಠ ಗುರುಪ್ರಸಾದ್ ಅವರ ಅಪಾರ್ಟ್‌ಮೆಂಟ್‌ನಿಂದ ವಾಸನೆ ಬರುತ್ತಿತ್ತು. ಆದ್ದರಿಂದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾದನಾಯಕನಹಳ್ಳಿ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಠ ಗುರುಪ್ರಸಾದ್ ಮೊದಲು ಗಿರಿನಗರದಲ್ಲಿ ವಾಸವಾಗಿದ್ದರು. 8 ತಿಂಗಳ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯ ಟಾಟಾ ನ್ಯು ಹೆವೆನ್ ಅಪಾರ್ಟ್‌ಮೆಂಟ್‌ಗೆ ವಾಸ್ತವ್ಯ ಬದಲಿಸಿದ್ದರು. ಕೆಲವೇ ತಿಂಗಳ ಹಿಂದೆ 2ನೇ ವಿವಾಹವನ್ನು ಆಗಿದ್ದರು.
ಮಠ, ಡೈರೆಕ್ಟರ್ ಸ್ಪೆಷಲ್, ಎದ್ದೇಳು ಮಂಜುನಾಥ, ರಂಗನಾಯಕ ಸೇರಿದಂತೆ ಹಲವು ಚಿತ್ರಗಳನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಸಂಭಾಷಣೆಕಾರರಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಉತ್ತಮ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
10ಕ್ಕೂ ಅಧಿಕ ಸಿನಿಮಾಗಳಲ್ಲಿ ಗುರು ಪ್ರಸಾದ್ ನಟಿಸಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಸಹ ಪಾಲ್ಗೊಂಡಿದ್ದರು. ಹಲವು ಚಿತ್ರಗಳಿಗೆ ಅವರು ಸಂಭಾಷಣೆಯನ್ನು ಬರೆದಿದ್ದರು. ತಮ್ಮ ಡೈಲಾಗ್ ಬರವಣಿಗೆ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಮಠ ಗುರುಪ್ರಸಾದ್ ಆತ್ಮಹತ್ಯೆ ಬಗ್ಗೆ ಹಿರಿಯ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. "ಸಾವಿರ ಸಲ ಆತ ಸಾಯುತ್ತೇನೆ ಎಂದು ಹೇಳಿದ್ದ, ನಾನು ಹಲವು ಬಾರಿ ಬುದ್ಧಿವಾದ ಹೇಳಿದ್ದೆ. ಇತ್ತೀಚೆಗೆ ಕುಡಿತದ ಚಟಕ್ಕೆ ಬಿದ್ದು ಸಂಪೂರ್ಣವಾಗಿ ಹಾಳಾಗಿದ್ದ. ಅವರು ಉತ್ತಮ ಬರಹಗಾರ" ಎಂದು ಹೇಳಿದ್ದಾರೆ.
ಮಠ ಗುರುಪ್ರಸಾದ್ ಶುಕ್ರವಾರ ಸಂಜೆ ಅಥವ ಶನಿವಾರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಶವ ಸಂಪೂರ್ಣವಾಗಿ ಬಿಳಿಚಿಕೊಂಡಿದ್ದು, ಊದಿಕೊಂಡಿದೆ. ಶವದ ಕೆಳಗೆ ರಕ್ತ ಹರಿದಿರುವುದು ಕಂಡು ಬರುತ್ತಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಕೌಟುಂಬಿಕ ಸಮಸ್ಯೆ, ಸಾಲಗಾರರ ಕಾಟದಿಂದ ಬೇಸತ್ತು ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದು, ಡೆತ್‌ನೋಟ್ ಬರೆದಿಟ್ಟಿದ್ದಾರೆಯೇ? ಎಂದು ತನಿಖೆಯನ್ನು ನಡೆಸುತ್ತಿದ್ದಾರೆ.
1972ರ ನವೆಂಬರ್ 2ರಂದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಗುರು ಪ್ರಸಾದ್ ಜನಿಸಿದ್ದರು. ಕ್ರೌಡ್ ಫಂಡಿಂಗ್ ಮೂಲಕ ಎದ್ದೇಳು ಮಂಜುನಾಥ-2 ಸಿನಿಮಾ ಮಾಡಲು ಅವರು ತಯಾರಿ ನಡೆಸಿದ್ದರು. ಹಲವು ಕಡೆ ಸಾಲ ಮಾಡಿಕೊಂಡಿದ್ದೇನೆ ಎಂದು ಆಪ್ತರ ಬಳಿ ಅವರು ಹೇಳಿಕೊಂಡಿದ್ದರು ಎಂಬ ಮಾಹಿತಿ ಇದೆ.
ಆತ್ಮಹತ್ಯೆ ತಡೆ ಸಹಾಯವಾಣಿ: ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಆರಂಭಿಸಲಾಗಿದೆ. ದೂರವಾಣಿ ಸಂಖ್ಯೆ 080 - 25497777.











Click it and Unblock the Notifications