ಸೈಮಾ ಅವಾರ್ಡ್ "ಕನ್ನಡ ಚಿತ್ರರಂಗ"ದ ಕಡೆಗಣನೆ ವಿವರಿಸಿದ ನಿರ್ದೇಶಕ ಕವಿರಾಜ್!
SIIMA Award: ಸೈಮಾ ಕನ್ನಡ ಚಿತ್ರರಂಗವನ್ನು ಕಡೆಗಣಿಸಿದೆ ಎಂದು ನಟ ದುನಿಯಾ ವಿಜಯ್ ಅವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಸೈಮಾದ ಹಲವು ವಿಷಯಗಳು ಚರ್ಚೆಯಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕವಿ, ನಿರ್ದೇಶಕ ಹಾಗೂ ಗೀತ ರಚನೆಕಾರರಾದ ಕವಿರಾಜ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸೈಮಾ ಕನ್ನಡ ಚಿತ್ರರಂಗವನ್ನು ಕಡೆಗಣಿಸುವ ಬಗ್ಗೆ ದುನಿಯಾ ವಿಜಯ್ ಸರ್, ಸ್ಟೇಜ್ ಮೇಲೆ ಮಾತಾಡಿದ ದಿಟ್ಟತನನಿಜಕ್ಕೂ ಮೆಚ್ಚುಗೆ ಆಯಿತು. ಹೀಗೆ ನೇರಾನೇರ ವಿರೋಧಿಸದಿದ್ದರೆ ಇದೆಲ್ಲಾ ಯಾವತ್ತೂ ಸರಿ ಆಗುವುದಿಲ್ಲ.ಈ ಕಡೆಗಣಿಸುವ ಕಾಯಿಲೆ ಯಾವತ್ತೂ ಇದ್ದದ್ದೇ. ಅಲ್ಲಲ್ಲಿ ಹಲವರು ದೂರಿದ್ದರೂ, ನೇರವಾಗಿ ಅದೇ ವೇದಿಕೆಯಲ್ಲಿ ವಿಜಯ್ ಅವರು ಮಾತಾಡಿದ್ದು ಪರಿಣಾಮಕಾರಿ. ಅವರ ನಡೆಯನ್ನು ಬೆಂಬಲಿಸಿ ಸೈಮಾ ಹೀಗೆ ಕಡೆಗಣಿಸುವ, ಹಗುರವಾಗಿ ತೆಗೆದುಕೊಳ್ಳುವ ಅನುಭವ ನಾನೂ ಕೂಡಾ ಎದುರಿಸಿ ವಿರೋಧಿಸಿದ ಪ್ರಕರಣವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಕವಿರಾಜ್ ಅವರು ತಮ್ಮ ಬರಹವನ್ನು ಶುರು ಮಾಡಿದ್ದಾರೆ.

2012 ನೇ ಸಾಲಿನಲ್ಲಿ ಮೊದಲ ಸೈಮಾ ಅವಾರ್ಡ್ ದುಬೈನಲ್ಲಿ ಜರುಗಿತ್ತು. ನಾನು ಬರೆದ ಸಂಜು ವೆಡ್ಸ್ ಗೀತಾದ 'ಗಗನವೇ ಬಾಗಿ' ಹಾಡು ನಾಮಿನೇಟ್ ಆಗಿತ್ತು. ಆ ವರ್ಷದ ಪ್ರಶಸ್ತಿ ನನಗೇ ಬಂದಿದೆ ಅನ್ನೋ ಕ್ಲೂ ಕೂಡಾ ಸಿಕ್ಕಿತ್ತು. ದುಬೈಗೆ ಬನ್ನಿ ಅಂತಾ ಸೈಮಾ ಆಹ್ವಾನಿಸಿದಾಗ ನಿಜಕ್ಕೂ ಖುಷಿ ಆಗಿತ್ತು. ಮೊದಲ ಬಾರಿ ದುಬೈ ಅಂತಾ ಐಷಾರಾಮಿ ದೇಶಕ್ಕೆ ಉಚಿತ ವಿಮಾನ ಪ್ರಯಾಣ, ವಾಸ್ತವ್ಯ , ಅಲ್ಲಿ ನಡೆಯುವ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸೋದು ಎಲ್ಲವೂ ಉತ್ಸಾಹ, ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಅಲ್ಲಿ ಹೋಗಿ ಇಳಿದ ನಂತರವೇ ಅಲ್ಲಿ ಕನ್ನಡ ಚಿತ್ರರಂಗದವರನ್ನು ಕಡೆಗಣಿಸುವ ವಿಚಾರ ಗೊತ್ತಾಗಿದ್ದು. ಆದಷ್ಟು 'ಹಾಪ್ ರೇಟ್ - ಚೀಪ್ ರೇಟ್' ಅಲ್ಲಿ ನಮ್ಮ ಖರ್ಚುಗಳನ್ನು ನಿಭಾಯಿಸಬೇಕು ಎಂಬುದೇ ಆಯೋಜಕರ ಒಂದಂಶದ ಪ್ರೋಗ್ರಾಮ್ ಆಗಿತ್ತು ಎಂದು ಕವಿರಾಜ್ ಅವರು ಹೇಳಿದ್ದಾರೆ.
ಹೋಗಲಿ ವಿಮಾನದ ಟಿಕೆಟ್ ಕೊಟ್ಟು ಉಚಿತವಾಗಿ ವಿದೇಶಕ್ಕೆ ಕರೆದುಕೊಂಡು ಬಂದಿದ್ದಾರಲ್ಲ ಅಂತಾ ಅವೆಲ್ಲವನ್ನು ಹೇಗೋ ಸಹಿಸಿಕೊಂಡರೆ ಸಂಜೆ ಹೊತ್ತಿಗೆ ಒಂದೊಂದು ರೂಮ್ ಅನ್ನು ಇಬ್ಬರು ಶೇರ್ ಮಾಡಬೇಕು ಅಂತಾ ಆಯೋಜಕರು ಸೂಚಿಸಿದರು. ಅಷ್ಟು ಆಪ್ತರಲ್ಲದವರೊಂದಿಗೆ ರೂಮ್ ಶೇರ್ ಮಾಡುವುದು ನನ್ನ ಪಾಲಿಗೆ ಅತ್ಯಂತ uncomfort ವಿಚಾರವಾಗಿತ್ತು.
ನಾನು ಅದು ಸಾಧ್ಯವೇ ಇಲ್ಲ ಅಂದೆ. ಇಲ್ಲ ಸರ್ ರೂಲ್ಸ್ ಇರೋದೇ ಹಾಗೇ ಅಂದರು. ಒಂದಷ್ಟು ವಾದದ ನಂತರ ನನಗೆ ಕೋಪವೇ ಬಂದಿತು. ನೀವ್ಯಾರು ನಮಗೆ ರೂಲ್ಸ್ ಮಾಡಲು, ನಾವೇನು ನಿಮ್ಮನ್ನು ಬೇಡಿಕೊಂಡಿದ್ದೇವಾ ನಮಗೆ ದುಬೈ ಅಲ್ಲಿ ಪ್ರಶಸ್ತಿ ಕೊಡಿ ಅಂತಾ ? ಕರ್ಕೊಂಡು ಬಂದ ಮೇಲೆ ಗೌರವದಿಂದ ನಡೆಸಿಕೊಳ್ಳಬೇಕು. ನಾನು ರೂಮ್ ಶೇರ್ ಮಾಡಲ್ಲ. ನಿಮಗೆ ಆಗಲ್ಲ ಅಂದರೆ ಹೇಳಿ ನಾನೇ ಹಣ ಕೊಟ್ಟು ಸಿಂಗಲ್ ರೂಮ್ ತಗೋತೀನಿ ಅಂತಾ ಜೋರಾಗೇ ರೇಗಾಡಿದೆ. ಹಾಗೇ ತೆಗೆದುಕೊಳ್ಳಲು ಸಹಾ ಮುಂದಾದೆ. ಕೊನೆಗೆ ವಿಧಿಯಿಲ್ಲದೇ ಅವರ ಕಡೆಯಿಂದಾನೆ ಸಿಂಗಲ್ ರೂಮ್ ಕೊಡಲಾಯಿತು. ಇಡೀ ಕಾರ್ಯಕ್ರಮದಲ್ಲಿ ನನ್ನನ್ನು ಆಯೋಜಕರು ಒಂದು ರೀತಿ ವಿಲನ್ ಹಾಗೇ ನೋಡುತ್ತಿದ್ದರು.
ಅನಂತರ ಬಹುಶಃ ನನ್ನ ಹೆಸರು ಅವರ ಬ್ಲಾಕ್ ಲಿಸ್ಟ್ ಸೇರಿತು. ಅಲ್ಲಿಂದ ಸುಮಾರು 12 ವರ್ಷಗಳಾಯಿತು ಅಪ್ಪಿತಪ್ಪಿಯೂ ಅವರು ನನ್ನನ್ನು ಸಮಾರಂಭಕೆ ಕರೆದಿಲ್ಲ, ಈ ನಡುವೆ ನನಗೆ ಬೇರೆ ಹಲವು ಪ್ರಶಸ್ತಿಗಳು ಬಂದರೂ, ಇವರ ಸಂಸ್ಥೆಯಿಂದ ಪ್ರಶಸ್ತಿ ಬರುವುದಿರಲಿ, ಬಹುತೇಕ ನಾಮಿನೇಶನ್ ಕೂಡ ಮಾಡುವುದಿಲ್ಲ. ನಮಗೆ ಗೌರವ ಕೊಡದ ಸ್ಥಳದಲ್ಲಿ ನಮ್ಮ ಚಪ್ಪಲಿಯನ್ನು ಬಿಡಬಾರದು ಎಂಬ ನಿಲುವಿನ ನನಗೆ ಈ ಕುರಿತು ಸ್ವಲ್ಪವೂ ವಿಷಾದ ಕೂಡಾ ಇಲ್ಲಾ. ಬಹುತೇಕ ಪ್ರಶಸ್ತಿ ಸಮಾರಂಭಗಳಲ್ಲಿ ಪ್ರತಿಭೆಗಳನ್ನು ಗೌರವಿಸುವ ಕಾರ್ಯ ಬರೀ ತೋರಿಕೆ ಅಷ್ಟೇ. ಇದೊಂದು ಸ್ಪಾನ್ಸರ್ಸ್, ಟೆಲಿಕಾಸ್ಟ್ ರೈಟ್ಸ್ ಮೂಲಕ ಭರ್ಜರಿ ಹಣ ಗಳಿಸುವ ಪಕ್ಕ ಬಿಸಿನೆಸ್ ಮಾಡೆಲ್.ಹಾಗಾಗಿ ಈ ರೀತಿ ಅಗೌರವ ತೋರುವ ಜಾಗಗಳಿಗೆ ಹೋಗದಿರುವ ದಿಟ್ಟ ನಿರ್ಧಾರವನ್ನು ನಮ್ಮ ಚಿತ್ರರಂಗ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.












Click it and Unblock the Notifications