'ದುಡ್ಡು ಕೊಟ್ಟು ಥಿಯೇಟರ್‌ಗೆ ಜನ ಕರೆಸುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು'
ಬೆಂಗಳೂರು, ಜುಲೈ 23: ಟೀಸರ್ ಹಾಗೂ ಹಾಡುಗಳಿಂದಲೇ ಸಖತ್ ಹೈಪ್ ಕ್ರಿಯೆಟ್ ಮಾಡಿದ್ದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರ ಜುಲೈ 19ರಂದು ತೆರೆ ಕಂಡಿದೆ. ಚಂದನ್ ಶೆಟ್ಟಿ, ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್ ಅಭಿನಯದ ಅರುಣ್ ಅಮುಕ್ತ ರಚಿಸಿ-ನಿರ್ದೇಶಿಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ನಿರೀಕ್ಷಿಸಿದ ಮಟ್ಟದ ಫಲಿತಾಂಶ ತಂದುಕೊಟ್ಟಿಲ್ಲ. ಇದರಿಂದ ಚಿತ್ರತಂಡಕ್ಕೆ ತೀವ್ರ ಬೇಸರವಾಗಿದ್ದು, ನಿರ್ದೇಶಕ ಅರುಣ್ ಅಮುಕ್ತ ಈ ಬಗ್ಗೆ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್ ಅಮುಕ್ತ, ಚಿತ್ರದ ಬಗ್ಗೆ ನಾನು ಅಂದುಕೊಂಡಿರುವ ಫಲಿತಾಂಶ ಬಂದಿಲ್ಲ. ನನ್ನ ಒಬ್ಬನದೇ ಅಲ್ಲ. ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಒಂದು ಸಿನಿಮಾ ಉಸಿರಾಡಲು ಬೇಕಾಗುವಷ್ಟು ವೀಕ್ಷಕರ ಕೊರತೆ ಇದೆ. ಇದು ನನ್ನ ಒಬ್ಬನ ಸಮಸ್ಯೆ ಅಲ್ಲ. ಎಲ್ಲಾ ಕನ್ನಡ ಸಿನಿಮಾಗಳಿಗೂ ಸಮಸ್ಯೆ ಆಗಿದೆ. ಕಳೆದ ಆರು ತಿಂಗಳಿಂದ ಇದೇ ಸಮಸ್ಯೆ ಇದೆ ಎಂದರು.

ನಾವು ಕೈ ಮುಗಿಯಬೇಕೋ? ಕಾಲಿಗೆ ಬೀಳಬೇಕೋ ಗೊತ್ತಿಲ್ಲ. ಆದರೆ ನಾವು ಈ ರೀತಿ ಮಾಡಬಾರದು ಆದರೆ ಈಗ ಆ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಯಾರು..? ಚಿತ್ರಮಂದಿರಕ್ಕೆ ದುಡ್ಡುಕೊಟ್ಟು ಜನ ಕರೆಸುತ್ತಾರಲ್ಲ ಅವರು ಸಿಕ್ಕರೆ ಚಪ್ಪಲಿಯಲ್ಲಿ ಹೊಡೆಯಬೇಕು. ಒಂದು ಥಿಯೇಟರ್‌ನಲ್ಲಿ ಒಳ್ಳೆಯ ಸಿನಿಮಾ ನಡೆಯುತ್ತಿದ್ದರೆ, ಪಕ್ಕದ ಥಿಯೇಟರ್‌ಗೆ ದುಡ್ಡು ಕೊಟ್ಟು ಜನರನ್ನು ಕರೆಸುತ್ತಾರೆ. ನಿರ್ಮಾಪಕರು ಸಿನಿಮಾಗೆ ದುಡ್ಡು ಕೊಡುವುದಲ್ಲದೇ, ಇಂತಹದಕ್ಕೂ ದುಡ್ಡು ಕೊಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ಒಳ್ಳೆಯ ಸಿನಿಮಾಗಳಿಗೆ ತೊಂದರೆ ಆಗುತ್ತಿದೆ. ಈ ತೊಂದರೆ ನನಗೆ ಆಗುತ್ತಿದೆ. ಈಗಲೂ ನಾನು ಅನುಭವಿಸುತ್ತಿದ್ದೇನೆ. ಈ ಚಿತ್ರದ ನಿರ್ದೇಶಕ ಹಾಗೂ ವಿತರಕ ಎರಡೂ ನಾನೇ. ನನ್ನ ಹತ್ತಿರ ರೆಕಾರ್ಡ್ ಇದೆ. ಇಪ್ಪತೈದಯ ಮಾಲ್ ಹಾಗೂ ನೂರೈವತ್ತು ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಮಾಡಿದ್ದೇವೆ. ಎಲ್ಲಾ ಕಡೆಯಲ್ಲೂ ಆಡಿಯೆನ್ಸ್ ಕೊರತೆ ಇದೆ.

ಸಿನಿಮಾ ಯಾರೇ ಮಾಡಿದ್ದರೂ, ಯಾವ ನಟನೇ ಮಾಡಿದ್ದರೂ ಮೊದಲು ಬರುತ್ತಿದ್ದದ್ದು ಕಾಲೇಜು ಹುಡುಗರು. ಆದರೆ ಅವರಿಗೆ ಹಾಸ್ಟೆಲ್, ಕಾಲೇಜು ಬಳಿಗೆ ಹೋಗಿ ಫ್ರೀ ಟಿಕೆಟ್ ಕೊಟ್ಟರೆ ಅವರು ಹೇಗೆ ಬೇರೆ ಸಿನಿಮಾಗಳಿಗೆ ಬರುತ್ತಾರೆ. ಇದೇ ಪರಿಸ್ಥಿತಿ ಮುಂದುವರಿದರೆ ನಾವಿರಲ್ಲ, ಪ್ರೊಡಕ್ಷನ್ ಹೌಸ್ ಇರಲ್ಲ. ಈಗಾಗಲೇ ಅದೇ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಮುಂದೆನಾಗುತ್ತೋ ಗೊತ್ತಿಲ್ಲ ಎಂದರು.
ನಮ್ಮದು ಮೂರು ವರ್ಷಗಳ ಶ್ರಮ, ಕೋಟ್ಯಂತರ ರೂಪಾಯಿ ವ್ಯಹಿಸಿದ್ದೇವೆ. ಎಲ್ಲರೂ ಸೂಪರ್ ಆಗಿ ನಟನೆ ಮಾಡಿದ್ದಾರೆ. ಪ್ರತಿವರ್ಷ ನೂರೈವತ್ತು ಹೊಸ ಫೇಸ್‌ಗಳು ಲಾಂಚ್ ಆಗುತ್ತಿದೆ. ಆದರೆ ಅಷ್ಟು ಹೀರೋಗಳು ಎಲ್ಲಿದ್ದಾರೆ. ಜನ ಹೊಸಬರನ್ನು ಒಪ್ಪಿಕೊಳ್ಳುತ್ತಿಲ್ಲ. ಜನ ಸಿನಿಮಾ ನೋಡುತ್ತಿಲ್ಲ. ಹೊಸ ಪ್ರತಿಭೆಗಳು ಅದರಲ್ಲೂ ಹೊಸ ಮುಖಗಳಿಗೆ ಇಲ್ಲಿ ಜಾಗವಿಲ್ಲ. ನನ್ನ ಮನಸ್ಸು ಈಗಲೂ ಹೇಳುತ್ತಿದೆ ಸಿನಿಮಾ ಮಾಡಬಾರದು ಅಂತಾ. ಕಲೆಕ್ಷನ್ ಚೆನ್ನಾಗಿದೆ ಎಲ್ಲಾ ಇದೆ. ಆದರೆ ಪ್ರೇಕ್ಷಕರ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications