ಶ್ರೀಲೀಲಾ ಕನ್ನಡ ಕೇಳಿದ್ರೆ ಖುಷಿಯಾಗುತ್ತೆ: ರಿಷಬ್ ಮುಂದೆ ರಶ್ಮಿಕಾಗೆ ಟಾಂಟ್ ಕೊಟ್ರಾ ನಿರೂಪಕ?
ಸ್ಯಾಂಡಲ್‌ವುಡ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಈಗ ಹೊಸದೊಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಪ್ರತಿಷ್ಠಿತ 'ಚಿತ್ತಾರ ಸ್ಟಾರ್ ಅವಾರ್ಡ್ಸ್ 2026' ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಘಟನೆಯೊಂದು, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದಂತಿದೆ ಎಂಬ ಚರ್ಚೆಗಳಿಗೆ ಗ್ರಾಸವಾಗಿದೆ. ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರು ವೇದಿಕೆಯಲ್ಲಿ ಆಡಿದ ಮಾತುಗಳು ಈಗ ಈ ಎಲ್ಲ ಅನುಮಾನಗಳಿಗೆ ಕಾರಣವಾಗಿವೆ.
ಚಿತ್ತಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ಅವರಿಗೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ನಿರೂಪಕ ಅಕುಲ್ ಬಾಲಾಜಿ ಅವರು, ಈಗ ಕೇವಲ ಶ್ರೀಲೀಲಾ ಅಲ್ಲ, 'ಡಾ. ಶ್ರೀಲೀಲಾ' ಎಂದು ಜೋರಾಗಿ ಕೂಗಿದರು. ಈ ಮಾತು ಕೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಗಣ್ಯರು ಹಾಗೂ ಅಭಿಮಾನಿಗಳು ಜೋರಾದ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಕನ್ನಡಿಗರ ಸಪೋರ್ಟ್‌ಗೆ ಶ್ರೀಲೀಲಾ ಕೃತಜ್ಞತೆ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟಿ ಶ್ರೀಲೀಲಾ, ತಮ್ಮ ಯಶಸ್ಸಿನ ಹಿಂದೆ ಕನ್ನಡಿಗರ ಪಾತ್ರ ದೊಡ್ಡದಿದೆ ಎಂಬುದನ್ನು ನೆನಪಿಸಿಕೊಂಡರು. "ಕನ್ನಡಿಗರಾದ ನೀವು ನನ್ನ ಕೈಹಿಡಿದು ಮುನ್ನಡೆಸಿದ್ದೀರಿ, ನನಗೆ ಬೆಂಬಲ ನೀಡಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೀರಿ. ನಿಮ್ಮ ಈ ಪ್ರೀತಿ ಮತ್ತು ಸಪೋರ್ಟ್ ನನ್ನ ಮೇಲೆ ಯಾವಾಗಲೂ ಹೀಗೇ ಇರಲಿ" ಎಂದು ಭಾವುಕರಾಗಿ ನುಡಿದರು.
ರಶ್ಮಿಕಾ ಮಂದಣ್ಣಗೆ ಪರೋಕ್ಷ ಟಾಂಟ್?
ಅಸಲಿ ಚರ್ಚೆ ಶುರುವಾಗಿದ್ದೇ ಆ ಬಳಿಕ. ಶ್ರೀಲೀಲಾ ಅವರ ಭಾಷಾಭಿಮಾನವನ್ನು ಕೊಂಡಾಡುವಾಗ ಅಕುಲ್ ಬಾಲಾಜಿ ಅವರು ವೇದಿಕೆಯ ಮೇಲಿದ್ದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರನ್ನು ಉದ್ದೇಶಿಸಿ ಒಂದು ಮಹತ್ವದ ಮಾತು ಹೇಳಿದರು. "ನಮ್ಮ ಕನ್ನಡದ ಹುಡುಗಿಯರು ಬೇರೆ ಭಾಷೆಗಳಿಗೆ ಹೋಗಿ, ಎಲ್ಲ ಕಡೆ ಓಡಾಡಿ ನಮ್ಮ ಹೆಮ್ಮೆಯ ಕನ್ನಡ ಭಾಷೆಯನ್ನು ಮರೆಯದೆ ಇಷ್ಟೊಂದು ಸುಂದರವಾಗಿ ಮಾತನಾಡುತ್ತಾರಲ್ಲ, ಅದು ನಿಜಕ್ಕೂ ಖುಷಿ ತರುವ ವಿಚಾರ. ಅಂಥವರಿಗೆಲ್ಲ ನಾವು ಜೋರಾಗಿ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಬೇಕು" ಎಂದರು.
ಅಕುಲ್ ಬಾಲಾಜಿ ಅವರ ಈ ಹೇಳಿಕೆಯ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರು ಪರಭಾಷಾ ಸಂದರ್ಶನಗಳಲ್ಲಿ ಕನ್ನಡ ಚಿತ್ರರಂಗ ಹಾಗೂ ಭಾಷೆಯ ಬಗ್ಗೆ ನೀಡಿದ್ದ ಕೆಲವು ಹೇಳಿಕೆಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದವು. ಹೀಗಾಗಿ ಅಕುಲ್ ಬಾಲಾಜಿ ಅವರು 'ಬೇರೆ ಭಾಷೆಗೆ ಹೋದರೂ ಕನ್ನಡ ಮರೆಯದ ಹುಡುಗಿಯರು' ಎಂದು ಹೇಳುವ ಮೂಲಕ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಟಾಂಗ್ ನೀಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟವರು. ಆದರೆ ಆ ಬಳಿಕ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾದ ಮೇಲೆ ಅವರು ತಮ್ಮನ್ನು ಲಾಂಚ್ ಮಾಡಿದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲು ಹಿಂಜರಿದರು ಎಂಬ ಆರೋಪ ಕೇಳಿಬಂದಿತ್ತು. ಸಂದರ್ಶನವೊಂದರಲ್ಲಿ ಸನ್ನೆ ಮೂಲಕ ಆ ಸಂಸ್ಥೆಯನ್ನು ತೋರಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ 'ಕಾಂತಾರ' ಸಿನಿಮಾ ಬಿಡುಗಡೆಯಾದಾಗಲೂ ಅವರು ಸಿನಿಮಾ ನೋಡಿಲ್ಲ ಎಂದು ಹೇಳಿದ್ದು ವಿವಾದವನ್ನು ದೊಡ್ಡದಾಗಿಸಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬಹುತೇಕ ಕನ್ನಡಿಗರು ಅಕುಲ್ ಬಾಲಾಜಿ ಅವರ ಹೇಳಿಕೆಯನ್ನು ಶ್ಲಾಘಿಸುತ್ತಿದ್ದಾರೆ. "ಬೇರೆ ಭಾಷೆಗೆ ಹೋದ ತಕ್ಷಣ ಮಾತೃಭಾಷೆಯನ್ನು ಮರೆಯುವವರ ಮಧ್ಯೆ, ಶ್ರೀಲೀಲಾ ಅವರಂತಹ ನಟಿಯರು ಎಲ್ಲೇ ಹೋದರೂ ಹೆಮ್ಮೆಯಿಂದ ಕನ್ನಡ ಮಾತನಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.













Click it and Unblock the Notifications