ಗುರುಪ್ರಸಾದ್ ನಮ್ಮ ಕನಕಪುರದವರು: ಡಿಕೆಶಿ ಸಂತಾಪ
ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ನೇಣು ಬಿಗಿದಿರುವ ಸ್ಥಿತಿಯಲ್ಲಿ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರ ನಿಧನಕ್ಕೆ ಗಣ್ಯರು ಸಂತಾಸ ಸೂಚಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಗುರುಪ್ರಸಾದ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರು ನಮ್ಮ ಕನಕಪುರದವರೇ ಆಗಿದ್ದರು ಎಂದಿದ್ದಾರೆ.
ಸೃಜನಶೀಲ ನಿರ್ದೇಶಕರು ಹಾಗೂ ಕನಕಪುರ ಮೂಲದವರೇ ಆದ ಗುರುಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಗಿದೆ. ಬೆಳ್ಳಿತೆರೆ ಹಾಗೂ ಕಿರುತೆರೆಗೆ ತಮ್ಮದೇ ಶೈಲಿಯ ಕೊಡುಗೆ ನೀಡಿದ ಗುರುಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರು ಹಾಗೂ ಆತ್ಮೀಯರ ನೋವಿನಲ್ಲಿ ನಾನೂ ಕೂಡ ಭಾಗಿ ಎಂದು ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಮಠ ಖ್ಯಾತಿಯ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಮಾದನಾಯಕನಹಳ್ಳಿ ಬಳಿಯ ಟಾಟಾ ನ್ಯು ಹೆವೆನ್ ಅಪಾರ್ಟ್‌ಮೆಂಟ್‌ನಲ್ಲಿ ಗುರುಪ್ರಸಾದ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಜಗ್ಗೇಶ್ ತಾರಾಗಣದ ಮಠ ಸಿನಿಮಾದಿಂದ ಗುರುಪ್ರಸಾದ್ ಹೆಚ್ಚು ಖ್ಯಾತಿ ಗಳಿಸಿದ್ದರು. ಎದ್ದೇಳು ಮಂಜುನಾಥ, ಸೂಪರ್ ರಂಗ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದರು. ಬಳಿಕ ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಯಾಗಿ, ವಿವಿಧ ಕಾರ್ಯಕ್ರಮಗಳ ತೀರ್ಪುಗಾರರಾಗಿಯೂ ಗುರುಪ್ರಸಾದ್ ಹೆಸರು ಮಾಡಿದ್ದರು. ಈಗ ಇದ್ದಕ್ಕಿದ್ದಂತೆ ಅವರ ಆತ್ಮಹತ್ಯೆಯ ವಿಚಾರ ಸ್ಯಾಂಡಲ್‌ವುಡ್‌ನ್ನು ಬೆಚ್ಚಿಬೀಳಿಸಿದೆ.

ಗುರುಪ್ರಸಾದ್ ಆಪ್ತರು ಹೇಳುವಂತೆ ಎರಡು ವಾರಗಳ ಹಿಂದೆ ಗುರು ವಿರುದ್ಧ ಕೇಸ್ ದಾಖಲಾಗಿತ್ತು. ಪುಸ್ತಕ ಖರೀದಿ ಮಾಡಿ ಹಣ ಕೊಟ್ಟಿಲ್ಲ ಎಂದು ಪುಸ್ತಕ ಮಳಿಗೆ ಮಾಲೀಕರು ದೂರು ಕೊಟ್ಟಿದ್ದಾರೆ. ಪುಸ್ತಕಗಳಿಗೆ 65 ಸಾವಿರ ನೀಡಬೇಕಿತ್ತು ಎನ್ನಲಾಗಿದೆ. ಪುಸ್ತಕ ಖರೀದಿ ಮಾಡಿ ಹಣ ನೀಡದೇ ಇದ್ದರಿಂದ ಜಯನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಬಿಟ್ಟರೆ ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ನಮಗೂ ಅರ್ಥವಾಗುತ್ತಿಲ್ಲ ಎಂದು ಆಪ್ತರು ಹೇಳಿಕೊಳ್ಳುತ್ತಿದ್ದಾರೆ.
ಇನ್ನು ಗುರುಪ್ರಸಾದ್ ಅವರೊಂದಿಗೆ ಒಡನಾಟ ಹೊಂದಿಗೆ ನಟ ಜಗ್ಗೇಶ್ ಕೂಡ ಮಾತನಾಡಿದ್ದು, ಗುರು ನಿರ್ದೇಶನದ ಮಠ ಸಿನಿಮಾದಲ್ಲಿ ನಾನು ನಟಿಸಿದ್ದೆ. ಅವರೊಂದಿಗೆ ನನಗೆ ಚೆನ್ನಾಗಿ ಒಡನಾಟವಿತ್ತು. ಅವರು ಸಾವಿರಾರು ಬಾರಿ ಅವರು ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದರು. ಸೋಲು ಕಂಡ ತಕ್ಷಣ ಸಾವು ಎಂದು ಸಾವಿರಾರು ಬಾರಿ ಹೇಳಿದ್ದರು. ನಾನು ಅವರಿಗೆ ಬುದ್ಧಿ ಹೇಳಿದ್ದೆ. ನಾನು ನೆನಪಿಟ್ಟು ಹೋಗ್ತೀನಿ ಎಂದು ಗುರು ಹೇಳಿದ್ದರು. ಅವರ ದಾಂಪತ್ಯದಲ್ಲೂ ಬಿರುಕಿತ್ತು ಎಂದಿದ್ದಾರೆ.
ಮಠ ಸಿನಿಮಾದಲ್ಲಿ ನಟಿಸಿದ್ದ ನಟ ತಬಲಾ ನಾಣಿ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ನನಗೆ ಕನ್ನಡ ಚಿತ್ರರಂಗದಲ್ಲಿ ಜೀವನ ಕೊಟ್ಟಿದ್ದೇ ಗುರುಪ್ರಸಾದ್ ಎಂದು ನೆನೆದಿದ್ದಾರೆ. ಆತ್ಮಹತ್ಯೆ ಸುದ್ದಿ ಕೇಳಿ ಬೇಸರವಾಯ್ತು. ಹತ್ತು ಜನರಿಗಿದ್ದ ಬುದ್ಧಿ ಅವರಿಗಿತ್ತು. ಈ ರೀತಿ ಯಾಕಾಗಿದೆ ಎಂಬುದು ಈಗಲೂ ಅರ್ಥವಾಗುತ್ತಿಲ್ಲ. ಅವರಿಗೆ ಸಹವಾಸಗಳ ಸಮಸ್ಯೆ ಇತ್ತೋ ಅಥವಾ ದುಶ್ಚಟಗಳ ಸಮಸ್ಯೆ ಇತ್ತೋ ಗೊತ್ತಿಲ್ಲ. ಅದರ ಬಗ್ಗೆ ನಾವು ಮಾನಾಡಿದ್ರೂ ತಪ್ಪಾಗುತ್ತೆ. ಎಷ್ಟಾದರೂ ಅವರು ನಮಗೆ ಗುರುವಿನ ಸ್ಥಾನದಲ್ಲಿದ್ದವರು ಎಂದಿದ್ದಾರೆ.












Click it and Unblock the Notifications