Darshan Thoogudeepa: ನನ್ನದು ಸಾಯಿಸೋ ಮನಸ್ಸಲ್ಲ- ದರ್ಶನ್
ದರ್ಶನ್‌ಗೆ ಈಗ ಪಶ್ಚಾತ್ತಾಪ ಕಾಡುತ್ತಿದೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಕುಟುಂಬಸ್ಥರು ನೆನಪಾಗುತ್ತಿದ್ದಾರೆ. ಕುಟುಂಬಸ್ಥರೊಂದಿಗೆ ಕಾಲ ಕಳೆಯುವ ಮನಸ್ಸಾಗುತ್ತಿದೆ. ತಾಯಿ ಮಾಡಿದ ಆಹಾರ ಸೇವಿಸಲು ಜೀವ ಹಂಬಲಿಸುತ್ತಿದೆ. ತಾವು ಮಾಡಿದ ತಪ್ಪಿನ ಅರಿವು ಈಗ ಕಾಡತೊಡಗಿದೆ.
ಹೌದು.. ದರ್ಶನ್ ಜೈಲು ಸೇರಿ ನೂರು ದಿನಗಳು ಕಳೆದಿವೆ. ಪರಪ್ಪನ ಅಗ್ರಹಾರದಲ್ಲಿ ರಾಜನಂತೆ ಮೆರೆಯುತ್ತಿದ್ದ ದರ್ಶನ್‌ಗೆ ತನ್ನ ತಪ್ಪಿನ ಅರಿವು ಆಗಿರಲಿಲ್ಲ. ಆದರೀಗ ಬಳ್ಳಾರಿ ಜೈಲಿನಲ್ಲಿ ಬಯಸಿದ್ದು ಸಿಗದೆ ಜೀವನದ ಅನುಭವವಾಗುತ್ತಿದೆ. ಊಟದ ಬೆಲೆ, ಜೀವನದ ಬೆಲೆ, ಜೀವದ ಬೆಲೆ ಎಲ್ಲವೂ ಅರ್ಥವಾಗುತ್ತಿದೆ. ಹೀಗಾಗಿ ತಮಗೆ ಆದ ತಪ್ಪಿನ ಅರಿವನ್ನು ಸಿಬ್ಬಂದಿಗಳೊಂದಿಗೆ ಹೇಳಿಕೊಂಡಿದ್ದಾರೆ.

'ನನ್ನದು ಸಾಯಿಸೋ ಮನಸ್ಸಲ್ಲ. ಏನೋ ಮಾಡೋಕೆ ಹೋಗಿ ಏನೋ ಆಗೋಯ್ತು. ನಾನಂತೂ ಕೊಲೆ ಮಾಡಿಲ್ಲ. ಮೇಲೊಬ್ಬ ಇದಾನೆ ನೋಡಿಕೊಳ್ಳುತ್ತಾನೆ. ಹೊರಗಡೆ ಹೋದ ಬಳಿಕ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡ್ತೀನಿ. ಅವರಿಗೆ ಸಹಾಯ ಮಾಡ್ತೀನಿ' ಅಂತ ದರ್ಶನ್ ಬಳ್ಳಾರಿ ಜೈಲು ಸಿಬ್ಬಂದಿಯ ಬಳಿ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದರ್ಶನ್ ಇಂತಹ ಮಾತುಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೂ ಆಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾಥಿತ್ಯ ಹಾಗೂ ಕ್ಯಾಮಾರಕ್ಕೆ ಮಧ್ಯದ ಬೆರಳು ತೋರಿಸಿದ್ದು ದರ್ಶನ್‌ಗೆ ಇನ್ನೂ ದುರಹಂಕಾರ ಕಡಿಮೆಯಾಗಿಲ್ಲ ಅಂತಲೇ ಭಾವಿಸಲಾಗಿತ್ತು. ಆದರೆ ಯಾವಾಗ ಬಳ್ಳಾರಿ ಜೈಲಿನಲ್ಲಿ ಬಯಸಿದ್ದು ಸಿಗಲಿಲ್ಲವೋ, ಅವರ ನಡೆಯನ್ನು ಬದಲಾಯಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಯ್ತು ಆಗ ದರ್ಶನ್‌ಗೆ ಸಂಕಷ್ಟ ಶುರುವಾಯ್ತು. ಬಿಡುಗಡೆ ಬಗ್ಗೆ ಆತಂಕ ಶುರುವಾಯ್ತು. ಈಗ ನಿಜವಾದ ಪಶ್ಚಾತ್ತಾಪವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಹೌದು... ದರ್ಶನ್ ಅವರಿಗೆ ಈಗ ತನ್ನವರು ತಮ್ಮೊಂದಿಗೆ ಇಲ್ಲದ ದಿನಗಳನ್ನು ಕಳೆಯಲು ಸಾಧ್ಯವಾಗುತ್ತಿಲ್ಲ. ಪತ್ನಿ, ಮಗ, ತಾಯಿ ಸಂಬಂಧಿಗಳಿಂದ ದೂರವಿರುವುದರ ಕಷ್ಟದ ಅರಿವು ಆಗುತ್ತಿದೆ. ಅಲ್ಲದೆ ತಾಯಿ ಪ್ರೀತಿಯಿಂದ ಒಬ್ಬೊಂಟಿಯಾಗಿ ಬದುಕುವುದು ಎಷ್ಟು ಕಷ್ಟ ಅನ್ನೋದು ಅರ್ಥವಾಗುತ್ತಿದೆ. ಇದೇ ಕಷ್ಟವನ್ನು ರೇಣುಕಾಸ್ವಾಮಿ ಕುಟುಂಬದವರು ಅನುಭವಿಸುತ್ತಿರಬಹುದು ಎನ್ನುವ ಅರಿವು ಕೂಡ ಆಗಿದೆ.

ಪ್ರತಿಯೊಂದು ನೋವು ತಮಗೆ ಅನುಭವಕ್ಕೆ ಬಂದಾಗಲೇ ಆಗೋದು ಅನ್ನೋದಕ್ಕೆ ದರ್ಶನ್ ಅವರೇ ಸಾಕ್ಷಿ. ಹೀಗಾಗಿ ತಾಯಿಯನ್ನು ನೋಡುವ ಆಸೆಯನ್ನು ದರ್ಶನ್ ವ್ಯಕ್ತಪಡಿಸಿದ್ದರು. ಕಳೆದ ದಿನ ತಾಯಿ, ಅಕ್ಕ, ಅಳಿಯಂದಿರನ್ನು ನೋಡಿ ದರ್ಶನ್ ಕಣ್ಣು ತುಂಬಿ ಬಂದಿತ್ತು. ದರ್ಶನ್ ಕಂಡು ತಾಯಿ ಜೀವ ನರಳಾಡಿದೆ.
ಒಟ್ಟಿನಲ್ಲಿ ಜೈಲಿನಲ್ಲಿ ದರ್ಶನ್ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನೂರು ದಿನಕ್ಕೆ ತನ್ನ ಕುಟುಂಬಸ್ಥರನ್ನು ಬಿಟ್ಟಿರುವುದು ದರ್ಶನ್‌ಗೆ ಕಷ್ಟವಾದರೆ ಜೀವನದುದ್ದಕ್ಕೂ ರೇಣುಕಾಸ್ವಾಮಿ ತಂದೆ ತಾಯಿ ಕುಟುಂಬಸ್ಥರು ಹೇಗಿರಬೇಕು? ಈ ಸಣ್ಣ ವಿಷಯದ ಅರಿವು ದರ್ಶನ್‌ಗೆ ಈಗ ಆಗಿದೆ.












Click it and Unblock the Notifications