Darshan Thoogudeepa: ದರ್ಶನ್ ಹಾಗೂ ಗ್ಯಾಂಗ್‌ಗೆ ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
ಬೆಂಗಳೂರು ಆಗಸ್ಟ್ 1: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ತೂಗುದೀಪ ಹಾಗೂ ಗ್ಯಾಂಗ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇಂದು ಎಲ್ಲಾ ಆರೋಪಿಗಳ ಬಂಧನದ ಅವಧಿ ಅಂತ್ಯವಾದ ಬೆನ್ನಲ್ಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಆರೋಪಿಗಳ ಹೆಸರು ಹೇಳಿ ಹಾಜರಾತಿ ಪಡೆದ ನ್ಯಾಯಾಧೀಶರು ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ದರ್ಶನ್ ಸದ್ಯಕ್ಕೆ ಜೈಲಿನಿಂದ ಹೊರ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದೆಷ್ಟೇ ಪ್ರಯತ್ನ ಪಟ್ಟರೂ ದರ್ಶನ್ ವಿರುದ್ಧವಾಗಿ ತೀರ್ಪುಗಳು ಬರುತ್ತಿವೆ.

ದರ್ಶನ್ ಅವರಿಗೆ ಜೈಲೂಟ ಸೇವಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ದರ್ಶನ್ ಮನೆ ಊಟ ನೀಡಲು ಅನುಮತಿ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ದರ್ಶನ್ ಅವರಿಗೆ ಮನೆ ಊಟ ಮಾಡುವ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಜೈಲೂಟ ಫಿಕ್ಸ್ ಆಗಿದ್ದು ದರ್ಶನ್ ತೂಕ ಮತ್ತಷ್ಟು ಕಡಿಮೆಯಾಗುವ ಆತಂಕ ಕುಟುಂಬಸ್ಥರಲ್ಲಿ ಶುರುವಾಗಿದೆ. ದರ್ಶನ್ ತೂಗುದೀಪ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಆದರೆ ಅವರಿಗೆ ಸಾಧ್ಯವಾಗುತ್ತಿಲ್ಲ.
ವಿಜಯಲಕ್ಷ್ಮಿ ಹಲವಾರು ಜನರ ಸಹಾಯ ಬೇಡಿ ದರ್ಶನ್ ಬಿಡುಗಡೆಗೆ ಅದೆಷ್ಟೇ ಪ್ರಯತ್ನ ಪಟ್ಟರೂ ಪತಿಯನ್ನು ಬಿಡಿಸಿಕೊಂಡು ಬರುವುದು ಕಷ್ಟವಾಗಿ ಹೋಗಿದೆ. ಹೀಗಾಗಿ ವಿಜಯಲಕ್ಷ್ಮಿ ದೇವರ ಮೊರೆ ಹೋಗಿದ್ದು ಹರಕೆ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅತ್ತ ದರ್ಶನ್ ಅವರಿಗೆ ಜೈಲೂಟ ಸರಿ ಹೋಗದೇ ತೂಕ ಇಳಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕೆಲ ದಿನಗಳ ಹಿಂದೆ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಅನೇಕ ನಟ ನಟಿಯರು ಹಾಗೂ ನಿರ್ದೇಶಕರು ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.

ಈಗಾಗಲೇ ರಕ್ಷಿತಾ, ಜೋಗಿ ಪ್ರೇಮ್, ಯಶಸ್ ಸೂರ್ಯ, ತರುಣ್ ಸುಧೀರ್, ಚಿಕ್ಕಣ್ಣ, ಸಾಧು ಕೋಕಿಲ, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ದರ್ಶನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಆಗಾಗ ಕುಟುಂಬಸ್ಥರು ಕೂಡ ಜೈಲಿಗೆ ಭೇಟಿ ನೀಡಿ ದರ್ಶನ್ ಅವರಿಗೆ ಮಾತನಾಡಿಸಿಕೊಂಡು ಬರುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರು ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರೆ ಎಂದು ಆರೋಪಿಸಿ ನಟ ದರ್ಶನ್ ತೂಗುದೀಪ ಅವರು ಕೊಲೆ ಮಾಡಿದ್ದಾರೆ ಎನ್ನುವ ಆರೋಪವಿದೆ. ರೇಣುಕಾಸ್ವಾಮಿಯನ್ನು ಜೂನ್ 8ರಂದು ಕೊಲೆ ಮಾಡಲಾಗಿದೆ. ಹೀಗಾಗಿ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರಾ ಗೌಡ ಹಾಗೂ ಎ2 ಆರೋಪಿಯಾಗಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಅಲ್ಲದೆ ರೇಣುಕಾಸ್ವಾಮಿಯನ್ನು ಅಪಹರಿಸಿ ನಂತರ ಅವರನ್ನು ಕೊಲೆ ಮಾಡುವವರೆ ಭಾಗಿಯಾದ ಪ್ರತಿಯೊಬ್ಬರನ್ನೂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಪ್ರಕರಣದಲ್ಲಿ ಸದ್ಯ 17 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪರಪ್ಪನ ಅಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ ನಾಲ್ವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications