Darshan Thoogudeepa: ಮೈಸೂರಿನಲ್ಲಿ ದರ್ಶನ್ ತೂಗುದೀಪ್; ಅಭಿಮಾನಿಗಳಿಗೆ ಕೊಟ್ಟ ಸೂಚನೆ ಏನು?
ಜಾಮೀನು ಪಡೆದ ಬಳಿಕ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಮತ್ತು ಮಗನ ಜೊತೆಗೆ ಫಾರ್ಮ್‌ಹೌಸ್‌ಗೆ ತೆರಳಿದ್ದರು. ಅಲ್ಲಿ ದರ್ಶನ್ ತಾಯಿ ಮತ್ತು ಅಣ್ಣ ಕೂಡ ಜೊತೆಯಾಗಿದ್ದು ಸದ್ಯ ಫಾರ್ಮ್‌ಹೌಸ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಅವರು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಇನ್ನೂ ಚೇತರಿಸಿಕೊಂಡಿಲ್ಲ ಎನ್ನುವುದು ಅವರ ನಡೆಯುವ ರೀತಿಯಲ್ಲೇ ತಿಳಿಯುತ್ತದೆ. ನೋವಿಗೆ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದು ಮೈಸೂರಿಗೆ ತೆರಳಿದ್ದಾರೆ.
ಮಂಗಳವಾರ ಮೈಸೂರಿನ ಕುವೆಂಪುನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸದ್ಯ ದರ್ಶನ್‌ಗೆ ಎಕ್ಸ್‌ರೇ ಮಾಡಲಾಗಿದ್ದು ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ ಚಿಕಿತ್ಸೆ ವಿಧಾನವನ್ನು ವೈದ್ಯರು ನಿರ್ಧರಿಸಲಿದ್ದಾರೆ. ದರ್ಶನ್ ಭೇಟಿ ವಿಚಾರ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಕಾಮಾಕ್ಷಿ ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದಾರೆ.

ಅಭಿಮಾನಿಗಳಿಗೆ ಸನ್ನೆ ಮಾಡಿದ ದರ್ಶನ್
ದರ್ಶನ್ ಆಸ್ಪತ್ರೆ ಆವರಣ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಲು ಶುರು ಮಾಡಿದರು. ದರ್ಶನ್ ಅಭಿಮಾನಿಗಳತ್ತ ತಿರುಗಿ ಸುಮ್ಮನಿರುವಂತೆ ಸನ್ನೆ ಮಾಡಿದರು. ತುಟಿ ಮೇಲೆ ಕೈಇಟ್ಟ ಅವರು ಸುಮ್ಮನಿರಿ ಎಂದು ಹೇಳಿದರು. ದರ್ಶನ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ಅಭಿಮಾನಿಗಳ ಸಂತಸ ಮತ್ತಷ್ಟು ಹೆಚ್ಚಾಯಿತು.
ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಕೂಗುವ ಮೂಲಕ ಸಂತಸ ವ್ಯಕ್ತಪಡಿಸಿದರು. ಸುಮಾರು ಆರು ತಿಂಗಳ ಕಾಲ ಜೈಲಿನಲ್ಲಿದ್ದ ದರ್ಶನ್ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಗುತ್ತಿದ್ದಂತೆ ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ದರ್ಶನ್ ಅಲ್ಲಿಂದ ನೇರವಾಗಿ ಪತ್ನಿ ವಿಜಯಲಕ್ಷ್ಮಿ ಮನೆಗೆ ತೆರಳಿದ್ದರು.
ವಿಜಯಲಕ್ಷ್ಮಿ ಮನೆಯಲ್ಲಿ ಒಂದದೆರಡು ದಿನ ತಂಗಿದ್ದ ದರ್ಶನ್ ಬಳಿಕ ಮೈಸೂರು ಸಮೀಪವಿರುವ ತಮ್ಮ ಫಾರ್ಮ್‌ಹೌಸ್‌ಗೆ ಹೋಗಿದ್ದಾರೆ. ಕುಟುಂಬ ಸಮೇತ ಫಾರ್ಮ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ನಡೆಯಲು ಕೂಡ ಕಷ್ಟಪಡುತ್ತಿರುವುದನ್ನು ಹಲವು ವಿಡಿಯೋಗಳಲ್ಲಿ ನೋಡಬಹುದು.
ದರ್ಶನ್ ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ. ಅವರಿಗೆ ಬೆನ್ನು ನೋವು ಹೆಚ್ಚಾಗಿದ್ದು ಸರಿಯಾಗಿ ನಡೆಯಲು ಕೂಡ ಕಷ್ಟಪಡುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈಗ ಅವರಿಗೆ ಶಸ್ತ್ರಚಿಕಿತ್ಸೆ ಮಾಡುತ್ತಾರಾ ಅಥವಾ ಚಿಕಿತ್ಸೆಯನ್ನೇ ಮುಂದುವರೆಸುತ್ತಾರಾ ಎನ್ನುವುದನ್ನು ವೈದ್ಯರು ನಿರ್ಧರಿಸಲಿದ್ದಾರೆ.












Click it and Unblock the Notifications