Darshan: ಹತ್ಯೆಯಾದ ರೇಣುಕಾಸ್ವಾಮಿ ಮನೆಯಲ್ಲಿ ಆತ್ಮಶಾಂತಿ ಪೂಜೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಘಟಿಸಿ ಆರೇಳು ತಿಂಗಳು ಕಳೆಯುತ್ತಿದೆ. ಪ್ರಕರಣದ ಆರೋಪಿಗಳು ಜೈಲು ಸೇರಿದ್ದರೂ ಕೂಡ ಈವರೆಗೂ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿಲ್ಲ. ಅತ್ತ ಕೇಸ್‌ನ ಪ್ರಮುಖ ಆರೋಪಿ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರೆ, ಇತ್ತ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರು ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾಗಿ ಆರು ತಿಂಗಳು ಕಳೆದ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣಕಾಸ್ವಾಮಿ ಮನೆಯಲ್ಲಿ ರಂಭಾಪುರಿಶ್ರೀ ಆತ್ಮಶಾಂತಿ, ವಾಸ್ತುಶಾಂತಿಗಾಗಿ ಪೂಜೆ ನೆರವೇರಿಸಿದ್ದಾರೆ. ರೇಣಕಾಸ್ವಾಮಿ ಮನೆಯಲ್ಲೇ ವಾಸ್ತವ್ಯವಿದ್ದ ರಂಭಾಪುರಿಶ್ರೀಗಳು ಪೂಜೆ ನೆರವೇರಿಸಿ ಸಂಪೂರ್ಣ ಕುಟುಂಬಕ್ಕೆ ಆಶೀರ್ವಾದ ಮಾಡಿ ನ್ಯಾಯ ಸಿಗುವ ಭರವಸೆ ನೀಡಿದ್ದಾರೆ.

ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಸುದ್ದಿಗಾರರೊಂದಿಗೆ ಮಾತನಾಡಿದ್ದು, 'ನನ್ನ ಮೊಮ್ಮಗ ಹಾಗೂ ಸೊಸೆ ಕೂಡ ಈ ಪೂಜೆ ಸಮಯದಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರು ಈಗ ತವರು ಮನೆಯಲ್ಲಿದ್ದಾರೆ. ಗುರುಗಳು ಈ ಕಡೆ ಬಂದಾಗ ಪೂಜೆ ಮಾಡಿಸುವ ಭರವಸೆ ನೀಡಿದ್ದರು. ಅದರಂತೆ ಮನೆಗೆ ಬಂದು ಪೂಜೆ ಮಾಡಿಸಿಕೊಟ್ಟಿದ್ದಾರೆ. ವಾಸ್ತು ಶಾಂತಿ, ಮಗನಿಗೆ ಆತ್ಮ ಶಾಂತಿ ಪೂಜೆ ಮಾಡಲಾಗಿದೆ. ಗುರುಗಳ ದಯೆಯಿಂದ ನಮಗೆ ಎಲ್ಲಾ ಒಳ್ಳೆಯದೇ ಆಗುತ್ತದೆ. ಮಗನ ಸಾವಿನ ವಿಚಾರದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ' ಎಂದರು.
'ನಾವು ಆಗಾಗ ಗುರುಗಳ ಬಳಿ ನಮ್ಮ ಕಷ್ಟ ಸುಖಗಳನ್ನೆಲ್ಲಾ ಹಂಚಿಕೊಳ್ಳುತ್ತಲೇ ಇರುತ್ತೇವೆ. ಆ ಒಂದು ಶಕ್ತಿಯೇ ನಮ್ಮನ್ನು ಕಾಪಾಡುತ್ತದೆ ಎನ್ನುವ ನಂಬಿಕೆ ಇದೆ. ಗುರುಗಳು ನನ್ನ ಮಗನ ಆತ್ಮ ಶಾಂತಿ ಪೂಜೆ ಮಾಡಿ ನಮಗೆ ಆಶೀರ್ವಾದ ಮಾಡಿ ಹೋಗಿದ್ದಾರೆ. ಅವರು ನಮಗೆ ಧೈರ್ಯ ಕೊಟ್ಟಿದ್ದಾರೆ. ಮಗನ ಸಾವಿನ ವಿಚಾರದಲ್ಲಿ ಕಾನೂನು ಏನೇ ಆಗಲೀ, ಭಗವಂತ ನಿಮ್ಮ ಪರವಾಗಿದ್ದಾನೆ ಎಂದು ಗುರುಗಳು ಹೇಳಿದ್ದಾರೆ'.

'ನಾವು ಇಲ್ಲಿಯವರೆಗೂ ಪೊಲೀಸರು, ನ್ಯಾಯಾಂಗದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೆವು. ಮುಂದೆಯೂ ನಮಗೆ ನ್ಯಾಯ ಸಿಗುತ್ತದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಸರ್ಕಾರ ನಮ್ಮ ಸೊಸೆಗೆ ಸಹಾನುಭೂತಿಯಿಂದ ಖಾಯಂ ನೌಕರಿಯನ್ನು ಕೊಡುತ್ತದೆ ಎನ್ನುವ ನಂಬಿಕೆಯಲ್ಲಿ ಇದ್ದೇವೆ. ಸರ್ಕಾರ ದಯಮಾಡಿ ನಮ್ಮ ಮನವಿಯನ್ನು ಸ್ವೀಕರಿಸಬೇಕು ಎಂದು ಕೇಳಿಕೊಳ್ಳುತ್ತೇನೆ' ಎಂದು ಹೇಳಿದರು.












Click it and Unblock the Notifications