ಜೈಲಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗದ ನಟ ದರ್ಶನ್, ಪ್ರಜ್ವಲ್ ರೇವಣ್ಣ: ಕಾರಣವೇನು?
ಬೆಂಗಳೂರು,ಆಗಸ್ಟ್ 15: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನನ್ನು ರದ್ದು ಮಾಡಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಬಹುದೆಂದು ನಂಬಿಕೆಯಲ್ಲಿ ದರ್ಶನ್ ಇದ್ದಿರಬೇಕು. ಆದರೆ, ಅವರ ನಟ ದರ್ಶನ್ ಅವರ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಒಂದೇ ದಿನ ರೇಣುಕಾಸ್ವಾಮಿ ಕೊಲೆ ಪ್ರಕರಣದ ಏಳೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತ ಇಂದು ದೇಶಾದ್ಯಂತ 79ನೇ ಸ್ವಾತಂತ್ರೋತ್ಸವದ ಸಂಭ್ರಮ. ಪರಪ್ಪನ ಆಗ್ರಹಾರ ಜೈಲಿನಲ್ಲಿಯೂ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದ್ದು, ಜೈಲು ಸೇರಿರುವ ನಟ ದರ್ಶನ್ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. ಅಲ್ಲದೇ ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೂಡ ಜೈಲಲ್ಲಿದ್ದಾರೆ. ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

ದೇಶಾದ್ಯಂತ ಆಗಸ್ಟ್ 15 ರಂದು ಸ್ವಾತಂತ್ರೋತ್ಸವದ ಸಂಭ್ರಮ ಜೋರಾಗಿರುತ್ತದೆ. ಅಲ್ಲದೇ ಪ್ರತಿ ವರ್ಷ ಜೈಲಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತದೆ. ವಿಚಾರಣಾಧೀನ ಆರೋಪಿಗಳು, ಸಜಾ ಬಂಧಿಗಳು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಈ ಬಾರಿಗೂ ಸಮಾರಂಭ ಮಾಡಲಾಯಿತು. ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಮತ್ತು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಭಾಗಿಯಾಗಿಲ್ಲ.
ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರು ತಿಂಗಳ ಕಾಲ ಜೈಲಿನಲ್ಲಿದ್ದರು. ಕೊನೆಗೆ ಜಾಮೀನಿನ ಮೇಲೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಬಿಡುಗಡೆಯಾಗಿದ್ದರು. ಇದೀಗ ನಿನ್ನೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದ್ದು, ಮತ್ತೆ ಜೈಲು ಪಾಲಾಗಿದ್ದಾರೆ. ಜೈಲು ಶಿಕ್ಷೆ ಅನುಭವಿಸಿದ್ದ ನಟ ದರ್ಶನ್ ಮತ್ತೆ ಜೈಲು ಸೇರಿರುವುದಕ್ಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ, ಸ್ವಾತಂತ್ರ್ಯೋತ್ಸವಕ್ಕೆ ಗೈರಾಗಿದ್ದಾರೆ ಎಂದು ಹೇಳಲಾಗಿದೆ.
ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ಇಂದು ಪರಪ್ಪನ ಅಗ್ರಹಾರದಲ್ಲಿ ಜೈಲಿನ ಜೈಲಾಧಿಕಾರಿಗಳು ಖೈದಿ ನಂಬರ್ ನೀಡಿದ್ದಾರೆ. ಎ1 ಆರೋಪಿ ಪವಿತ್ರಾಗೌಡಗೆ ವಿಚಾರಣಾಧೀನ ಸಂಖ್ಯೆ 7313, ನಟ ದರ್ಶನ್ ಗೆ ಖೈದಿ ನಂ.7314 ನೀಡಲಾಗಿದೆ. ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಸಿಬ್ಬಂದಿಗಳು ನೀಡಿದ್ದಾರೆ. ಎ.1 ಆರೋಪಿ ಪವಿತ್ರಾಗೌಡ 7313 , ಪ್ರದೋಶ್ 7317, ನಾಗರಾಜ್ ಗೆ 7315 ಹಾಗೂ ಲಕ್ಷ್ಮಣ್ ಗೆ 7316 ಕೈದಿ ಸಂಖ್ಯೆ ನೀಡಲಾಗಿದೆ.












Click it and Unblock the Notifications