ನಮ್ಮಪ್ಪ ಕೂಡ ನಾನ್ ವೆಜ್ ತಿಂತಿದ್ರು, ನಿನ್ನ ರುಚಿ ನಿನ್ನಿಷ್ಟ: ಡಾಲಿ ಬೆನ್ನಿಗೆ ನಿಂತ ನಟಿ ಭಾವನಾ ರಾವ್
Dali Dhananjay: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ಬಿರಿಯಾನಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಆಹಾರ ಪದ್ಧತಿ, ಜಾತಿ ಮತ್ತು ವೈಯಕ್ತಿಕ ಆಯ್ಕೆ ಕುರಿತು ಭಾರೀ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆ ಸ್ಯಾಂಡಲ್‌ವುಡ್ ನಟಿ ಭಾವನಾ ರಾವ್ ತಮ್ಮ ಸ್ಪಷ್ಟ ಹಾಗೂ ಸಮತೋಲನದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅವರ ಹೇಳಿಕೆಗಳು ಗಮನ ಕೂಡ ಸೆಳೆದಿವೆ.
ನನಗೆ ನಾನ್‌ವೆಜ್ ಬೇಕು ಅನಿಸಲ್ಲ
ಡಾಲಿ ವೈರಲ್ ವಿಡಿಯೋ ಕುರಿತು ಮಾತನಾಡಿದ ಭಾವನಾ ರಾವ್, "ಡಾಲಿ ಧನಂಜಯ್ ಅವರ ವೈರಲ್ ವಿಡಿಯೋ ನಾನೂ ನೋಡಿದ್ದೇನೆ. ಆದರೆ ಯಾರಾದರೂ ನಾನ್‌ವೆಜ್ ತಿನ್ನುತ್ತಿದ್ದಾರೆ ಎಂದು ನೋಡಿ ನನಗೂ ಅದನ್ನು ತಿನ್ನಬೇಕು ಅನ್ನಿಸಿಲ್ಲ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಭಾವನಾ ಹೇಳಿದ್ದಾರೆ. ತಮ್ಮ ಕುಟುಂಬ ಹಿನ್ನೆಲೆಯನ್ನು ಉಲ್ಲೇಖಿಸಿದ ಅವರು, "ನಮ್ಮಪ್ಪ ಕೂಡ ಹಿಂದೆ ನಾನ್‌ವೆಜ್ ತಿನ್ನುತ್ತಿದ್ರು. ಆದರೆ ನಾನು ಪ್ರಾಣಿಪ್ರಿಯೆ. ಅದಕ್ಕೇ ನನಗೆ ನಾನ್‌ವೆಜ್ ತಿನ್ನಬೇಕು ಅನ್ನಿಸಲೇ ಇಲ್ಲ" ಎಂದಿದ್ದಾರೆ.

ತಮ್ಮ ಬಾಲ್ಯದ ಅನುಭವವೊಂದನ್ನು ಹಂಚಿಕೊಂಡ ಭಾವನಾ, "ಚಿಕ್ಕ ವಯಸ್ಸಿನಲ್ಲೇ ಒಮ್ಮೆ ಪ್ರಾಣಿಯನ್ನು ಕತ್ತರಿಸುವುದನ್ನು ಕಣ್ಣಾರೆ ನೋಡಿದ್ದೆ. ಆ ದೃಶ್ಯ ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಟ್ಟಿದೆ. ಅದಾದ ಬಳಿಕ ನನಗೆ ನಾನ್‌ವೆಜ್ ಆಹಾರದ ಮೇಲೆ ಒಲವಿಲ್ಲ" ಎಂದು ಹೇಳಿದ್ದಾರೆ. ಈ ಅನುಭವವೇ ತಮ್ಮ ಆಹಾರ ಆಯ್ಕೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಊಟ, ರುಚಿ ವೈಯಕ್ತಿಕ ಆಯ್ಕೆ
ಇನ್ನು ಡಾಲಿ ಧನಂಜಯ್ ವಿಡಿಯೋ ವಿಚಾರವಾಗಿ ಜಾತಿ ಆಧಾರದ ಚರ್ಚೆ ನಡೆಯುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾವನಾ ರಾವ್, "ಇಲ್ಲಿ ಲಿಂಗಾಯತರು, ಬ್ರಾಹ್ಮಣರು ಅನ್ನೋ ವಿಷಯಕ್ಕೆ ಅವಕಾಶವೇ ಇರಬಾರದು. ನಾನ್‌ವೆಜ್ ತಿನ್ನೋದು ಅವರವರ ವೈಯಕ್ತಿಕ ಆಯ್ಕೆ. ಮಾಂಸಾಹಾರ ಯಾರಿಗೆ ಇಷ್ಟವಿದೆಯೋ ಅವರು ತಿನ್ನಲಿ. ಯಾರಿಗೆ ಇಷ್ಟವಿಲ್ಲವೋ ಅವರು ತಿನ್ನಬೇಡಿ" ಎಂದು ಹೇಳಿದ್ದಾರೆ.
ಆಹಾರದ ವಿಚಾರದಲ್ಲಿ ಜಾತಿ, ಧರ್ಮ ಅಥವಾ ಸಮುದಾಯವನ್ನು ತಂದು ಅನಗತ್ಯ ವಿವಾದ ಮಾಡಬಾರದು ಎಂಬುದೇ ತಮ್ಮ ನಿಲುವು ಎಂದು ಅವರು ತಿಳಿಸಿದ್ದಾರೆ. ತಮ್ಮ ವೈಯಕ್ತಿಕ ಅಭಿರುಚಿಯ ಬಗ್ಗೆ ಮಾತನಾಡಿರುವ ಅವರು, "ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ನನ್ನ ನೆಚ್ಚಿನ ಪ್ರಾಣಿ ಅಂದ್ರೆ ನಾಯಿ. ನಮ್ಮ ಮನೆಯಲ್ಲಿ ಈಗಲೂ ನಾಯಿಗಳಿವೆ. ಪ್ರಾಣಿಗಳ ಮೇಲೆ ಇರುವ ಪ್ರೀತಿಯ ಕಾರಣಕ್ಕೂ ನಾನು ನಾನ್‌ವೆಜ್ ತಿನ್ನದಿರಲು ಇಷ್ಟಪಡುತ್ತೇನೆ" ಎಂದಿದ್ದಾರೆ.
ಇನ್ನು ಡಾಲಿ ಧನಂಜಯ್ ಅವರ ವೈರಲ್ ವಿಡಿಯೋ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಭಾವನಾ ರಾವ್ ಅವರ ಪ್ರತಿಕ್ರಿಯೆ ಗಮನ ಸೆಳೆದಿದ್ದು, ಆಹಾರ ಪದ್ಧತಿ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ. ಅದನ್ನು ಜಾತಿ ಅಥವಾ ಸಮುದಾಯದ ಕಣ್ಣಿನಿಂದ ನೋಡುವುದು ತಪ್ಪು ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿವೆ. ಭಾವನಾ ಕೂಡ ಮಾಂಸಾಹಾರದ ವಿಚಾರದಲ್ಲಿ ನಟ ಡಾಲಿ ಧನಂಜಯ್ ಬೆನ್ನಿಗೆ ನಿಂತಿದ್ದಾರೆ.












Click it and Unblock the Notifications