Darshan Case: ನಟ ದರ್ಶನ್ ಬೇಡಿಕೆಗಳಿಗೆ ನ್ಯಾಯಾಲಯ ಹೇಳಿದ್ದೇನು? ಹೊರಬಿತ್ತು ಆದೇಶ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ರಿಲೀಫ್ ಸಿಕ್ಕಿದೆ. ದರ್ಶನ್ ಅವರು ತಮಗೆ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್ಶೀಟ್ ಬೇಕು ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಕಾನೂನು ಪ್ರಾಧಿಕಾರ ಸದಸ್ಯರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಕೊನೆಗೂ ಆದೇಶ ಹೊರಬಿದ್ದಿದೆ. ದರ್ಶನ್ ಅವರ ಬೇಡಿಕೆಗಳಿಗೆ ಕೋರ್ಟ್ ಮನ್ನಣೆ ನೀಡಿತಾ? ಇಲ್ಲವಾ? ಎನ್ನುವ ಮಾಹಿತಿ ಇಲ್ಲಿದೆ.
ಆರೋಪಿ ದರ್ಶನ್ ಅವರಿಗೆ ತಿಂಗಳಿಗೊಮ್ಮೆ ಹಾಸಿಗೆ, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡುವ ಆಯ್ಕೆ ಜೈಲು ಅಧಿಕಾರಿಗಳಿಗೆ ನೀಡಿದೆ. ಪರಪ್ಪನ ಅಗ್ರಹಾರದಲ್ಲಿರುವ ಕ್ವಾರಂಟೈನ್ ಸೆಲ್‌ನಿಂದ ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ ವಿಚಾರವಾಗಿಯೂ ಜೈಲಾಧಿಕಾರಿಗಳಿಗೆ ಕೋರ್ಟ್ ಅವಕಾಶ ಕೊಟ್ಟಿದೆ. ಆದರೆ ದರ್ಶನ್ ಬೇಡಿಕೆ ಇಟ್ಟಂತೆ ದಿಂಬು, ಕನ್ನಡಿ, ಹಾಗೂ ಇನ್ನಿತರೆ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ.

ಮೊದಲ ಬಾರಿಗೆ ಜೈಲು ಸೇರಿದ್ದ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ್ದ ಫೋಟೋವೊಂದು ವೈರಲ್ ಆಗಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಬಳಿಕ ಜಾಮೀನು ಸಿಕ್ಕಿ ಹೊರಬಂದಿದ್ದರು. ಇದೇ ವಿಚಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಜಾಮೀನು ರದ್ದು ಮಾಡಿದಲ್ಲದೆ, ದರ್ಶನ್ ಅವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂದು ಖಡಕ್ ಆಗಿ ಹೇಳಿತ್ತು.
ಜೈಲಿನಲ್ಲಿ ತನಗೆ ಹಾಸಿಗೆ, ತಲೆ ದಿಂಬು, ಬೆಡ್ ಶೀಟ್ ನೀಡಬೇಕು. ಜೈಲಿನಲ್ಲಿ ವಾಕಿಂಗ್ ಮಾಡಲು ಅವಕಾಶ ನೀಡಬೇಕು. ಮೂಲಸೌಕರ್ಯ ನೀಡಬೇಕು ಎಂದು ದರ್ಶನ್ ಕೋರಿದ್ದರು. ಆದರೆ ನ್ಯಾಯಾಲಯವು ಇದಕ್ಕೆ ಸ್ಪಂದಿಸಿಲ್ಲ. ಈಗ ತಿಂಗಳಿಗೊಮ್ಮೆ ಹಾಸಿಗೆ, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿರುವುದು ದರ್ಶನ್ ಅವರಿಗೆ ನೆಮ್ಮದಿ ನೀಡಿಲ್ಲ.
ಬೇರೆ ಕಡೆಗೆ ಶಿಫ್ಟ್ ಆಗ್ತಾರಾ?
ಅಲ್ಲದೆ ತನ್ನನ್ನು ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡುವಂತೆಯೂ ದರ್ಶನ್ ಕೇಳಿಕೊಂಡಿದ್ದರು. ಈಗಿರುವ ಬ್ಯಾರಕ್ನಲ್ಲಿ ಬೆಳಕು ಸರಿಯಾಗಿಲ್ಲ. ಬಿಸಿಲು ನೋಡದೆ ಫಂಗಸ್ ಆಗಿದೆ ಎಂದಿದ್ದರು. ಆದರೆ ಕೋರ್ಟ್ ಈ ಅಧಿಕಾರವನ್ನು ಜೈಲಾಧಿಕಾರಿಗಳಿಗೆ ನೀಡಿದೆ. ಭದ್ರತಾ ದೃಷ್ಟಿಯಿಂದ ಬೇರೆ ಬ್ಯಾರಕ್ಗೆ ದರ್ಶನ್ ಅವರನ್ನ ಶಿಫ್ಟ್ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಪವಿತ್ರಾಗೌಡ, ದರ್ಶನ್ ಸೇರಿದಂತೆ ಆರು ಆರೋಪಿಗಳು ಇಂದು ವಿಚಾರಣೆಗೆ ಹಾಜರಾಗಿದ್ದರು. ತಮ್ಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್ ಹಾಕಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಅಲ್ಲದೆ ಅಕ್ಟೋಬರ್ 31ರಂದು ಈ ಕೇಸ್‌ನ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳ ವಿರುದ್ಧ ಯಾವೆಲ್ಲ ಸೆಕ್ಷನ್ ಅಡಿ ಆರೋಪ ಹೊರಿಸಲಾಗುತ್ತದೆ ಎನ್ನುವುದನ್ನು ಕೋರ್ಟ್ ಸ್ಪಷ್ಟವಾಗಿ ತಿಳಿಸಲಿದೆ.












Click it and Unblock the Notifications