ಪರಪ್ಪನ ಅಗ್ರಹಾರ ಜೈಲಿಗೆ ನಟ ಮಡೆನೂರು ಮನು, ಎಷ್ಟು ದಿನ ನ್ಯಾಯಾಂಗ ಬಂಧನ?
ಕಿರುತೆರೆ ನಟಿ ಮೇಲೆ ಅತ್ಯಾಚಾರ, ಕೊಲೆ ಬೆದರಿಕೆ, ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪೊಲೀಸರ ಬಂಧನದಲ್ಲಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅವರಿಗೆ ಮತ್ತೆ ಜೈಲೇ ಗತಿಯಾಗಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ನಟಿ ನೀಡಿದ್ದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮನು ಅವರನ್ನು ಅರೆಸ್ಟ್ ಮಾಡಿದ್ದರು. ಬಳಿಕ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಎರಡು ದಿನ ಪೊಲೀಸ್ ಕಸ್ಟಡಿ ನೀಡಿದ್ದರಿಂದ ಮನು ಅವರ ಮೇಲಿನ ಆರೋಪ ಸಂಬಂಧ ಸ್ಥಳ ಮಹಜರು, ಹೇಳಿಕೆ ದಾಖಲು ಸೇರಿದಂತೆ ತನಿಖೆ ನಡೆಸಿದ್ದರು. ಇಂದು ಪೊಲೀಸ್ ಕಸ್ಟಡಿ ಮುಗಿದ ಕಾರಣ ಮತ್ತೆ ಅವರನ್ನು 3ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮಡೆನೂರು ಮನುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ 14 ದಿನ ಮನು ಪರಪ್ಪನ ಅಗ್ರಹಾರ ಜೈಲಿನಲ್ಲಿರಲಿದ್ದಾರೆ.

ಖ್ಯಾತ ನಟ-ನಟಿಯರಿಗೂ ಕಂಟಕ
ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ 31 ತಿಂಗಳ ವಾಟ್ಸಾಪ್ ಮೆಸೇಜ್‌ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸಂತ್ರಸ್ತೆ ಹಾಗೂ ಮನು ನಡುವೆ ನಡೆದಿದ್ದ ಸಾವಿರಾರು ವಾಟ್ಸಾಪ್ ಮೆಸೇಜ್‌ಗಳನ್ನು ಕಲೆಹಾಕಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿ ಮನು ನಡುವಿನ ಹಲವು ಆಡಿಯೋ ಹಾಗೂ ವಿಡಿಯೊ ಸಂಭಾಷಣೆ ನಡೆದಿದ್ದು, ಇದರಲ್ಲಿ ಖ್ಯಾತ ಕಿರುತೆರೆ, ಹಿರಿತೆರೆಯ ನಟ-ನಟಿಯರ ಹೆಸರುಗಳು ಕೂಡ ಪ್ರಸ್ತಾಪವಾಗಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಆ ನಟ-ನಟಿಯರಿಗೂ ಪೊಲೀಸರು ನೋಟಿಸ್ ನೀಡಿ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಸಂತ್ರಸ್ತೆ ನಟಿ ಹಾಗೂ ಮನು ಬಳಿ ಇದ್ದ ಎರಡು ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳಿಸಿದ್ದಾರೆ.
ಸಂತ್ರಸ್ತೆ ಈ ಹಿಂದೆ ಮನು ನನ್ನ ಮೇಲೆ ಅತ್ಯಾಚಾರ ಮಾಡಿ ಅದನ್ನು ಮೊಬೈಲ್‍ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದ ಎಂದು ಆರೋಪ ಮಾಡಿದ್ದರು. ಆದರೆ ಮನು ಬಳಿ ಇದ್ದ ಮೊಬೈಲ್‍ಗಳಲ್ಲಿ ಆ ರೀತಿಯ ಯಾವುದೇ ವಿಡಿಯೋಗಳು ಇಲ್ಲ ಎಂದು ತನಿಖೆ ವೇಳೆ ತಿಳಿದುಬಂದಿದೆ. ಒಂದು ವೇಳೆ ಕೇಸ್ ದಾಖಲಾದ ಬೆನ್ನಲ್ಲೇ ಆ ವಿಡಿಯೊಗಳನ್ನು ಡಿಲೀಟ್ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸದ್ಯ ಈ ಮೊಬೈಲ್‍ಗಳನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಆಡಿಯೋಗಳು ವೈರಲ್
ಮಡೆನೂರು ಮನುಗೆ ಸಂಬಂಧಿಸಿದ್ದು ಎನ್ನಲಾದ ಹಲವು ಆಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸಂತ್ರಸ್ತೆ ನಟಿಯನ್ನು ಮದುವೆ ಆಗಿರುವುದಾಗಿ ಮನು ಹೇಳಿದ್ದಾರೆ ಎನ್ನಲಾದ ಆಡಿಯೋ ಕೂಡ ಸದ್ದು ಮಾಡುತ್ತಿದೆ. ಅದರಲ್ಲಿ ನಾನು ಅವಳನ್ನು ಮದುವೆ ಆಗಿದ್ದೀನಿ. ಎಲ್ಲಿ ಬೇಕಾದ್ರೂ ಈ ಮಾತು ಹೇಳ್ತೀನಿ, ಆಕೆ ನನ್ನ ಹೆಂಡತಿ, ಏನು ಬೇಕಾದ್ರೂ ಮಾಡ್ತೀನಿ, ನಮ್ಮಿಬ್ಬರ ವಿಚಾರದಲ್ಲಿ ಯಾರೂ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ ಎಂದು ಹೇಳಲಾಗಿದೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ನಟರ ಬಗ್ಗೆ ಮನು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ಹರಿದಾಡುತ್ತಿದ್ದು, ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರ ಹೆಸರು ಉಲ್ಲೇಖಿಸಲಾಗಿದೆ. ಈ ಸಂಬಂಧ ಮನು ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.












Click it and Unblock the Notifications