Tennis Krishna: ರಾಜ್‌ಕುಮಾರ್-ವಿಷ್ಣುವರ್ಧನ್ ನಾನೇ ಬೇಕು ಅಂತಿದ್ರು, ಈಗಿನ ನಟರು ನನ್ನ ಮರೆತಿದ್ದಾರೆ!
ಕನ್ನಡ ಚಿತ್ರರಂಗದ ಹಾಸ್ಯ ನಟರಲ್ಲಿ ಮುಂಚೂಣಿಯಲ್ಲಿದ್ದ ಟೆನ್ನಿಸ್ ಕೃಷ್ಣ (Tennis Krishna) ಅವರು ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ತಮ್ಮ ಪಾತ್ರಗಳ ಮೂಲಕ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದ್ದವರು. ಬಹುತೇಕ ಎಲ್ಲ ಸ್ಟಾರ್ ಹೀರೋಗಳ ಸಿನಿಮಾಗಳಲ್ಲೂ ಟೆನ್ನಿಸ್ ಕೃಷ್ಣ ಅವರ ಹಾಸ್ಯ ಇದ್ದೇ ಇರುತ್ತಿತ್ತು. ಆದರೆ ಚಿತ್ರರಂಗ ಬದಲಾದಂತೆ ಅವರ ಸ್ಥಿತಿ ಕೂಡ ಬದಲಾಗಿದೆ. ಈ ಬಗ್ಗೆ ಸ್ವತಃ ಟೆನ್ನಿಸ್ ಕೃಷ್ಣ ಅವರೇ ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಸಂಕಟ ಹೊರಹಾಕಿದ್ದಾರೆ. ಈಗಿನ ದೊಡ್ಡ ದೊಡ್ಡ ಹೀರೋಗಳು ನಮ್ಮನ್ನ ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಆ ಕಾಲದಲ್ಲಿ ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರು ನಮ್ಮ ಸಿನಿಮಾಗೆ ಟೆನ್ನಿಸ್ ಕೃಷ್ಣನೇ ಬೇಕು ಎಂದು ಬೇಡಿಕೆ ಇಡುತ್ತಿದ್ರು. ಈ ಪಾತ್ರಕ್ಕೆ ಅವರೇ ಸೂಕ್ತ ಎಂದು ಕರೆಸಿಕೊಳ್ಳುತ್ತಿದ್ದರು. ನಾನು ಬ್ಯುಸಿ ಇದ್ದೇನೆ ಎಂದರೂ ಅವರು ಕೇಳುತ್ತಿರಲಿಲ್ಲ. ಡೇಟ್ ಸಿಗದಿದ್ರೂ ಒಂದೆರಡು ಸೀನ್‌ಗಳಲ್ಲಿ ಬರುವಂತೆ ಸಣ್ಣ ಪಾತ್ರಗಳನ್ನು ಮಾಡಿಸುತ್ತಿದ್ದರು. ಹಿರಿಯ ನಟರಿಗೆ ನಮ್ಮಂತವರ ಬಗ್ಗೆ ಸುಳ್ಳು ಹೇಳಿ ಡೇಟ್ ಇಲ್ಲ ಎನ್ನುತ್ತಾ ಇಲ್ಲಿವರೆಗೆ ಮೋಸ ಮಾಡುತ್ತಾ ಬಂದಿದ್ದಾರೆ. ಆದರೆ ಇಂದಿನ ಚಿತ್ರರಂಗ ಏನಾಗಿದೆ?' ಎಂದು ಟೆನ್ನಿಸ್ ಕೃಷ್ಣ ಪ್ರಶ್ನೆ ಮುಂದಿಟ್ಟಿದ್ದಾರೆ.

'ಕಲಾವಿದರಿಗೆ ಆ ರೀತಿ ಅನ್ಯಾಯ ಮಾಡಬಾರದು. ಸಿನಿಮಾಗಳಲ್ಲಿ ಹೊಸ ಕಲಾವಿದರು ಪ್ರತಿಭೆಗಳಿಗೂ ಅವಕಾಶ ಕೊಡಬೇಕು. ಅವರೊಂದಿಗೆ ಹಿರಿಯ ಕಲಾವಿದರಿಗೂ ಅವಕಾಶ ಕೊಡಿ ಎಂದು ಟೆನ್ನಿಸ್ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ. ಕರಿಬಸವಯ್ಯ, ಬ್ಯಾಂಕ್ ಜನಾರ್ಧನ್ ಸೇರಿ ಹಲವರನ್ನ ನಾವು ಕಳೆದುಕೊಂಡಿದ್ದೀವಿ. ಹಾಗಾಗಿ ಕಲಾವಿದರ ಪರ ಆಗಾಗ ನಾನು ಮಾತನಾಡುತ್ತೇನೆ. ಹೊಸ ನಾಯಕರ ಸಿನಿಮಾಗಳಲ್ಲಿ ಅವಕಾಶ ಕೊಡುತ್ತಿದ್ದಾರೆ. ಆದರೆ ಆ ಸಿನಿಮಾಗಳನ್ನು ನೋಡಲು ಜನ ಬರುತ್ತಿಲ್ಲ. ದೊಡ್ಡ ಹೀರೋಗಳ ಸಿನಿಮಾ ಮಾತ್ರ ನೋಡ್ತಾರೆ. ಈಗಿನ ಹೊಸಬರೇ ಮುಂದೆ ಚಿತ್ರರಂಗ ಉಳಿಸೋದು ಅಲ್ವಾ? ಅವರ ಸಿನಿಮಾಗಳನ್ನೂ ನೋಡಬೇಕು' ಎಂದಿದ್ದಾರೆ.
ಉತ್ತರ ಕರ್ನಾಟಕದವರಿಂದಲೇ ಕನ್ನಡ ಚಿತ್ರರಂಗ ಉಳಿದಿದೆ
'ಇವತ್ತು ಉತ್ತರ ಕರ್ನಾಟಕದವರಿಂದಲೇ ಕನ್ನಡ ಚಿತ್ರರಂಗ ಉಳಿದಿದೆ. ಬೆಂಗಳೂರಿನ ಥಿಯೇಟರ್‌ಗಳಿಗೆ ಹೋದರೆ 15 ಜನರಷ್ಟೇ ಇರುತ್ತಾರೆ. ಹತ್ತು ಜನ ಇದ್ದರೆ ಶೋ ಹಾಕೋದೇ ಇಲ್ಲ. ಮಂಗಳೂರಿನಲ್ಲಿ ದಸರಾ ಸಮಯದಲ್ಲೂ ದೊಡ್ಡ ದೊಡ್ಡ ನಟರ ಸಿನಿಮಾಗಳು ಶೋ ಕಾಣಲಿಲ್ಲ. ಉತ್ತರ ಕರ್ನಾಟಕದಲ್ಲಿ ವೃತ್ತಿ ರಂಗಭೂಮಿ ಕಂಪನಿಗಳಿವೆ. ಡಾ.ರಾಜ್‌ಕುಮಾರ್, ನರಸಿಂಹರಾಜು, ಬಾಲಣ್ಣ, ಅಶ್ವತ್ಥ್, ಕಲ್ಪನಾ, ಲೀಲಾವತಿ ಅವರು ಸೇರಿದಂತೆ ಆಗಿನ ಕಲಾವಿದರೆಲ್ಲರೂ ಸಿನಿಮಾ ಶೂಟಿಂಗ್ ಇಲ್ಲದೆ ಇದ್ದಾಗ ವೃತ್ತಿ ರಂಗಭೂಮಿ ಕಂಪನಿಗಳು ಉಳಿಯಬೇಕು ಎಂದು ನಾಟಕಗಳಿಗೆ ಬರುತ್ತಿದ್ದರು. ಆಗ ಲಾಠಿಚಾರ್ಜ್ ಆಗುವಷ್ಟು ಜನ ಸೇರುತ್ತಿದ್ದರು. ಜನ ಆ ರೀತಿ ಮುತ್ತಿಕೊಳ್ಳುತ್ತಿದ್ದರು' ಎಂದು ನೆನೆದಿದ್ದಾರೆ.

'ಅಲ್ಲಿ ಅಭಿಮಾನಿಗಳನ್ನ ಹತ್ತಿರದಿಂದ ಭೇಟಿ ಮಾಡುವ ಅವಕಾಶ ಸಿಗುತ್ತೆ. ಅಲ್ಲಿ ನಮಗೆ ಚಪ್ಪಾಳೆ ಹೊಡೆದು, ಒನ್ಸ್ ಮೋರ್ ಅಂತಾರೆ. ಆ ಖುಷಿಗಾಗಿಯೇ ನಾನು ಆಗಾಗ ರಂಗಭೂಮಿ ಕಂಪನಿಗಳಿಗೆ ಭೇಟಿ ನೀಡುತ್ತಿದ್ದೆ. ಬಳಿಕ ಕೆಲಸ ಒತ್ತಡದಿಂದ ಹೋಗಲು ಸಾಧ್ಯವಾಗಲಿಲ್ಲ. ಇದರ ನಡುವೆಯೂ ನನಗೆ ಸಿನಿಮಾಗಳಲ್ಲಿ ನಟಿಸಬೇಕು ಎಂದು ಕೇಳಿಕೊಂಡರು. ಈಗಿನ ಹೊಸ ನಾಯಕರ ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಆದರೆ ಈಗಿರುವ ದೊಡ್ಡ ದೊಡ್ಡ ನಟರು ನಮ್ಮನ್ನ ಮರೆತಿದ್ದಾರೆ' ಎಂದು ಟೆನ್ನಿಸ್ ಕೃಷ್ಣ ಅವರು ಬೇಸರ ಹಂಚಿಕೊಂಡಿದ್ದಾರೆ.












Click it and Unblock the Notifications