Actress Keerthana: ಅಂದು ತಮ್ಮ ಮುಗ್ಧ ನಟನೆ ಮೂಲಕ ಕನ್ನಡಿಗರ ಮನಗೆದ್ದಿದ್ದ ಬಾಲ ನಟಿ ಈಗ ಐಎಎಸ್ ಅಧಿಕಾರಿ
ಬೆಂಗಳೂರು, ಜುಲೈ. 11: ತಮ್ಮ ನಾಲ್ಕನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದ ಬಾಲ ನಟಿ ಎಚ್.ಎಸ್. ಕೀರ್ತನಾ ಅನೇಕ ಕನ್ನಡ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ದೇಶದ ಅತ್ಯಂತ ಕಷ್ಟಕರವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಇ ಪರೀಕ್ಷೆ ಪಾಸಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಸದ್ಯ ಬೆಂಗಳೂರು ಗ್ರಾಮೀಣಾಭಿವೃದ್ಧಿ ಕಮೀಷನರೇಟ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದ ಇವರನ್ನು ಚಿಕ್ಕಮಗಳೂರಿಗೆ ವರ್ಗಾವಣೆ ಮಾಡಲಾಗಿದೆ. ತಕ್ಷಣದಿಂದ ಚಿಕ್ಕಮಗಳೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ಗೋಪಾಲ ಕೃಷ್ಣ ಬಿ ಅವರ ಜಾಗಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಇದರ ಬೆನ್ನಲ್ಲೆ ಅವರ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ.

ಅಂದು ಬಾಲನಟಿ ಈಗ ಐಎಎಸ್ ಅಧಿಕಾರಿ
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ (UPSC CSE) ದೇಶದ ಅತ್ಯಂತ ಕಷ್ಟಕರವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಪ್ರತಿ ವರ್ಷ, ಸಾವಿರಾರು ಆಕಾಂಕ್ಷಿಗಳು ಈ ಕಠಿಣ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಅಂತಹವರಲ್ಲಿ ಬಾಲನಟಿಯಾಗಿ ಹೆಸರು ಗಳಿಸಿದ್ದ ಎಚ್ ಎಸ್ ಕೀರ್ತನಾ ಐಎಎಸ್ ಅಧಿಕಾರಿಯಾಗಿದ್ದಾರೆ.
2020 ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಾಲನಟಿ ಎಚ್‌ಎಸ್ ಕೀರ್ತನಾ ಯಶಸ್ವಿ ವೃತ್ತಿಜೀವನದ ಹೊರತಾಗಿಯೂ ಯುಪಿಎಸ್‌ಇ ಪರೀಕ್ಷೆ ಕಡೆ ಗಮನ ಹರಿಸಿದ್ದರು. ಈಗ ರಾಜ್ಯದ ಹಲವು ಭಾಗಗಳಲ್ಲಿ ಕೆಲಸ ಸೇವೆ ಸಲ್ಲಿಸಿರುವ ಅವರು ಈಗ ಚಿಕ್ಕಮಗಳೂರಿಗೆ ವರ್ಗಾವಣೆ ಆಗಿದ್ದಾರೆ.

ಎಚ್ ಎಸ್ ಕೀರ್ತನಾ ಸಿನಿ ಜೀವನ
ಬಾಲ ಕಲಾವಿದೆಯಾಗಿ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ನಟಿಸಿರುವ ಕೀರ್ತನಾ ಅವರು ಅನೇಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಸುಮಾರು 32 ಚಲನಚಿತ್ರಗಳು ಮತ್ತು 48 ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕರ್ಪೂರದ ಗೊಂಬೆ, ಗಂಗಾ-ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಸಿಂಹಾದ್ರಿ, ಲೇಡಿ ಕಮಿಷನರ್, ಹಬ್ಬ, ದೊರೆ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇದಲ್ಲದೆ ಜನನಿ, ಚಿಗುರು, ಪುಟಾಣಿ ಏಜೆಂಟ್ ಮುಂತಾದ ಧಾರಾವಾಹಿಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ತಮ್ಮ ತಂದೆಯ ಆಶಯದಂತೆ 2011 ರಲ್ಲಿ ಕೀರ್ತನಾ ಅವರು ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾದರು. ಇದರ ಬಳಿಕ ಎರಡು ವರ್ಷಗಳ ಕಾಲ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಕೀರ್ತನಾ 2013 ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಿದರು. ಮೊದಲ ಐದು ಪ್ರಯತ್ನಗಳಲ್ಲಿ ಸೋಲು ಕಂಡ ಅವರು, ಆರನೇ ಪ್ರಯತ್ನದಲ್ಲಿ ಗೆದ್ದು ಐಎಎಸ್ ಅಧಿಕಾರಿಯಾದರು.
2020 ರಲ್ಲಿ, ಅವರು 167 ನೇ ರ್ಯಾಂಕ್ ಜೊತೆಗೆ ಅಖಿಲ ಭಾರತ ಶ್ರೇಣಿ (AIR) ಯೊಂದಿಗೆ ಐಎಎಸ್ ಅಧಿಕಾರಿಯಾದರು. ಅವರು ತಮ್ಮ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯ ಕರ್ನಾಟಕದ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 2020 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಕೀರ್ತನಾ, ಚಿಕ್ಕಮಗಳೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ.












Click it and Unblock the Notifications