Bigg Boss: ಕೊಳಕು ಮಾತು, ಕೆಟ್ಟ ವರ್ತನೆಯಿಂದ ಶೋಗೆ ಅಪಾಯ: ಸದ್ಯದಲ್ಲೇ ಬಿಗ್ ಬಾಸ್ ಅಂತ್ಯ?
ಬಿಗ್ ಬಾಸ್ ಹೆಸರಿಗೆ ತಕ್ಕಂತೆ ಕನ್ನಡ ಅತಿ ದೊಡ್ಡ ರಿಯಾಲಿಟಿ ಶೋ. ಬೇರೆ ಬೇರೆ ಕ್ಷೇತ್ರದ ಬೇರೆ ಬೇರೆ ಮನಸ್ಥಿತಿಯ ಕನಿಷ್ಠ ಹದಿನೈದು ಹಾಗೂ ಅದಕ್ಕಿಂತ ಹೆಚ್ಚಿನ ಸ್ಪರ್ಧಿಗಳನ್ನು ಒಂದೇ ಮನೆಯಲ್ಲಿ ಇರಿಸಿ ಟಾಸ್ಕ್‌ಗಳೊಂದಿಗೆ ಮನೋರಂಜನೆ ನೀಡುವ ರಿಯಾಲಿಟಿ ಶೋ. ಕನ್ನಡದ ಬಾದ್ ಶಾ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮಕ್ಕೆ ಅದರದೇ ಆದ ಘನತೆ ಇದೆ. ಈ ಶೋ ಪ್ರವೇಶಿಸಲು, ಆಡಿ ಗೆಲ್ಲಲು ಅನೇಕರು ಹರಸಾಹಸ ಪಡುತ್ತಾರೆ.
ಕಳೆದ ಹತ್ತು ಸೀಜನ್‌ಗಳನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದಿರುವ ಬಿಗ್ ಬಾಸ್ ಕನ್ನಡ ಇದೀಗ ಹನ್ನೊಂದನೆ ಹೆಜ್ಜೆ ಇಟ್ಟಿದೆ. ಅಂದರೆ ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿದ್ದು, ಮೂರನೇ ವಾರ ನಡೆಯುತ್ತಿದೆ. ಬಿಗ್ ಬಾಸ್ ಎಂದರೆ ಸಾಕು ಪ್ರೇಕ್ಷಕರು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಸಮಯದಲ್ಲಿ ಏನೇ ಬದಲಾವಣೆ ಆದರೂ ಕೂಡ ಸಂಪೂರ್ಣ ಶೋವನ್ನು ಕಾತುರದಿಂದ ವೀಕ್ಷಿಸುತ್ತಾರೆ.

ಆದರೆ ಇತ್ತೀಚಿಗೆ ಬಿಗ್ ಬಸ್ ಕನ್ನಡ ಪ್ರೇಕ್ಷರನ್ನು ಭಾರೀ ನಿರಾಸೆಗೊಳಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಬಾರಿಯ ಸೀಜನ್‌ಗಂತೂ ಜನ ಕ್ಯಾರೇ ಎನ್ನದೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸ್ಪರ್ಧಿಗಳ ಆಯ್ಕೆಯಲ್ಲಿ ಭಾರೀ ನಿರಾಸೆ
ಬಿಗ್ ಬಾಸ್ ಕನ್ನಡ ಆರಂಭಕ್ಕೆ ಸಿದ್ಧತೆಗಳು ಆರಂಭವಾಗುತ್ತಿದ್ದಂತೆ ಎಲ್ಲೆಡೆ ಸುದ್ದಿ ಹರಿದಾಡುತ್ತದೆ. ಹೀಗಾಗಿ ಈ ಬಾರಿ ಸ್ಪರ್ಧಿಗಳು ಯಾರಿರಬಹುದು ಎನ್ನುವ ಕುತೂಹಲ ಹೆಚ್ಚಾಗುತ್ತದೆ. ಜೊತೆಗೆ ಕೆಲವು ಸಂಭಾವ್ಯ ಪಟ್ಟಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ಹೀಗಾಗಿ ಪ್ರೇಕ್ಷಕರು ಕೂಡ ಗ್ರ್ಯಾಂಡ್ ಓಪನಿಂಗ್ ದಿನದ ವರೆಗೂ ಕಾದು ಕುಳಿತಿರುತ್ತಾರೆ. ಈ ಬಾರಿ ಕೂಡ ಅದೇ ರೀತಿ ಕಾದು ಕುಳಿತವರಿಗೆ ಭಾರೀ ನಿರಾಸೆಯಾಗಿದೆ.
ಈ ಬಾರಿ ಬಹುತೇಕರು ಧಾರಾವಾಹಿ ಮುಗಿದವರು, ರಿಯಾಲಿಟಿ ಶೋಗಳಲ್ಲಿ ಇದ್ದವರೇ, ಹಾಗೂ ತೆರೆ ಮರೆಗೆ ಸರಿದವರನ್ನೇ ಈ ಬಾರಿ ಸ್ಪರ್ಧಿಗಳನ್ನಾಗಿ ಮಾಡಿದ್ದಾರೆ ಎನ್ನುವುದು ಹಲವರ ಅಸಮಾಧಾನವಾಗಿದೆ. ಕೆಲವೊಂದಿಷ್ಟು ಮಂದಿ ಒಕೆ ಈ ಶೋಗೆ ಅರ್ಹರು ಎನಿಸಿದರೂ ಕೂಡ ದಿನ ಕಳೆದಂತೆ ಅವರ ವರ್ತನೆ ಕಂಡು ಪ್ರೇಕ್ಷಕರೇ ಕಂಗಾಲಾಗಿದ್ದಾರೆ.

ಸದ್ಯದಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ ಅಂತ್ಯ
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾದ ದಿನದಿಂದಲೂ ಜಗಳ, ಬೈಗುಳ ಹೊಡೆದಾಟ ಮಿತಿ ಮೀರಿದ ವರ್ತನೆಯೇ ಹೆಚ್ಚಾಗಿದೆ. ದೈಹಿಕ ಹಲ್ಲೆ, ಕೊಳಕು ಮಾತು, ಕೆಟ್ಟ ವರ್ತನೆಗಳೇ ಹೆಚ್ಚಾಗಿದೆ. ಒಂದೆಡೆ ಮಹಿಳೆಯರಿಗೆ ಅಪಮಾನವಾಗುವಂತೆ ಒಬ್ಬ ಸ್ಪರ್ಧಿ ಬೈದರೆ, ಮತ್ತೊಂದೆಡೆ ಆ ಸ್ಪರ್ಧಿಯನ್ನು ಪ್ರಚೋದಿಸುವ ಮಾತುಗಳನ್ನು ಮಹಿಳಾ ಸ್ಪರ್ಧಿಗಳೇ ಆಡುತ್ತಾರೆ. ಇದರಿಂದ ಜಗಳ ಆರಂಭವಾಗಿ ಮೊದಲು ಇಬ್ಬರು ಕೊನೆಗೆ ಎಲ್ಲರೂ ಸೇರಿ ಅದು ಅತಿರೇಖಕ್ಕೆ ಹೋಗಿ ಕೈ ಕೈ ಮಿಲಾಯಿಸಿದ ಪ್ರಸಂಗ ಕೂಡ ನಡೆದಿದೆ.
ಜನರ ವಿಶ್ವಾಸ ಕಳೆದುಕೊಂಡ ಬಿಗ್ ಬಾಸ್ ಶೋ
ಹುಚ್ಚ ವೆಂಕಟ್ ಸೇರಿದಂತೆ ಕೆಲವು ಸ್ಪರ್ಧಿಗಳು ಮಿತಿ ಮೀರಿದ ವರ್ತನೆ ತೋರಿದ ಘಟನೆಗಳು ಬಿಗ್ ಬಾಸ್‌ನಲ್ಲಿ ನಡೆದಿದೆ. ಆದರೆ ಈ ಬಾರಿಯ ಸೀಜನ್‌ನಂತೂ ಜಗಳದಲ್ಲಿ ಶೋನೋ..ಶೋನಲ್ಲಿ ಜಗಳವೋ ಎನ್ನುವ ಗೊಂದಲದಲ್ಲಿ ಪ್ರೇಕ್ಷಕರು ಚಾನೆಲ್ ಬದಲಿಸುವ ಪರಿಸ್ಥಿತಿ ಎದುರಾಗಿದೆ. ಬಿಗ್ ಬಾಸ್ ಶೋ ಸೀಜನ್‌ನಿಂದ ಸೀಜನ್‌ಗೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಇದೇ ರೀತಿಯ ಸ್ಪರ್ಧಿಗಳ ಆಯ್ಕೆ ಹಾಗೂ ಆಯೋಜನೆ ನಡೆದರೆ ಕನ್ನಡಿಗರ ಮೆಚ್ಚಿನ ರಿಯಾಲಿಟಿ ಶೋ ಶೀಘ್ರದಲ್ಲೇ ಪ್ರಸಾರವನ್ನು ಕಾಯಂ ರದ್ದುಪಡಿಸಬೇಕಾದ ಪರಿಸ್ಥಿತಿ ಬರುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.












Click it and Unblock the Notifications