ಧರ್ಮಸ್ಥಳದಲ್ಲಿ ಸರಳವಾಗಿ ನೆರವೇರಿತು ಬಿಗ್‌ಬಾಸ್ ಖ್ಯಾತಿಯ ಉಗ್ರಂ ಮಂಜು ಮದುವೆ
ಬಿಗ್‌ಬಾಸ್ ಕನ್ನಡ ಸೀಸನ್-11ರ ಸ್ಪರ್ಧಿ ಹಾಗೂ ಸ್ಯಾಂಡಲ್‌ವುಡ್ ನಟ ಉಗ್ರಂ ಮಂಜು ಅವರು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇಂದು (ಜನವರಿ 23) ಧರ್ಮಸ್ಥಳದಲ್ಲಿ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ಸಂಧ್ಯಾ ಅವರೊಂದಿಗೆ ಮಂಜು ಹೊಸ ಜೀವನವನ್ನು ಆರಂಭಿಸಿದರು. ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.
ಧರ್ಮಸ್ಥಳದಲ್ಲಿ ಕುಟುಂಬದ ಆಪ್ತರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆ ನೆರವೇರಿದ್ದು, ಸಂಪ್ರದಾಯಬದ್ಧವಾಗಿ ಉಗ್ರಂ ಮಂಜು ಮತ್ತು ಸಂಧ್ಯಾ ಹಸೆಮಣೆ ಏರಿದ್ದಾರೆ. ಮದುವೆ ಬಳಿಕ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಿವಾಹದ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು, ಸಹ ಕಲಾವಿದರು ಹಾಗೂ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಉಗ್ರಂ ಮಂಜು-ಸಂಧ್ಯಾ ದಂಪತಿಗೆ ಶುಭಾಶಯಗಳನ್ನು ಕೋರಿದ್ದಾರೆ. ಸರಳವಾಗಿ ನಡೆದ ಈ ಮದುವೆ ಸಂಭ್ರಮ ಇದೀಗ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ಉಗ್ರಂ ಹೆಸರು ಬಂದಿದ್ದೇಗೆ?
ಮೂಲತಃ ಕೋಲಾರ ಜಿಲ್ಲೆಯವರಾದ ಮಂಜು, ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಶ್ರೀಮುರಳಿ ನಟನೆಯ "ಉಗ್ರಂ" ಸಿನಿಮಾದಲ್ಲಿನ ಪಾತ್ರದಿಂದ ಅವರಿಗೆ 'ಉಗ್ರಂ ಮಂಜು' ಎಂಬ ಹೆಸರು ಸಿಕ್ಕಿದ್ದು, ಆ ಹೆಸರು ಅವರ ಗುರುತಾಗಿಯೇ ಉಳಿದಿದೆ. ನಂತರ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ.
ಇತ್ತೀಚೆಗೆ ತೆರೆ ಕಂಡ ನಟ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಸಿನಿಮಾದಲ್ಲೂ ಉಗ್ರಂ ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್-11ರಲ್ಲಿ ಭಾಗವಹಿಸುವ ಮೂಲಕ ಮಂಜು ಮನೆಮಾತಾಗಿದ್ದು, ತಮ್ಮ ನೇರ ನುಡಿ ಮತ್ತು ವ್ಯಕ್ತಿತ್ವದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು.
ಕಲಾವಿದರಾಗುವುದು ನಮಗೆ ವರವೋ, ಶಾಪವೋ ಅಂತ ಗೊತ್ತಿಲ್ಲ. ನಮಗೆ ತಿಂಗಳಿಗೆ ಇಷ್ಟು ಅಂತ ಸಂಭಾವನೆ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ ಎಂದು ಉಗ್ರಂ ಮಂಜು ಬೇಸರದ ಮಾತುಗಳನ್ನಾಡಿದ್ದರು. ಸಿನಿಮಾ ಕ್ಷೇತ್ರದಲ್ಲಿರುವ ಅನಿಶ್ಚಿತತೆ, ಸಂಭಾವನೆಯ ಭರವಸೆ ಇಲ್ಲದ ಸ್ಥಿತಿ ಹಾಗೂ ಕೆಲಸದ ಅಂತರಗಳ ಬಗ್ಗೆ ಮಾತನಾಡಿದ್ದ ಅವರು, ಸಾಫ್ಟ್‌ವೇರ್, ಟೀಚರ್ ಹೀಗೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ 50 ಸಾವಿರ, 1 ಲಕ್ಷ ಸಂಬಳ ಬರಲಿದೆ ಎಂಬ ಗ್ಯಾರಂಟಿ ಇರುತ್ತೆ. ಆದರೆ ನಮಗೆ ಒಮ್ಮೊಮ್ಮೆ 2-3 ತಿಂಗಳು ಸಿನಿಮಾಗಳೇ ಇರೋದಿಲ್ಲ. ಇಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಬೇಕಾದರೆ ಯೋಚನೆ ಸಹಜ ಎಂದು ಹೇಳಿಕೊಂಡಿದ್ದರು.
ಬಿಗ್‌ಬಾಸ್ ಮುಗಿದ ಬಳಿಕ ಉಗ್ರಂ ಮಂಜು ಅವರು ತಮ್ಮ ಹುಡುಗಿಯನ್ನು ಪರಿಚಯಿಸಿದ್ದರು. ಎಂಗೇಜ್‌ಮೆಂಟ್ ಫೋಟೋಗಳು ಕೂಡ ವೈರಲ್ ಆಗಿದ್ದವು. ಇಂದು ಧರ್ಮಸ್ಥಳದಲ್ಲಿ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ಸಂಧ್ಯಾ ಜೊತೆ ಹಸೆಮಣೆ ಏರುವ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ ಉಗ್ರಂ ಮಂಜು.
ಬಿಗ್ ಬಾಸ್ ಮನೆಯೊಳಗೆ ತಮ್ಮ ನೇರ ನುಡಿ, ಜೀವನದ ನಿಜಸ್ಥಿತಿಯನ್ನು ಬಿಚ್ಚಿಟ್ಟ ಮಾತುಗಳಿಂದ ಪ್ರೇಕ್ಷಕರ ಅಭಿಮಾನ ಗಳಿಸಿದ್ದರು. ಅವರ ಈ ಪ್ರಾಮಾಣಿಕ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಇದೀಗ ಜೀವನದ ಅನಿಶ್ಚಿತತೆಗಳ ನಡುವೆ ಹೊಸ ಅಧ್ಯಾಯ ಆರಂಭಿಸಿರುವ ಉಗ್ರಂ ಮಂಜುಗೆ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ವರವೋ ಶಾಪವೋ ಎಂದು ಗೊಂದಲ ವ್ಯಕ್ತಪಡಿಸಿದ್ದ ಕಲಾವಿದನ ಬದುಕಿನಲ್ಲಿ ಈಗ ಹೊಸ ಬೆಳಕು ಮೂಡಿದ್ದು, ಉಗ್ರಂ ಮಂಜು-ಸಂಧ್ಯಾ ದಾಂಪತ್ಯ ಜೀವನಕ್ಕೆ ಅಭಿಮಾನಿಗಳ ಆಶೀರ್ವಾದ ಹರಿದುಬರುತ್ತಿದೆ.












Click it and Unblock the Notifications