BBK-12: ಬಿಗ್‌ಬಾಸ್ ಇಂದಿನಿಂದ ಮತ್ತೆ ಪ್ರಸಾರವಾಗುತ್ತಾ? ಕಲರ್ಸ್ ಪ್ರೋಮೋದಲ್ಲಿ ಸಿಕ್ತು ಉತ್ತರ
ನಿಯಮ ಉಲ್ಲಂಘಿದ ಆರೋಪದ ಮೇರೆಗೆ ಬಿಗ್‌ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಹಾಕಿದೆ. ಈ ಹಿನ್ನೆಲೆ ಬಿಗ್‌ಬಾಸ್ ಮನೆಯನ್ನು ಕೂಡ ನಿರ್ಬಂಧಿಸಲಾಗಿದ್ದು, ಒಳಗಿದ್ದ ಸ್ಪರ್ಧಿಗಳನ್ನು ಕಾರ್ಯಕ್ರಮದ ನಡುವೆಯೇ ರಾತ್ರೋರಾತ್ರಿ ರೆಸಾರ್ಟ್‌ವೊಂದಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ಸ್ಪರ್ಧಿಗಳೆಲ್ಲ ಈಗಲ್‌ಟನ್ ರೆಸಾರ್ಟ್‌ನಲ್ಲೇ ಇದ್ದು, ಬಿಗ್‌ಬಾಸ್ ಕಾರ್ಯಕ್ರಮ ಮತ್ತೆ ಮುಂದುವರಿಯುತ್ತಾ ಎಂಬ ಗೊಂದಲದಲ್ಲಿ ಪ್ರೇಕ್ಷಕರು ಇದ್ದಾರೆ. ಇದಕ್ಕೆ ಕಲರ್ಸ್ ವಾಹಿನಿ ಪ್ರೋಮೋ ಹಂಚಿಕೊಂಡು ಸ್ಪಷ್ಟನೆ ನೀಡಿದೆ.
ಹೌದು, ಬಿಡದಿ ಬಳಿಯ ಜಾಲಿವುಡ್ ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಮನೆ ಇದ್ದು, ಅಲ್ಲಿಯೇ ಬಿಗ್‌ಬಾಸ್ ಕನ್ನಡ ಸೀಸನ್-12 ಹತ್ತು ದಿನಗಳಿಂದ ನಡೆಯುತ್ತಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಸ್ಟುಡಿಯೋಗೆ ನೋಟಿಸ್ ನೀಡಿ, ಕೂಡಲೇ ಕಾರ್ಯಕ್ರಮ ಬಂದ್ ಮಾಡುವಂತೆ ಸೂಚಿಸಿತ್ತು. ಅಂತಿಮವಾಗಿ ಮಂಗಳವಾರ ಸಂಜೆ ತಹಶೀಲ್ದಾರ್ ಹಾಗೂ ಪೊಲೀಸರ ನೇತೃತ್ವದಲ್ಲಿ ಸ್ಟುಡಿಯೋಗೆ ಬೀಗಮುದ್ರೆ ಹಾಕಲಾಯಿತು. ಒಳಗಿದ್ದ ಸ್ಪರ್ಧಿಗಳನ್ನು ಅಚ್ಚರಿ ರೀತಿಯಲ್ಲಿ ಶೋ ಮಧ್ಯೆಯೇ ಮನೆಯಿಂದ ಶಿಫ್ಟ್ ಮಾಡಲಾಗಿದೆ.

ಸದ್ಯ ಬಿಗ್‌ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದು, ದೂರದ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅಡ್ಡಿ ಆಗಿರುವುದರಿಂದ ತಾತ್ಕಾಲಿಕವಾಗಿ ಶೋ ಪ್ರಸಾರ ಸ್ಥಗಿತವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರೇಕ್ಷಕರು ಕೂಡ ಈ ಬೆಳವಣಿಗೆಯಿಂದ ಶಾಕ್‌ನಲ್ಲಿದ್ದು, ಬಿಗ್‌ಬಾಸ್ ಕಥೆ ಮುಗಿತಾ? ಎಂಬ ಗೊಂದಲದಲ್ಲಿದ್ದಾರೆ. ಇದರ ನಡುವೆ ಕಲರ್ಸ್ ವಾಹಿನಿ ಪ್ರೋಮೋ ಹಂಚಿಕೊಂಡಿದೆ.
ಪ್ರೋಮೋದಲ್ಲಿ ಹೇಳಿದ್ದೇನು?
ಮೊದಲಿಗೆ ಪ್ರಕಟಣೆ ನೀಡಿರುವ ಕಲರ್ಸ್ ವಾಹಿನಿಯು ಅನಿರೀಕ್ಷಿತ ಕಾರಣಗಳಿಂದಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್‌ನ ಇಂದಿನ ಸಂಚಿಕೆಯ ಪ್ರಕಟಣೆಯ ಸಮಯದಲ್ಲಿ ವ್ಯತ್ಯಯ ಸಂಭವಿಸಿದೆ. ಈ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ. ಇಂದಿನ ಸಂಚಿಕೆ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ ಎಂದು ಹೇಳಿತ್ತು. ನಂತರ ಪ್ರೋಮೋ ಹಂಚಿಕೊಂಡಿದ್ದು, ಇಂದು ಸಂಜೆ ಎಪಿಸೋಡ್ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದೆ.
ಕೆರಳಿದ ರಕ್ಷಿತಾನನ್ನ ಕಂಡು ಅಸುರಾಧಿಪತಿ ಗಪ್ಚುಪ್
— Colors Kannada (@ColorsKannada) October 8, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/pxRqDBZOsg
ಊಟದ ವಿಚಾರವಾಗಿ ರಕ್ಷಿತಾ ಶೆಟ್ಟಿ ಹಾಗೂ ಉಳಿದ ಸ್ಪರ್ಧಿಗಳ ನಡುವೆ ಗಲಾಟೆ ನಡೆದಿದ್ದು, ಈ ಎಪಿಸೋಡ್ ಇಂದು ರಾತ್ರಿ ಪ್ರಸಾರವಾಗಲಿದೆ ಎಂದು ಹೇಳಿದೆ. ಹೀಗಾಗಿ ಬಿಗ್‌ಬಾಸ್ ಪ್ರೇಕ್ಷಕರಿಗೆ ತುಸು ರಿಲೀಫ್ ಸಿಕ್ಕಿದೆ. ಬಿಗ್‌ಬಾಸ್ ಹಾಗೂ ಜಾಲಿವುಡ್‌ನವರು ರಾಜ್ಯ ಸರ್ಕಾರದೊಂದಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಶೋ ಮತ್ತೆ ಶುರುವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಜಾಲಿವುಡ್ ಸ್ಟುಡಿಯೋದವರು ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗಿನ ವಿವಾದ ಇತ್ಯರ್ಥ ಮಾಡಿಕೊಂಡಿದರೆ, ಎಂದಿನಂತೆ ಅಲ್ಲಿಯೇ ಬಿಗ್‌ಬಾಸ್ ಕಾರ್ಯಕ್ರಮ ಮುಂದುವರಿಯಲಿದೆ. ಏಕೆಂದರೆ ಮತ್ತೊಂದು ಬಿಗ್‌ಬಾಸ್ ಮನೆ ಆರಂಭಿಸಲು ಸಾಕಷ್ಟು ಸಮಯವೂ ಬೇಕಿರುವುದರಿಂದ ಇದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. ಕಾನೂನು ತೊಡಕುಗಳನ್ನು ಪರಿಹರಿಸಿ ಬಿಗ್‌ಬಾಸ್ ಪುನರಾರಂಭಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು.












Click it and Unblock the Notifications