Vinay Gowda: ಅಭಿಮಾನಿ ರಕ್ತದಲ್ಲಿ ಮೂಡಿದ ವಿನಯ್ ಗೌಡ; ಮಹಾತ್ಮ ಗಾಂಧಿ ಹೇಳಿಕೆ ನೆನಪಿಸಿಕೊಂಡಿದ್ದೇಕೆ ನಟ?
ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರಿಗೆ ತಮ್ಮ ಅಭಿಮಾನವನ್ನು ತೋರಿಸಲು ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅನ್ನದಾನ, ರಕ್ತದಾನ, ದಿನಸಿ ನೀಡುವುದು, ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಈ ರೀತಿಯಲ್ಲಿ ತಮ್ಮ ಅಭಿಮಾನ ತೋರಿಸುತ್ತಾರೆ. ಆದರೆ, ಕೆಲವೊಮ್ಮೆ ಅದು ಅತಿರೇಕಕ್ಕೆ ಹೋಗಿಬಿಡುತ್ತದೆ. ಅದಕ್ಕೆ ಉದಾಹರಣೆಯೊಂದು ಸಿಕ್ಕಿದೆ.
ಹರ ಹರ ಮಹಾದೇವ ಖ್ಯಾತಿಯ ನಟ, ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವಿನಯ್ ಗೌಡ ಅವರ ಅಭಿಮಾನಿಯೊಬ್ಬರು ತಮ್ಮ ರಕ್ತದಲ್ಲಿ ವಿನಯ್ ಗೌಡ ಅವರ ಚಿತ್ರವನ್ನು ಬರೆದಿದ್ದಾರೆ. ಇದನ್ನು ವಿಡಿಯೋ ಮಾಡಿ ವಿನಯ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋಗೆ 'ಆನ್' ಅಭಿಮಾನಿಗಳು ಲೈಕ್, ಕಾಮೆಂಟ್ ಮಾಡುತ್ತಾ ವೈರಲ್ ಮಾಡುತ್ತಿದ್ದಾರೆ. ಇದೇ ವೇಳೆ ನಟ ವಿನಯ್ ಗೌಡ ಕೂಡ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳಿಗೆ ವಿನಯ್ ಗೌಡ ಮನವಿ
ರವೀಶ್ ಎಂಬ ಕಲಾವಿದ ವಿನಯ್ ಗೌಡ ಅವರ ಅಭಿಮಾನಿಯಾಗಿರು ಚಂದನ್ ಎನ್ನುವವರ ರಕ್ತವನ್ನು ಬಳಸಿ, ನಟ ವಿನಯ್ ಗೌಡ ಅವರ ಚಿತ್ರವನ್ನು ಬರೆದಿದ್ದಾರೆ. ಚಂದನ್ ಅವರ ರಕ್ತವನ್ನು ಒಂದು ಸಿರೆಂಜ್ ಮೂಲಕ ತೆಗೆದುಕೊಂಡು, ಅದರ ಮೂಲಕ ಚಿತ್ರ ಬಿಡಿಸಿರುವುದನ್ನು ವಿಡಿಯೋ ಮಾಡಿದ್ದಾರೆ ಕಲಾವಿದ ರವೀಶ್. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಯೋಗೆ ಕಾಮೆಂಟ್ ಮಾಡಿರುವ ನಟ ವಿನಯ್ ಗೌಡ, "ಆತ್ಮೀಯ ರವೀಶ್, ಮೊದಲನೆಯದಾಗಿ, ನಿಮ್ಮ ಕಲಾತ್ಮಕ ಪ್ರತಿಭೆ ಮತ್ತು ಚಂದನ್ ಅವರ ರಕ್ತವನ್ನು ಬಳಸಿಕೊಂಡು ಭಾವಚಿತ್ರವನ್ನು ರಚಿಸಲು ಬಯಸಿದ ನಿಮ್ಮ ಚಿಂತನೆಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದಿದ್ದಾರೆ.
ಮುಂದುವರಿದು, " ಆದರೆ, ಈ ಉದ್ದೇಶಕ್ಕಾಗಿ ನೀವಿಬ್ಬರೂ ನಿಮ್ಮ ರಕ್ತವನ್ನು ಬಳಸುವುದನ್ನು ತಡೆಯಬೇಕು ಎಂದು ನಾನು ವಿನಂತಿಸುತ್ತೇನೆ. ಬದಲಾಗಿ, ರಕ್ತವನ್ನು ಅಗತ್ಯವಿರುವವರಿಗೆ ದಾನ ಮಾಡುವುದನ್ನು ಪರಿಗಣಿಸಬೇಕು. ಇದಕ್ಕೆ ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ನಿಮ್ಮ ನಿಸ್ವಾರ್ಥ ಕೆಲಸ ಒಂದು ಜೀವವನ್ನು ಉಳಿಸಬಹುದು. ಅದು ನನ್ನ ಭಾವಚಿತ್ರವನ್ನು ಮೀರಿಸುತ್ತದೆ" ಎಂದು ಬುದ್ದಿವಾದ ಹೇಳಿದ್ದಾರೆ.

"ಮಹಾತ್ಮ ಗಾಂಧಿಯವರು ಒಮ್ಮೆ ಹೇಳಿದಂತೆ, "ನಿಮ್ಮನ್ನು ಕಂಡುಕೊಳ್ಳಲು ಉತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು'. ನಿಮ್ಮ ಔದಾರ್ಯವು ಇನ್ನೊಬ್ಬರ ಜೀವನದಲ್ಲಿ ಬದಲಾವಣೆಯನ್ನು ತರುವುದಲ್ಲದೆ ಮಾನವೀಯತೆಯ ಒಳ್ಳೆಯತನ ಉಳಿಯುತ್ತದೆ. ಈ ವಿನಂತಿಯನ್ನು ಪರಿಗಣಿಸಿದ್ದಕ್ಕಾಗಿ ಧನ್ಯವಾದಗಳು. ಶುಭಾಶಯಗಳೊಂದಿಗೆ, ವಿನಯ್ ಗೌಡ" ಎಂದು ಕಾಮೆಂಟ್ ಮಾಡಿದ್ದಾರೆ.
ವಿನಯ್ ಗೌಡ ಕಾಮೆಂಟ್ ಮೆಚ್ಚಿದ ನೆಟ್ಟಿಗರು
ರಕ್ತದಲ್ಲಿ ತಮ್ಮ ಭಾವಚಿತ್ರ ಬರೆದ ಅಭಿಮಾನಿಗಳಿಗೆ ಬುದ್ದಿವಾದ ಹೇಳಿರುವ ವಿನಯ್ ಗೌಡ ಅವರ ಹೇಳಿಕೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಭಿಮಾಣಿಯೊಬ್ಬರು, "ನೀವೊಂದು ಅಮೂಲ್ಯ ರತ್ನ ... ನಿಮ್ಮ ಈ ವ್ಯಕ್ತಿತ್ವಕ್ಕೆ ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಿದ್ದೇವೆ. ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಬಹಳಷ್ಟು ಸಂತೋಷ, ಸಂಪತ್ತು ಮತ್ತು ಯಶಸ್ಸನ್ನು ನೀಡಲಿ" ಎಂದಿದ್ದಾರೆ.
ಮತ್ತೊಬ್ಬರು, "ನಿಮ್ ಫ್ಯಾನ್ಸ್ ಅಂದ್ರೆ ಎನ್ ಅನ್ಕೊಂಡಿರಿ ಬ್ರೋ, ಬಿಗ್ ಬಾಸ್ ಅಲ್ಲಿ ಸೋತಿರ ಬಹುದು, ಆದರೆ, ಮನಸ್ಸು ಗೆದ್ದಿದಿರಿ" ಎಂದಿದ್ದಾರೆ. ಮಗದೊಬ್ಬರು, "ವಿನಯ್ ನಾ ದ್ವೇಷ ಮಾಡ್ತಾ ಇದ್ದ ಎಷ್ಟೋ ಜನ ಈಗ ಅವ್ರ್ ಫ್ಯಾನ್ ಆಗಿದ್ದಾರೆ. ಕೆಲವರು ಫ್ಯಾನ್ ಮಾತ್ರ ಆಗಿದ್ದರು. ವೋಟ್ ಮಾಡ್ತಾ ಇರಲಿಲ್ಲ. ಈಗ ಕೊಡೋ ಈ ಪ್ರೀತಿ ಅವ್ರು ಬಿಗ್ ಬಾಸ್ ಮನೆ ಒಳಗೆ ಸ್ಪರ್ಧಿ ಆಗಿದ್ದಾಗ ಕೊಟ್ಟಿದ್ರೆ, ಅವರು ಟಾಪ್ 2 ನಲ್ಲಿ ಬಂದು ಖಂಡಿತಾ ಅವರೇ ವಿನ್ನರ್ ಆಗ್ತಾ ಇದ್ದರು" ಎಂದು ಹೇಳಿದ್ದಾರೆ.












Click it and Unblock the Notifications