Bheema Movie: ಕೊನೆಗೂ 'ಭೀಮ'ನೇ ಬರಬೇಕಾಯ್ತು ಥಿಯೇಟರ್‌ನಲ್ಲಿ 'ಹೌಸ್‌ಫುಲ್' ಬೋರ್ಡ್ ನೋಡಲು
ಬೆಂಗಳೂರು, ಆಗಸ್ಟ್ 11: ಸ್ಯಾಂಡಲ್‌ವುಡ್ ಸಲಗ ನಟ, ನಿರ್ದೇಶಕ ವಿಜಯ್ ಕುಮಾರ್ (ದುನಿಯಾ ವಿಜಿ) ಅವರು ನಿರ್ದೇಶಿಸಿ ನಟಿಸಿರುವ 'ಭೀಮ' (Bheema film) ಸಿನಿಮಾ ಮಾಸ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಯಶಸ್ವಿಯಾಗಿದೆ. ಒಂದು ವರ್ಗದವರ ಸಿನಿಮಾ ಇದಾದರೂ ಇದರಲ್ಲಿನ ಸಾಮಾಜಿಕ ಸಂದೇಶ ಎಲ್ಲರಿಗೂ ಹಿಡಿಸುತ್ತದೆ. ಈ ಕಾರಣದಿಂದಲೇ ಥಿಯೇಟರ್‌ಗಳಲ್ಲಿ 'ಹೌಸ್‌ಫುಲ್ ಬೋರ್ಡ್' ಕಂಡು ಬಂದಿದೆ.
'ಭೀಮ' ಸಿನಿಮಾ ರಾಜ್ಯಾದ್ಯಂತ ಆಗಸ್ಟ್ 09ರಂದು ಶುಕ್ರವಾರ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮೊದಲ ಎರಡು ದಿನ (ಶುಕ್ರವಾರ ಮತ್ತು ಶನಿವಾರ) ಭರ್ಜರಿ ಸೌಂಡ್ ಮಾಡಿದೆ. ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಮುನ್ನುಗ್ಗುತ್ತಿದೆ.

ಸ್ಟಾರ್ ನಟರ ಸಿನಿಮಾಗಳು ಇತ್ತೀಚೆಗೆ ತೀರಾ ಕಡಿಮೆ ಆಗಿದ್ದರಿಂದ ಕನ್ನಡ ಸಿನಿಮಾ ನೋಡಲು ಥಿಯೇಟರ್‌ಗಳಿಗೆ ಜನರು ಬರುತ್ತಿಲ್ಲ. ಹೌಸ್‌ಫುಲ್ ಬೋರ್ಡ್ ನೋಡಿಯೇ ಎಷ್ಟು ದಿನಗಳಾಯ್ತು ಎನ್ನುತ್ತಿದ್ದವರಿಗೆ 'ಭೀಮ' ಉತ್ತರ ನೀಡಿದ್ದಾನೆ. ಚಿತ್ರಮಂದಿರಗಳಲ್ಲಿ ಮತ್ತೆ ಶಿಳ್ಳೆ, ಚಪ್ಪಾಳೆ, ಕೇಕೆ ಕಂಡು ಬಂದಿದ್ದು, 'ಭೀಮ' ಸಿನಿಮಾ ನೋಡಿದವರು ಅದರಲ್ಲಿನ ಸಾಮಾಜಿಕ ಸಂದೇಶಕ್ಕೆ ಶಬ್ಬಾಷ್‌ಗಿರಿ ಕೊಟ್ಟಿದ್ದಾರೆ.
ಸಿಂಗಲ್ ಸ್ಕ್ರೀನ್‌ಗಳಲ್ಲಿ 'ಭೀಮ' ಅಬ್ಬರ, ಹೌಸ್‌ಫುಲ್
ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಮಧ್ಯೆ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ ಎಂಬ ಕೊರಗಿತ್ತು. ಈ ಮಧ್ಯೆ ಬಿಡುಗಡೆ ಆಗುತ್ತಿದ್ದ ಸಣ್ಣ ಸಣ್ಣ ಸಿನಿಮಾಗಳು ಥಿಯೇಟರ್‌ಗೆ ಬಂದಿದ್ದೆ ಗೊತ್ತಾಗುತ್ತಿರಲಿಲ್ಲ. ಗೊತ್ತಾಗುವ ವೇಳೆಗೆ ಚಿತ್ರಮಂದಿರದಿಂದಲೇ ಎತ್ತಂಗಡಿ ಆಗುತ್ತಿದ್ದವು. ಹೀಗಿರುವಾಗ 'ಭೀಮ' ಸಿಂಗಲ್ ಸ್ಕ್ರೀನ್‌ಗಳಲ್ಲಿ ಅಬ್ಬರಿಸಿದ್ದಾನೆ. ಥಿಯೇಟರ್ ಮಾಲೀಕರಿಗೆ ಮೊಗದಲ್ಲಿ ಖುಷಿ ಹೆಚ್ಚುವಂತೆ ಮಾಡಿದ್ದಾನೆ.

ಈ ಹಿಂದೆ ನಟ, ನಿರ್ದೇಶಕ ವಿಜಯ್ ಕುಮಾರ್ ಅವರೇ ನಿರ್ದೇಶಿಸಿದ್ದ ಮೊದಲ ಸಿನಿಮಾ 'ಸಲಗ' ಸಹ ಅಭಿಮಾನಿಗಳಿಂದ ಉತ್ತಮ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ರೀತಿ 'ಭೀಮ' ನಿರ್ದಿಷ್ಟ ವರ್ಗದ ಅಭಿಮಾನಿಗಳಿಗೆ ಇಷ್ಟವಾಗಿದೆ. ಕಾಲೇಜು ವಿದ್ಯಾರ್ಥಿಗಳು, ವಯಸ್ಸಲ್ಲದ ವಯಸ್ಸಿನವರು ಗಾಂಜಾ, ಡ್ರಗ್ಸ್ ನಂತಹ ಚಟಗಳಿಗೆ ದಾಸರಾದರೆ, ಅವರ ಕುಟುಂಬದ ಪರಿಸ್ಥಿತಿ ಏನಾಗುತ್ತದೆ?, ಸಾಮಾಜಿಕವಾಗಿ ಅವರು ಎದುರಿಸುವ ಸಮಸ್ಯೆಗಳೇನು, ಕಾನೂನು ಕ್ರಮ ಎಲ್ಲವನ್ನು ತಮ್ಮ ದೇ ಆದ ಶೈಲಿಯಲ್ಲಿ ವಿಜಯ್ ಕುಮಾರ್ ಅವರು ಉಣಬಡಿಸಿದ್ದಾರೆ. ಸಿನಿಮಾದಲ್ಲಿ ಲವ್, ಕ್ಯಾಚಿ ಸಂಭಾಷಣೆ, ಉತ್ತಮ ಮ್ಯೂಸಿಕ್ ಇದೆ. ಹೊಡಿ ಬಡಿ ಜೊತೆಗೆ ರಕ್ತದ ದೃಶ್ಯಗಳು ಹೆಚ್ಚಿವೆ.
'ಭೀಮ' ಸಿನಿಮಾ ಬಿಡುಗಡೆಗು ಮೊದಲು ನಟ ವಿಜಯ್ ಕುಮಾರ್ ಅವರು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಆಪ್ತವಾಗಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಏಕೆಂದರೆ 'ಭೀಮ' ಆಗಸ್ಟ್ 09 ರಂದು ರಿಲೀಸ್ ಆದರೆ, ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೃಷ್ಣಂ ಪ್ರಣಯ ಸಖಿ' ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಹೀಗಾಗಿ ವಿಡಿಯೋ ಮೂಲಕ ನಟರು ಪ್ರಮೋಷನ್ ಮಾಡಿಕೊಂಡಿದ್ದರು.
'ಕೃಷ್ಣಂ ಪ್ರಣಯ ಸಖಿ' ಗೂ ಹೌಸ್‌ಫುಲ್ ನಿರೀಕ್ಷೆ...
ಈಗಾಗಲೇ ಗಣೇಶ್ ಅವರ ಈ ಹೊಸ ಸಿನಿಮಾದ 'ದ್ವಾಪರ ದಾಟುತ' ಹಾಡು ಸಖತ್ ಹಿಟ್ ಆಗಿದೆ. ಯುಟ್ಯೂಬ್‌ನಲ್ಲಿ ಅತ್ಯಧಿಕ ವೀಕ್ಷಣೆ ಪಡೆದುಕೊಂಡಿದೆ. ವಿಜಿ ಮತ್ತು ಗಣಿ ಇಬ್ಬರು ಒಂದೂವರೆ ದಶಕಕ್ಕಿಂತಲೂ ಹಳೆಯ ಸ್ನೇಹಿತರು. ಈ ಪೈಕಿ ಒಬ್ಬರ ಸಿನಿಮಾ ಜನಮನ್ನಣೆ ಪಡೆದು ಮುನ್ನುಗ್ಗುತ್ತಿದೆ.
ಮತ್ತೊಬ್ಬರಾದ ನಟ ಗಣೇಶ್ ಅವರ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆ ಸಿನಿಮಾ ಮೇಲೆ ಅಪಾರ ನಿರೀಕ್ಷೆಗಳು ಇವೆ. ಅಲ್ಲದೇ ಸಿಂಗಲ್ ಥಿಯೇಟರ್‌ಗಳಲ್ಲಿ ಮತ್ತೆ ಮುಂದಿನ ವಾರವು ಹೌಸ್ ಫುಲ್ ಬೋರ್ಡ್ ಕಾಣಬಹುದಾ?. ಜನರ ಮತ್ತೆ 'ಕೃಷ್ಣಂ ಪ್ರಣಯ ಸಖಿ'ಗಾಗಿ ಚಿತ್ರಮಂದಿರಗಳತ್ತ ಬರುತ್ತಾರಾ? ಹೇಗಿದೆ ಥಿಯೇಟರ್‌ಗಳ ಮುಂದಿನ ಭವಿಷ್ಯ ಎಂಬುದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.












Click it and Unblock the Notifications