Actress Bhavana: ಈಗ ದರ್ಶನ್ ಕೈ ಬಿಟ್ಟು ಹೋಗುವ ಹೇಡಿ ನಾನಲ್ಲ; ಯಾವತ್ತಿಗೂ ನಾನು ದರ್ಶನ್ ಪರ ಎಂದ ನಟಿ ಭಾವನಾ
ಬೆಂಗಳೂರು, ಜೂನ್. 27: ನಟ ದರ್ಶನ್ ಪ್ರಕರಣಕ್ಕೆ ಸ್ಯಾಂಡಲ್‌ವುಡ್‌ನಿಂದ ಹೆಚ್ಚು ಪ್ರತಿಕ್ರಿಯೆಗಳು ಬರುತ್ತಿಲ್ಲ. ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ನಟ ಸುದೀಪ್, ನಟಿ ರಮ್ಯಾ, ಜಗ್ಗೇಶ್ ಸೇರಿದಂತೆ ಕೆಲವೇ ಕೆಲವು ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟಿ ಭಾವನಾ ಅವರು ದರ್ಶನ್ ಬೆಂಬಲಕ್ಕೆ ಬಂದಿದ್ದಾರೆ.
ಕನ್ನಡದ ಸೂಪರ್ ಹಿಟ್ ಸಿನಿಮಾ ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಭಾವನಾ ರಾಮಣ್ಣ ಅವರು ಸಂತೋಷದಲ್ಲಿ ಮಾತ್ರ ಭಾಗಿಯಾಗಿ, ದುಃಖದ ಸಂದರ್ಭದಲ್ಲಿ ಅವರ ಜೊತೆಗೆ ನಿಲ್ಲದೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಯಾವಾಗಲೂ ದರ್ಶನ್ ಅವರ ಜೊತೆಗೆ ನಿಲ್ಲುತ್ತೇನೆ ಎಂದು ಗಟ್ಟಿಯಾಗಿ ಹೇಳಿಕೆ ನೀಡಿದ್ದಾರೆ.

ಹೇಡಿಯಂತೆ ದೂರ ಸರಿಯಲ್ಲ: ಭಾವನ ರಾಮಣ್ಣ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವ ಬಗ್ಗೆ ಚಿತ್ರರಂಗ ಮೌನವಾಗಿರುವ ಸಮಯದಲ್ಲಿ ಪ್ರಕರಣದ ಬಗ್ಗೆ ನಟಿ ಭಾವನಾ ರಾಮಣ್ಣ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ ತಾನು ಯಾವತ್ತಿಗೂ ದರ್ಶನ್ ಪರ. ಕಾನೂನಿನ ಮೇಲೆ ನಂಬಿಕೆ ಇಡೋಣ. ನಾವ್ಯಾರು ಅಲ್ಲಿ ಏನಾಗಿದೆ ಎಂದು ನೋಡಿಲ್ಲ. ತಾಳ್ಮೆ ಇರಲಿ ಎಂದಿದ್ದಾರೆ.
"ಯಾವ ಮನೆಯ ಹೆಣ್ಣು ಮಗಳೇ ಆಗಿರಲಿ ಎಲ್ಲರಿಗೂ ಮಾನ ಮರ್ಯಾದೆ, ಅವರಿಗೂ ಒಂದು ಮನಸ್ಸು ಇರುತ್ತದೆ. ಯಾವುದೋ ಒಂದು ಅಪ್ರಾಪ್ತ ಯುವತಿಗೆ, 19 ವರ್ಷದ ಹುಡುಗಿಗೆ ಈ ರೀತಿ ಮೆಸೇಜ್ ಬಂದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾರದ್ದೋ ಮನೆ ಹೆಣ್ಣುಮಕ್ಕಳಿಗೆ ನೀವ್ಯಾಕೆ ಮೆಸೇಜ್ ಮಾಡ್ತೀರಾ.. ? ಯಾವ ತರದ ಮೆಸೆಜ್ ಬಂದಿದೆ ..? ಕೆಲವು ಸೋಷಿಯಲ್ ಮಿಡಿಯಾ ಮೆಸೇಜ್‌ಗಳನ್ನು ನೋಡಿದ್ರೆ ಕೆಲ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ" ಎಂದು ಭಾವನಾ ಕಿಡಿ ಕಾರಿದ್ದಾರೆ.

"ಇದು ಸರಿ, ತಪ್ಪು ಅಂತ ನಾನು ಹೇಳ್ತಿಲ್ಲ. ಇನ್ನೊಂದು ಸೈಡ್ ಸ್ಟೋರಿಯನ್ನೂ ನೀವು ತೋರಿಸಬೇಕು. ಹೇಗೆ ಆಗಬಹುದಿತ್ತು, ಏನು ಮಾಡಬಹುದಿತ್ತು ಅನ್ನೋದನ್ನು ನಾನು ಹೇಳಲ್ಲ. ಸೈಕಿಯಾರ್ಟಿಸ್ಟ್ ಕೂಡ ಮನುಷ್ಯನ ಇವತ್ತಿನ ಘೋರವಾದ ಕೃತ್ಯಗಳನ್ನು ಘಟನೆ ಆದ ಮೇಲೆ ಅನಾಲಿಸಿಸ್ ಮಾಡುತ್ತಾರೆ. ಹಾಗೆ ಆಗದೆ ಇರುವ ತರ ಹೇಗೆ ಇರಬೇಕಿತ್ತು, ಯಾಕೆ ಹಾಗೆ ಆಗಿದೆ ಎಂದು ಇವತ್ತಿನವರೆಗೂ ಎಲ್ಲೂ ಜಾಸ್ತಿ ನಿದರ್ಶನಗಳು ಸಿಕ್ಕಿಲ್ಲ. ಯಾಕಂದ್ರೆ ಅದು ಮನುಷ್ಯನ ಎಮೋಷನ್‌ಗಳು. ನಾವು ತಲೆಯಿಂದ ಮಾತ್ರ ಯೋಚನೆ ಮಾಡಲ್ಲ ಮನಸ್ಸಿನಿಂದ ಕೂಡ, ಹೀಗಾಗಿ ಅ ಸಂದರ್ಭಲ್ಲಿ ಯಾಕೆ ಏನು ಮಾಡಿದ್ದಾರೆ ಅನ್ನೋದು ನಾನು ಹೇಳೋಕೆ ಆಗಲ್ಲ. ಅದನ್ನ ಸಮರ್ಥನೆ ಕೂಡ ಮಾಡಲ್ಲ" ಎಂದು ತಿಳಿಸಿದ್ದಾರೆ.
"ದರ್ಶನ್ ಅವರ ಜೊತೆಯಲ್ಲಿ ನಾನು ಭಗವಾನ್, ಚಿಂಗಾರಿ ಸಿನಿಮಗಳನ್ನು ಮಾಡಿದ್ದೇನೆ. ತುಂಬಾ ದಿನಗಳ ಶೂಟಿಂಗ್‌ನಲ್ಲಿ ಅವರ ಜೊತೆ ಇದ್ದೇನೆ. ಅದಾದ ಮೇಲೂ ಕೂಡ ತುಂಬ ಫ್ರೆಂಡ್ಲಿ ಆಗಿ ನಾವು ಸಾಕಷ್ಟು ಬಾರಿ ಸೇರಿದ್ದೇವೆ. ನಾನು ಯಾವಾಗಲೂ ಕಲಾವಿದರ ಪರ. ನಮ್ಮ ಕುಟುಂಬದವರನ್ನು ಬಿಟ್ಟು ಕೊಡಲು ಆಗಲ್ಲ. ನಾನು ನನ್ನ ಕಲಾವಿದರ ಜೊತೆ ನಿಲ್ಲುತ್ತಿದ್ದೇನೆ ಅಷ್ಟೇ, ಕಾನೂನು ಇದನ್ನೆಲ್ಲಾ ನೋಡಿಕೊಳ್ಳುತ್ತದೆ. ದರ್ಶನ್ ಅವರ ಸಂತೋಷದಲ್ಲಿ ಮಾತ್ರ ಭಾಗಿಯಾಗಿ ಈಗ ದುಃಖದಲ್ಲಿ ಭಾಗಿಯಾಗದೆ ಇರುವುದು ಎಂದರೆ ನನ್ನಲ್ಲೇ ನ್ಯೂನತೆ ಇದೆ ಅಂತ ಅರ್ಥ ನಾನು ಅವರ ಪರವಾಗಿ ನಿಲ್ಲುತ್ತೇನೆ. ಐ ಸ್ಟ್ಯಾಂಡ್ ವಿತ್ ದರ್ಶನ್" ಎಂದಿದ್ದಾರೆ.












Click it and Unblock the Notifications