B.Saroja Devi: ಪದ್ಮಶ್ರೀ ಪುರಸ್ಕೃತೆ, ಬಹುಭಾಷಾ ನಟಿ ಬಿ.ಸರೋಜಾ ದೇವಿ ನಿಧನ...
ಬೆಂಗಳೂರು, ಜುಲೈ 14: ವರನಟ ಡಾ.ರಾಜ್ ಕುಮಾರ್ ಸೇರಿದಂತೆ ವಿವಿಧ ಭಾಷೆಯ ಕಲಾವಿದರೊಂದಿಗೆ ನಟಿಸಿದ್ದ ಬಹುಭಾಷಾ ನಟಿ ಬಿ.ಸರೋಜಾದೇವಿ (B.Saroja Devi) ಅವರು ನಿಧನರಾಗಿದ್ದಾರೆ. ಹಿರಿಯ ನಟಿ ಸರೋಜಾದೇವಿ (87) ಇನ್ನಿಲ್ಲ ಎಂಬ ಸುದ್ದಿ ಕೇಳಿ ಸಾಕಷ್ಟು ಕಲಾವಿದರಿಗೆ ಆಘಾತವಾಗಿದೆ. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅವರು ಜುಲೈ 14ರಂದು ವಿಧಿವಶರಾಗಿದ್ದಾರೆ. ಆರು ದಶಕಗಳ ಕಾಲ ಅವರು ಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದನ್ನು ಮರೆಯುವಂತಿಲ್ಲ.

ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಅಸುನೀಗಿದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಮೃತರ ಅಗಲಿಕೆಗೆ ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ. ಸಂತಾಪ ಸೂಚಿಸಿದ್ದಾರೆ.
ಬಿ.ಸರೋಜಾ ದೇವಿ ಅವರು 1938 ಜನವರಿ 7ರಂದು ಜನಿಸಿದರು. ಬಿ. ಸರೋಜಾ ದೇವಿ ಭಾರತದ ಕರ್ನಾಟಕ ರಾಜ್ಯದವರು. ಅವರು ಬೆಂಗಳೂರಿನಲ್ಲಿ (ಈಗ ಬೆಂಗಳೂರು) ಜನಿಸಿದರು. ಅವರು ಜನಿಸಿದ ಸಮಯದಲ್ಲಿ ಅವರ ಜನ್ಮಸ್ಥಳ ಮೈಸೂರು ರಾಜ್ಯವಾಗಿತ್ತು, ನಂತರ ಕರ್ನಾಟಕವಾಯಿತು.
ಅಗಲಿದ ಹಿರಿಯ ನಟಿ ತಮ್ಮ 17ನೇ ವಯಸ್ಸಿನಲ್ಲಿಯೇ ನಟನಾ ರಂಗ ಪ್ರವೇಶಿಸಿದರು. ಅಲ್ಲಿಂದಲೇ ನಟನಾ ಉತ್ತುಂಗಕ್ಕೆ ಏರಿದರು. ನಂತರ ಕ್ರಮೇಣ ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ ಐದಾರು ಭಾಷೆಗಳಲ್ಲಿ ನಟಿಸಿದ್ದರು. ಕನ್ನಡ ಮೊದಲು ಮಹಿಳಾ ಸೂಪರ್ ಸ್ಟಾರ್ ಆಗಿದ್ದರು. ಸುಮಾರು 06 ದಶಕಗಳ ಕಾಲ ಚಿತ್ರರಂಗದಲ್ಲಿದ್ದ ಅವರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾ.ರಾಜಕುಮಾರ್ ಅವರೊಂದಿಗೆ ನಟಿಸಿ ಎಲ್ಲ ಸಿನಿಮಾಗಳು ಹಿಟ್ ಆಗಿವೆ.
ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ
ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್, ನಾಗೇಶ್ವರ್ ರಾವ್, ಜಿಮಿನಿ ಗಣೇಶನ್, ಶಿವಾಜಿ ಗಣೇಶನ್ ವಿವಿಧ ಭಾಷೆಗಳ ಸ್ಟಾರ್ ನಟರೊಂದಿಗೆ ನಟಿಸಿದ್ದರು. ಸ್ಟಾರ್ ನಟಿಯಾಗಿ ಮೆರೆದ 'ಅಭಿನೇತ್ರಿ'ಯಾದರು. ಕಲಾರಂಗದಲ್ಲಿ ಅವರ ಸಾಧನೆ ಅಪಾರ. ಬಿ.ಸೋರಜಾ ದೇವಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಪತಿ ಶ್ರೀಹರ್ಷ ಪಕ್ಕದಲ್ಲೇ ಅಂತ್ಯಕ್ರಿಯೆ
ಒಕ್ಕಲಿಗ ಸಮುದಾಯದಂತೆ ನಟಿ ಸರೋಜಾದೇವಿ ಅವರ ಅಂತ್ರಿಕೆಯ ನಡೆಸಲು ಕುಟುಂಬಸ್ಥರು ತಿರ್ಮಾನಿಸಿದ್ದಾರೆ. ಪತಿ ಶ್ರೀ ಹರ್ಷ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬೆಂಗಳೂರಿನ ಕೊಡುಗೇಹಳ್ಳಿಯ ತೋಟದ ಜಾಗದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ನಟಿ ಬಿ.ಸರೋಜಾದೇವಿ ಅವರ ನಿಧನಕ್ಕೆ ಐದು ಭಾಷೆಗಳ ಚಿತ್ರರಂಗದ ಕಲಾವಿದರು, ಕರ್ನಾಟಕ ರಾಜ್ಯ ರಾಜಕೀಯ ಗಣ್ಯರು, ಕಲಾವಿದರು ಕಂಬನಿ ಮಿಡಿದಿದ್ದಾರೆ. ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications