Darshan Thoogudeepa: ಪುಷ್ಪ ನಿರ್ದೇಶಕ ಸುಕುಮಾರ್ ಜೊತೆ ದರ್ಶನ್ ತೂಗುದೀಪ ಸಿನಿಮಾ?
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಮುಂದಿನ ಸಿನಿಮಾಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಅವರು, ಆರು ತಿಂಗಳ ಬಳಿಕ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಡೆವಿಲ್ ಸಿನಿಮಾ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ದರ್ಶನ್‌ರನ್ನು ಬಂಧಿಸಲಾಗಿತ್ತು. ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತಿದ್ದು, ಅವರು ಚೇತರಿಸಿಕೊಂಡ ಬಳಿಕ ಮೊದಲು ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಲಿದ್ದಾರೆ. ಈ ಬೆನ್ನಲ್ಲೇ ಅವರು ಎರಡು ಸಿನಿಮಾಗಳನ್ನು ಕೈಬಿಟ್ಟಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಸೂರಪ್ಪ ಬಾಬು ನಿರ್ಮಾಣದ ಸಿನಿಮಾವನ್ನು ದರ್ಶನ್ ಕೈಬಿಟ್ಟಿದ್ದು ಪಡೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ನೀಡಿದ್ದಾರೆ ಎನ್ನುವ ಸುದ್ದಿ ಇದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಪ್ರೇಮ್ ನಿರ್ದೇಶನದ ಸಿನಿಮಾಗೂ ಪಡೆದಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕೆವಿಎನ್ ಜೊತೆಗಿನ ಸಿನಿಮಾ ಕೈಬಿಟ್ಟಿದ್ದು ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದು ಖಚಿತ ಎನ್ನಲಾಗಿದೆ.
ಪುಷ್ಪ ಸುಕುಮಾರ್ ಜೊತೆ ದರ್ಶನ್ ಸಿನಿಮಾ
ಇದೀಗ ದರ್ಶನ್ ತೆಲುಗು ನಿರ್ದೇಶಕ ಸುಕುಮಾರ್ ಅವರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ದರ್ಶನ್ ಅಭಿಮಾನಿಗಳ ನಡುವೆ ಹರಿದಾಡುತ್ತಿದೆ. ಈ ಮೊದಲು ದರ್ಶನ್ ಮತ್ತು ಸುಕುಮಾರ್ ಭೇಟಿ ಮಾಡಿದ್ದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ದರ್ಶನ್ ಜೊತೆ ಸುಕುಮಾರ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.
ಪುಷ್ಪ 2 ಸಿನಿಮಾ ಬಳಿಕ ಸುಕುಮಾರ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪುಷ್ಪ ಸಿನಿಮಾದಲ್ಲಿ ಒಂದು ಪಾತ್ರ ಮಾಡುವಂತೆ ದರ್ಶನ್‌ಗೆ ಕೇಳಿದ್ದರು ಎನ್ನಲಾಗಿದ್ದು ಆದರೆ ದರ್ಶನ್ ಪಾತ್ರ ಮಾಡಲು ನಿರಾಕರಿಸಿದ್ದಾರು. ಬಳಿಕ ಇಬ್ಬರೂ ಸೇರಿ ಸಿನಿಮಾ ಮಾಡುವ ಬಗ್ಗೆ ಕೂಡ ಚರ್ಚೆ ನಡೆದಿತ್ತು ಎನ್ನುವ ಸುದ್ದಿ ಇದೆ.
ಪುಷ್ಪ ಬಳಿಕ ಸುಕುಮಾರ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ದರ್ಶನ್ ಕೂಡ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಮೊದಲು ಯಾವ ಸಿನಿಮಾ ಸೆಟ್ಟೇರುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಫೆಬ್ರವರಿ 16ರಂದು ದರ್ಶನ್ ತೂಗುದೀಪ್ ಅವರ ಹುಟ್ಟುಹಬ್ಬವಿದ್ದು, ಅಂದು ದರ್ಶನ್‌ರ ಮುಂದಿನ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಸಿಗುವ ಸಾಧ್ಯತೆ ಇದೆ. ಕಾಟೇರ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ದರ್ಶನ್‌ರ ಮುಂದಿನ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications