Sonu Sood: ಕನ್ನಡದಲ್ಲಿ ನಟಿಸಿರುವ ಖ್ಯಾತ ನಟನ ವಿರುದ್ಧ ಅರೆಸ್ಟ್ ವಾರಂಟ್
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟ ಸೋನು ಸೂದ್ ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ ಎಂದು ವರದಿಯಾಗಿದೆ. ಸದ್ಯ ಸೋನು ಸೂದ್ ಅವರು ಬಂಧನದ ಭೀತಿಯಲ್ಲಿದ್ದಾರೆ. 10 ಲಕ್ಷ ರೂಪಾಯಿ ವಂಚನೆ ಕೇಸ್ ಸಂಬಂಧ ನಟನ ವಿರುದ್ಧ ಲುಧಿಯಾನ ಕೋರ್ಟ್ ವಾರಂಟ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.
ಲೂಧಿಯಾನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಮಣ್‌ಪ್ರೀತ್ ಕೌರ್ ಅವರು ಸೋನು ಸೂದ್ ವಿರುದ್ಧ ವಾರಂಟ್ ಹೊರಡಿಸಿದ್ದಾರೆ. ಲುಧಿಯಾನಾ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಎಂಬುವವರ ವಿರುದ್ಧ 10 ಲಕ್ಷ ರೂಪಾಯಿಗಳ ವಂಚನೆ ಆರೋಪ ಮಾಡಿದ್ದಾರೆ. ಕ್ರಿಪ್ಟೋ ಕರೆನ್ಸಿ ಹೆಸರಿಲ್ಲಿ ಭಾರಿ ವಂಚನೆ ನಡೆಯುತ್ತಿದ್ದರಿಂದ ಲುಧಿಯಾನಾ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು.

ಈ ಕೇಸ್‌ನಲ್ಲಿ ನಟ ಸೋನು ಸೂದ್ ಅವರ ಹೆಸರು ಕೂಡ ಕೇಳಿಬಂದಿದ್ದು, ಕೋರ್ಟ್‌ನಲ್ಲಿ ಸಾಕ್ಷಿ ಹೇಳಬೇಕಾಗಿತ್ತು. ಆದರೆ ಹಲವು ಬಾರಿ ಸಮನ್ಸ್ ಕೊಟ್ಟರೂ ನಟ ಸೋನು ಸೂದ್ ಕೋರ್ಟ್ ಎದುರು ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ನಟನ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.
ಈ ಸಂಬಂಧ ಕೋರ್ಟ್ ಆದೇಶ ಹೊರಡಿಸಿದೆ. ಸೋನು ಸೂದ್‌ನನ್ನು ಬಂಧಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದ ಓಶಿವಾರಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಗಳಿಗೆ ಲೂಧಿಯಾನ ಕೋರ್ಟ್ ಸೂಚಿಸಿದೆ. ಇದರಿಂದ ನಟ ಸೋನು ಸೂದ್ ಅವರು ಸದ್ಯ ಬಂಧನದ ಭೀತಿಯಲ್ಲಿದ್ದಾರೆ.
ಆದೇಶದಲ್ಲಿ ಏನಿದೆ?: ಮನೆ ಸಂಖ್ಯೆ 605/606 ಕ್ಯಾಸಾಬ್ಲಾಂಕ್ ಅಪಾರ್ಟ್‌ಮೆಂಟ್‌ನ ನಿವಾಸಿ ಸೋನು ಸೂದ್ ಅವರು ಕೋರ್ಟ್ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ. ಹಾಗಾಗಿ ಸೋನು ಸೂದ್ ಅವರನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಈ ಮೂಲಕ ನಿಮಗೆ ಆದೇಶಿಸಲಾಗಿದೆ ಎಂದು ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ಕ್ಕೆ ನಿಗದಿಯಾಗಿದೆ.
ಸೋನು ಸೂದ್ ಅವರು ಬಾಲಿವುಡ್‌ನಲ್ಲಿ ಪ್ರಮುಖ ನಟರಾಗಿದ್ದು, ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಕಿಚ್ಚ ಸುದೀಪ್ ಅವರ ವಿಷ್ಣುವರ್ಧನ ಸಿನಿಮಾದಲ್ಲಿ ಸೋನು ಸೂದ್ ಅವರು ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದರು. ಹಾಗಾಗಿ ಸೋನು ಸೂದ್ ಅವರು ಕನ್ನಡಿಗರಿಗೂ ಚಿರಪರಿಚಿತರು. ಟಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಅವರು ಖಳನಾಯಕರಾಗಿಯೇ ಖ್ಯಾತಿ ಪಡೆದಿದ್ದು, ವಿಲನ್ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದರು.
ನಟನೆಯ ಹೊರತಾಗಿಯೂ ಸೋನು ಸೂದ್ ಅವರು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಕಷ್ಟದಲ್ಲಿದ್ದವರಿಗೆ ನೆರವಾಗುವ ಮೂಲಕ ಸೋನು ಸೂದ್ ಅವರು ನಿಜಜೀವನದ ಹೀರೋ ಆಗಿಯೂ ಹಲವರ ಬದುಕಿಗೆ ಬೆಳಕಾಗಿದ್ದಾರೆ. ಬಡವರಿಗೆ ಆರ್ಥಿಕ ನೆರವು ನೀಡುವ ಮೂಲಕವೂ ರಿಯಲ್ ಹೀರೋ ಆಗಿದ್ದ ಸೋನು ಸೂದ್ ಅವರಿಗೆ ಇದೀಗ ವಂಚನೆ ಕೇಸ್ ಮುಳುವಾಗಿದೆ. ಈ ವಿಚಾರ ಕೇಳಿ ಸೋನು ಸೂದ್ ಅಭಿಮಾನಿಗಳಿಗೆ ಶಾಕ್ ಆಗಿದೆ.












Click it and Unblock the Notifications