ಕುಡಿದು ದೇವಸ್ಥಾನಕ್ಕೆ ಹೋಗಿದ್ದೆ, ಆ ಮೇಲೆ ಆಗಿದ್ದೇ ಬೇರೆ: ಅರ್ಜುನ್ ಜನ್ಯ ಹೇಳಿದ್ದೇನು?
ಕನ್ನಡ ಚಿತ್ರರಂಗದ ಮ್ಯಾಜಿಕಲ್ ಕಂಪೋಸರ್ ಎಂದೇ ಕರೆಸಿಕೊಂಡಿದ್ದಾರೆ ಅರ್ಜುನ್ ಜನ್ಯ. ಸಾಕಷ್ಟು ಸಿನಿಮಾಗಳಿಗೆ ಹುಚ್ಚೆದ್ದು ಕುಣಿಯುವ ಹಾಡುಗಳು ಕಂಪೋಸ್ ಮಾಡಿರುವ ಜನ್ಯ, ಕನ್ನಡದ ಟಾಪ್ ಮ್ಯೂಸಿಕ್ ಡೈರೆಕ್ಟರ್‌ಗಳಲ್ಲಿ ಒಬ್ಬರು. ಇದೀಗ ಸಿನಿಮಾ ನಿರ್ದೇಶನಕ್ಕೂ ಕೈ ಹಾಕಿರುವ ಅವರು ತಮ್ಮ ವೃತ್ತಿ ಬದುಕಿನ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ಮೊದಲು ಸಿಕ್ಕಾಪಟ್ಟೆ ಕುಡಿಯುತಿದ್ದೆ, ಅದು ಎಷ್ಟರಮಟ್ಟಿಗೆ ಅಂದ್ರೆ, ಕುಡಿದು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಅರ್ಜುನ್ ಜನ್ಯ ತಮ್ಮ ಬದುಕಿನ ಅಚ್ಚರಿ ಸಂಗತಿಗಳನ್ನು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
'ಲೈಫಲ್ಲಿ ಏನಾದ್ರೂ ಮಾಡಬೇಕು ಅನ್ನೋ ಆಸೆ, ದಿಕ್ಕು ದೆಸೆ ಇಲ್ಲದ ಸಮಯ. ಆಗ ಒಂದು ದಿನ ತಾಯಿ ಆದಿಪರಾಶಕ್ತಿ ಬಂಗಾರವಾಡಿ ಅಮ್ಮನವರ ದೇವಸ್ಥಾನಕ್ಕೆ ಹೋಗುವ ಅವಕಾಶ ಸಿಕ್ತು. 2005ರಲ್ಲಿ ಮೊದಲ ಬಾರಿಗೆ ನಾನು ದೇವಸ್ಥಾನಕ್ಕೆ ಕಾಲಿಟ್ಟೆ. ಅಲ್ಲಿನ ತಾಯಿಯನ್ನ ನೋಡುವುದೇ ಒಂದು ಭಾಗ್ಯ. ಆದರೆ ಬಂಗಾರವಾಡಿ ಅವರು ನನ್ನ ಕಣ್ಣೆದುರೇ ಸಾಮಾನ್ಯರಂತೆ ನಡೆದುಕೊಂಡು ಹೋದರು' ಎಂದಿದ್ದಾರೆ ಜನ್ಯ.

'ಅಮ್ಮನನ್ನ ನೋಡಿ ಅಳು ನಿಲ್ಲಲಿಲ್ಲ'
'ನಂತರ ದೇವಸ್ಥಾನದಲ್ಲಿ ಅಮ್ಮನವರ ದರ್ಶನ ಪಡೆದೆ. ಇದಕ್ಕಿದ್ದಂತೆ ಅಳೋಕೆ ಶುರು ಮಾಡಿದೆ. ಆ ದಿವ್ಯ ಶಕ್ತಿ ಏನು ಹೇಳ್ತಿತ್ತು ಅನ್ನೋದೆ ತಿಳಿಯಲಿಲ್ಲ. ಅಮ್ಮನನ್ನ ನೋಡ್ತಿದ್ರೆ ಆಗ್ತಿಲ್ಲ, ಸುಮ್ಮನೆ ಅಳ್ತಿದ್ದೆ. ನಾನು ಆ ಸಮಯದಲ್ಲಿ ತುಂಬಾ ಮದ್ಯ ಸೇವನೆ ಮಾಡುತ್ತಿದ್ದೆ. ನಾನು ಮೊದಲು ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಆ ಲೈಫೇ ಬೇರೆ. ಅಂದು ನಾನು ದೇವಸ್ಥಾನಕ್ಕೆ ಹೋಗುವ ಹಿಂದಿನ ದಿನ ಕೂಡ ಮನೆಯಲ್ಲಿ ಮದ್ಯ ಸೇವಿಸಿದ್ದೆ. ಅಮ್ಮನವರ ಮುಂದೆ ನಿಂತ ತಕ್ಷಣ ನನಗೆ ಪ್ರಶ್ನೆ ಮಾಡಿದಂತಾಯ್ತು. ಕುಡಿದು ದೇವಸ್ಥಾನಕ್ಕೆ ಬರುವಷ್ಟು ಧೈರ್ಯನಾ? ಅಂತ ಕೇಳಿದಂತಾಯ್ತು' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
'ಕುಡಿಯಲ್ಲ ಅಂತ ನಿರ್ಧರಿಸಿದೆ'
'ಆಗ ನನಗೆ ತುಂಬಾ ಗಿಲ್ಟ್ ಕೂಡ ಇತ್ತು. ಆ ಕ್ಷಣವೇ ನಾನು ಇನ್ಮುಂದೆ ಕುಡಿಯಲ್ಲ ಅಂತ ನಿರ್ಧಾರ ಮಾಡಿದೆ. ಅಲ್ಲಿಂದ ಬಂದ ತಕ್ಷಣ ನಾನು ಇನ್ಮುಂದೆ ಕುಡಿಯೋದಿಲ್ಲ ಅಂತ ನನ್ನ ಫ್ರೆಂಡ್ಸ್‌ಗೂ ಹೇಳಿದೆ. ಅದನ್ನ ಕೇಳಿ ನನ್ನ ಫ್ರೆಂಡ್ಸ್ ಎಲ್ಲ ಶಾಕ್ ಆದ್ರು. ಇದಾದ ನಂತರ 10 ವರ್ಷ ನಾನು ಮದ್ಯ ಮುಟ್ಟಲೇ ಇಲ್ಲ. ಅದೇ ಸಮಯದಲ್ಲೇ ನನ್ನ ಬದುಕು ಬದಲಾಯ್ತು' ಎಂದಿದ್ದಾರೆ.
'ಆ ದೇವಸ್ಥಾನಕ್ಕೆ ಹೋಗಿಬಂದ ಬಳಿಕವೇ ನನಗೆ ಸಿನಿಮಾವೊಂದರಲ್ಲಿ ಮೊದಲ ಅವಕಾಶ ಸಿಕ್ತು, ಮದುವೆ ಕೂಡ ಫಿಕ್ಸ್ ಆಯ್ತು. ಅಂದಿನಿಂದ ಇಲ್ಲಿವರೆಗೂ ನನ್ನ ಪ್ರತಿ ಉಸಿರಾಟವೂ ಅಮ್ಮನವರೇ, ಪ್ರತಿದಿನ ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ಹಾಗೂ ರಾತ್ರಿ ಕಣ್ಣು ಮುಚ್ಚುವಾಗಲೂ ಅಮ್ಮನವರನ್ನೇ ನೋಡ್ತೀನಿ. ಕಷ್ಟ ಬಂದರೂ, ತುಂಬಾ ಖುಷಿಯಾಗಿ ಸಕ್ಸಸ್ ಸಿಕ್ಕರೂ ನನಗೆ ಏನೂ ಅನಿಸೋದಿಲ್ಲ. ಎಲ್ಲವನ್ನೂ ಅಮ್ಮನವರ ಪಾದಕ್ಕೆ ಹಾಕಿ ಸುಮ್ಮನಿರ್ತೀನಿ' ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.












Click it and Unblock the Notifications