ಅಜ್ಜಿ ಆದ ಅನುಶ್ರೀ: ಸರಿಗಮಪ 100ನೇ ಸೀಸನ್‌ನಲ್ಲಿ ಅನುಶ್ರೀ ಆಂಕರಿಂಗ್- ವಿಡಿಯೋ ವೈರಲ್
ಜೀ ಕನ್ನಡದ ರಿಯಾಲಿಟಿ ಶೋ ಸರಿಗಮಪ 2006ರಲ್ಲಿ ಶುರುವಾಯ್ತು. ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ತೀರ್ಪುಗಾರಿಕೆ ಹಾಗೂ ಅನುಶ್ರೀ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಸಾಕಷ್ಟು ಗಾಯನ ಪ್ರತಿಭೆಗಳು ಈ ರಿಯಾಲಿಟಿ ಶೋನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಈ ಕಾರ್ಯಕ್ರಮದ ಫನ್ನಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನುಶ್ರೀ ಸರಿಗಮಪ 100ನೇ ಸೀಸನ್‌ನಲ್ಲಿ ಹೇಗೆ ಆಂಕರಿಂಗ್ ಮಾಡಲಿದ್ದಾರೆ ಅನ್ನೋದನ್ನು ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು ಜೀ ಕನ್ನಡ ಸರಿಗಮಪ ರಿಯಾಲಿಟಿ ಶೋನ ಪ್ರೋಮೋವೊಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಾಮಿಡಿ ಸನ್ನಿವೇಶವೊಂದು ಕಂಡುಬಂದಿದೆ. 100ನೇ ಸೀಸನ್ ಸರಿಗಮಪ ಆಂಕರಿಂಗ್ ವೇಳೆ ಅನುಶ್ರೀ ವಯಸ್ಸು ಎಷ್ಟಿರುತ್ತೆ? ಅವರ ಆಂಕರಿಂಗ್ ಹೇಗಿರುತ್ತೆ ಎಂದು ತೋರಿಸಲು ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು ಕೇಳುತ್ತಾರೆ.

ಆಗ ಅನುಶ್ರೀ ಮಾಡಿದ ಆಕ್ಟಿಂಗ್ ಅದ್ಭುತ ಜೊತೆಗೆ ಸಖತ್ ಕಾಮಿಡಿಯಾಗಿದೆ. ಸರಿಗಮಪ 19ನೇ ಸೀಸನ್ ಈಗ ನಡೆಯುತ್ತಿದೆ. ಈಗ ಅನುಶ್ರೀಗಿನ್ನೂ ಮದುವೆ ಸಹ ಆಗಿಲ್ಲ. ತುಂಬಾ ಲವಲವಿಕೆಯಿಂದ, ನಗುನಗುತ್ತಾ, ಉತ್ಸಾಹದಿಂದ ನಿರೂಪಣೆ ಮಾಡುತ್ತಾರೆ. ಆದರೆ ಸರಿಗಮಪ 100ನೇ ಸೀಸನ್‌ನಲ್ಲಿ ಅನುಶ್ರೀ ಹೇಗೆ ನಿರೂಪಣೆ ಮಾಡಬಹುದು ಅನ್ನೋದನ್ನು ನೀವು ಊಹೆ ಮಾಡಿಕೊಳ್ಳಿ. ಅದನ್ನು ಅನುಶ್ರೀ ಈಗಲೇ ನಟಿಸುವ ಮೂಲಕ ತೋರಿಸಿದ್ದಾರೆ.
ಸರಿಗಮಪ 100ನೇ ಸೀಸನ್‌ನಲ್ಲಿ ಅನುಶ್ರೀಗೆ 120 ವರ್ಷ ವಯಸ್ಸು ಆಗಿರುತ್ತದೆ. ಆಗ ಅನುಶ್ರೀ ಅವರ ನಿರೂಪಣೆ ಹೇಗಿರುತ್ತದೆ ಅನ್ನೋದನ್ನು ಅನುಶ್ರೀ ಅವರೇ ತೋರಿಸಿದ್ದಾರೆ. ಮೊದಲು ವೇದಿಕೆಗೆ ತಲೆ ಅಲ್ಲಾಡಿಸುತ್ತಾ ಬರುವ ಅನುಶ್ರೀಯ ಎರಡು ಕೈಗಳು ನಡುಗುತ್ತಿರುತ್ತವೆ. ಅಲ್ಲದೆ ಅವರ ಧ್ವನಿ ಕೂಡ ನಡುಗುತ್ತಿರುತ್ತದೆ. ಈಗ ಪಟಪಟಾ ಅಂತ ನಿರೂಪಣೆ ಮಾಡುವ ಅನುಶ್ರೀ ಸರಿಗಮಪ 100ನೇ ಸೀಸನ್‌ನಲ್ಲಿ ತುಂಬಾ ನಿಧಾನವಾಗಿ ನಿರೂಪಣೆ ಮಾಡುತ್ತಾರೆ. ಇದೊಂದು ಅದ್ಭುತವಾದ ಹಾಸ್ಯ ಸನ್ನಿವೇಶವಾಗಿದೆ.

ಇದೇ ವೇಳೆ ವಿಜಯ್ ಪ್ರಕಾಶ್ ಅವರಿಗೆ ಮೊಮ್ಮಗ ಬಂದಿಲ್ವಾ ಎಂದು ಅನುಶ್ರೀ ಅಜ್ಜಿ ಕೇಳುತ್ತಾರೆ. ಇದಕ್ಕೆ ವಿಜಯ್ ಪ್ರಕಾಶ್ ಅವರು ನಾನು ಇನ್ನೂ ಮದುವೆ ಆಗಲು ಹುಡುಗಿಯನ್ನು ಹುಡುಕುತ್ತಿದ್ದೇನೆ, ಮೊಮ್ಮೊಗ ಎಲ್ಲಿಂದ ಬರುತ್ತಾನೆ ಎಂದು ಕಾಮಿಡಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ಆಗ ಅನುಶ್ರೀ ನೀವು ಹೆಣ್ಣು ನೋಡಿ, ನಾನು 120 ಸೀಸನ್ ಆದರೂ ಆ ಗಂಡನ್ನೇ ನೋಡ್ತಾಯಿರೋದು ಎಂದು ಟಾಂಗ್ ಕೊಡುತ್ತಾರೆ. ಈ ಕಾಮಿಡಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋನಲ್ಲಿ ಈ ಕಾಮಿಡಿ ಪ್ರಸಂಗ ಪ್ರಸಾರವಾಗಲಿದೆ.
ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ಅನುಶ್ರೀ ಆಂಕರಿಂಗ್ ಮಾಡಿದರೆ ಅದೆನೋ ಚಂದ. ಅನುಶ್ರೀ ಇದ್ದರೆ ಆ ವೇದಿಕೆಯ ಕಳೆಯೇ ಬೇರೆ. ಕೆಲ ಸಿನಿಮಾದಲ್ಲಿ ನಟಿಸಿ ಸ್ವಂತ ಯೂಟ್ಯೂಬ್ ಮಾಡಿಕೊಂಡಿರುವ ಅನುಶ್ರೀಗೆ ಸರಿಗಮಪ ರಿಯಾಲಿಟಿ ಶೋನಲ್ಲೇ ಹೆಚ್ಚು ಜನ ಫಾನ್ಸ್ ಹಾಗೂ ಫಾಲೋವರ್ಸ್ ಇದ್ದಾರೆ.
ಅನುಶ್ರೀ ಅವರಿಗೆ ಮಾತು, ಸಂದರ್ಭವನ್ನು ನಿಭಾಯಿಸುವ ಜಾಣ್ಮೆ, ಹಾಸ್ಯ ಸಂದರ್ಭವನ್ನು ಸೃಷ್ಟಿಸುವ ಕಲೆ, ಪದಗಳ ಶ್ರೀಮಂತ ಜೋಡೆಣೆ ಸ್ಪಷ್ಟವಾಗಿ ಮಾಡಲು ಬರುತ್ತದೆ. ಹೀಗಾಗಿ ಕಾರ್ಯಕ್ರಮದ ಉದ್ದಕ್ಕೂ ಜನರಿಗೆ ಕೆಲ ಹಾಸ್ಯ ಸನ್ನಿವೇಶಗಳು ನೋಡಲು ಸಿಗುವುದರಿಂದ ಕಾರ್ಯಕ್ರಮ ಬೇಸರವಾಗುವುದಿಲ್ಲ.
ಅಲ್ಲದೆ ಅನುಶ್ರೀ ಕಾರ್ಯಕ್ರಮದ ನಡುವೆ ತೀರ್ಪುಗಾರರೊಂದಿಗೆ ಮಾಡುವ ಹಾಸ್ಯ ಸನ್ನಿವೇಶಗಳನ್ನು ನೋಡಲು ಜನ ಕಾತುರದಿಂದ ಕಾಯುತ್ತಾರೆ. ಇದಕ್ಕೆ ಹೆಚ್ಚು ಜನ ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ. ಅನುಶ್ರೀ ಅರ್ಜುನ್ ಜನ್ಯ ಅವರಿಗೆ ಪ್ರಪೋಸ್ ಮಾಡುವುದು, ಅದಕ್ಕೆ ಅರ್ಜುನ್ ಜನ್ಯ ಸೇರಿದಂತೆ ರಾಜೇಶ್ ಕೃಷ್ಣನ್ ಸೇರಿ ಕಾಮೆಂಟ್ ಪಾಸ್ ಮಾಡುವುದು ಇದೆಲ್ಲವೂ ಕಾರ್ಯಕ್ರಮಕ್ಕೆ ಒಂದು ಕಳೆ ತಂದುಕೊಡುತ್ತದೆ.
ಅನುಶ್ರೀ ಕಾಮಿಡಿಯಾಗಿ ಅರ್ಜುನ್ ಜನ್ಯ ಅವರಿಗೆ ಪ್ರಪೋಸ್ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವರು ಅದನ್ನೇ ಗಂಭೀರವಾಗಿ ಪರಿಗಣಿಸಿ ಗಾಸಿಪ್‌ಗಳನ್ನು ಮಾಡುವುದು ಇದೆ. ಅದೇನೇ ಆಗಲಿ ಈ ಬಾರಿ ಸರಿಗಮಪ ರಿಯಾಲಿಟಿ ಶೋನ ಪ್ರೋಮೋ ಸಖತ್ ವೈರಲ್ ಆಗಿದ್ದು ಮಾತ್ರ ಸುಳ್ಳಲ್ಲ.












Click it and Unblock the Notifications