ವೈಷ್ಣವಿ ಗೌಡ ಮದುವೆ ದಿನಾಂಕ ಫಿಕ್ಸ್: ತಾಯಿ ಭಾನು ರವಿಕುಮಾರ್ ಹೇಳಿದ್ದೇನು?
ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಇತ್ತೀಚೆಗೆ ಎಂಗೇಜ್ ಆಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಅವರು ಉದ್ಯಮಿ ಅನುಕೂಲ್ ಮಿಶ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ವೈಷ್ಣವಿ ಭಾವಿ ಪತಿ ಮೂಲತ: ಛತ್ತಿಸ್‌ಘಡದವರು. ಇಂತಹ ಹುಡುಗ ಸಿಕ್ಕಿದ್ದಕ್ಕೆ ವೈಷ್ಣವಿ ತಾಯಿ ಭಾನು ರವಿಕುಮಾರ್ ಸಂತೋಷಗೊಂಡು ಕಣ್ಣೀರು ಹಾಕಿದ್ದಾರೆ.
ಹೌದು ವೈಷ್ಣವಿ ಗೌಡ ಅನುಕೂಲ್ ಮಿಶ್ರಾ ಅವರೊಂದಿಗೆ ಕಳೆದ ಸೋಮವಾರ (ಏಪ್ರಿಲ್ 14) ತುಂಬಾ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ವೈಷ್ಣವಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇದು ಪ್ರೇಮ ವಿವಾಹ ಇರಬೇಕು ಎಂದು ಕೆಲವರು ಮಾತನಾಡಲು ಶುರು ಮಾಡಿದ್ದಾರೆ. ಆದರೆ ಇದಕ್ಕೆಲ್ಲಾ ವೈಷ್ಣವಿ ಗೌಡ ತಾಯಿ ಸ್ಪಷ್ಟನೆ ನೀಡಿದ್ದಾರೆ.

ಕನ್ನಡಿಗರ ನೆಚ್ಚಿನ ಕಿರುತೆರೆ ನಟಿ ಮಿಲ್ಕಿ ಬ್ಯೂಟಿ ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್ ಅವರು ಪಬ್ಲಿಕ್ ಟಿವಿ ಸುದ್ದಿಗಾರರೊಂದಿಗೆ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲ ಊಹಾಪೋಹ ಸುದ್ದಿಗಳಿಗೆ ಉತ್ತರಿಸಿ ಸುಳ್ಳು ಸುದ್ದಿ ಹರಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ಜೊತೆಗೆ ವೈಷ್ಣವಿ ಮದುವೆ ದಿನಾಂಕದ ಬಗ್ಗೆ ಕೂಡ ಅವರು ಹಂಚಿಕೊಂಡಿದ್ದಾರೆ.
ವೈಷ್ಣವಿಯದ್ದು ಕಂಪ್ಲೀಟ್ ಅರೇಂಜ್ ಮ್ಯಾರೇಜ್. ಇದು ಪ್ರೇಮ ವಿವಾಹ ಅಲ್ಲ. ಮ್ಯಾಟ್ರಿಮೋನಿ ಮೂಲಕ ಅನುಕೂಲ್ ಮಿಶ್ರಾ ನಮಗೆ ಪರಿಚಯ ಆಗಿದ್ದಾರೆ. ಅನುಕೂಲ್ ಮಿಶ್ರಾ ಅವರ ಕುಟುಂಬವನ್ನು ಭೇಟಿ ಆಗಿ ಅವರೊಂದಿಗೆ ಮಾತನಾಡಿ ನಮಗೆ ಸರಿ ಹೊಂದುತ್ತಾರೆ ಅಂದಾಗ ಮಾತ್ರ ಅನುಕೂಲ್ ಹಾಗೂ ವೈಷ್ಣವಿ ಭೇಟಿ ಮಾಡಿದ್ದಾರೆ. ಅಲ್ಲಿವರೆಗೂ ಅವರಿಬ್ಬರು ನೋಡಿಲ್ಲ, ಮಾತೂ ಸಹ ಆಡಿರಲಿಲ್ಲ. ಒಂದು ದೇವಸ್ಥಾನದಲ್ಲಿ ಅನುಕೂಲ್ ಹಾಗೂ ವೈಷ್ಣವಿಯನ್ನು ನಾವು ಭೇಟಿ ಮಾಡ್ಸಿದ್ವಿ ಎಂದು ಭಾನು ಅವರು ಹೇಳಿದ್ದಾರೆ. ಇದೇ ವೇಳೆ ಭಾನು ಅವರು ಕಳೆದ ಎರಡು ವರ್ಷದ ಹಿಂದಿನ ಘಟನೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಕಳೆದ ಬಾರಿ ನಾವು ನೋಡಿದ ಹುಡುಗ ಸರಿ ಇಲ್ಲ ಎಂದು ಯಾರೋ ಇಬ್ಬರು ಹುಡುಗಿಯರ ಧ್ವನಿ ನಾನು ಕೇಳಿದೆ. ಅವರಿಬ್ಬರು ನನ್ನ ಮಗಳ ಜೀವನ ಕಾಪಾಡಿದ್ದಾರೆ. ಅವರು ಎಲ್ಲೇ ಇರಲಿ ತುಂಬಾ ಖುಷಿಯಾಗಿ ಇರಲಿ ಎಂದು ನಾನು ಹಾರೈಸುತ್ತೇನೆ. ಅವರಿಬ್ಬರಿಂದಾಗಿ ಇಂದು ನನ್ನ ಮಗಳ ಜೀವನ ಉಳಿದಿದೆ. ದೇವರ ರೀತಿ ಬಂದು ನನ್ನ ಮಗಳ ಜೀವನ ಕಾಪಾಡಿದರು ಎಂದು ವೈಷ್ಣವಿ ತಾಯಿ ಕೈಮುಗಿದು ಕಣ್ಣೀರು ಹಾಕಿದ್ದಾರೆ.

ಜೊತೆಗೆ ವೈಷ್ಣವಿಗೆ ಇಂತಹ ಸಂಬಂಧ ಸಿಗಬೇಕು ಅಂದರೆ ತುಂಬಾ ಪುಣ್ಯ ಮಾಡಿರಬೇಕು. ಅಭಿಮಾನಿಗಳ ಆಶೀರ್ವಾದ ಆ ದೇವರ ಆಶೀರ್ವಾದ ಅವಳ ಮೇಲಿದೆ. ಆದ್ದರಿಂದ ಅನುಕೂಲ್ ಅಂತಹ ಒಳ್ಳೆಯ ಹುಡುಗ ಅವಳಿಗೆ ಸಿಕ್ಕಿದ್ದಾರೆ. ವೈಷ್ಣವಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ತುಂಬಾ ಜನ ಫ್ಯಾನ್ಸ್ ಇದ್ದಾರೆ. ಅವರ ಹಾರೈಕೆ ನನ್ನ ಮಗಳನ್ನು ಕಾಪಾಡಿದೆ ಎಂದಿದ್ದಾರೆ ಭಾನು ಅವರು.
ಇನ್ನೂ ವೈಷ್ಣವಿ ಮದುವೆ ದಿನಾಂಕದ ಬಗ್ಗೆ ಕೇಳಿದಾಗ ತಾಯಿ ಭಾನು ಅವರು, ನಾವು ಬೇಗ ವೈಷ್ಣವಿ ಮದುವೆ ಮಾಡಬೇಕು ಅಂತ ತಯಾರಿ ನಡೆಸಿದ್ದೇವೆ. ಈಗಾಗಲೇ ಮದುವೆ ಮಂಟಪ ಕೂಡ ಕೇಳಿ ಬಂದಿದ್ದೇವೆ. ನಮಗೆ ಸರಿ ಹೊಂದುವ ದಿನಾಂಕಕ್ಕೆ ಮದುವೆ ಮಂಟಪ ಸಿಗಬೇಕು. ಮೂರು ಮದುವೆ ಮಂಟಪ ನೋಡಿದ್ದೇವೆ. ಕೊನೆಯಲ್ಲಿ ಆ ಮೂರರಲ್ಲಿ ಒಂದನ್ನು ಆಯ್ಕೆ ಮಾಡುತ್ತೇವೆ. ವೈಷ್ಣವಿ ಮದುವೆ ಇದೇ ವರ್ಷ ಆಗಲಿದೆ ಎಂದು ತಾಯಿ ಸಂತೋಷದಿಂದ ಮಾತನಾಡಿದ್ದಾರೆ. ಒಟ್ಟಿನಲ್ಲಿ ವೈಷ್ಣವಿ ಭಾವಿ ಪತಿಯ ಬಗ್ಗೆ ಇದ್ದ ಸಾಕಷ್ಟು ಊಹಾಪೋಹಗಳಿಗೆ ವೈಷ್ಣವಿ ಅವರ ತಾಯಿ ಭಾನು ತೆರೆ ಎಳೆದಿದ್ದಾರೆ.











Click it and Unblock the Notifications