23ನೇ ವಯಸ್ಸಿಗೆ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ತಾಯಾದ ಶ್ರೀಲೀಲಾ: ಈ ವಿಚಾರ ಗೊತ್ತೇ?
ಕನ್ನಡ ಚಿತ್ರರಂಗದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿ ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ನಟಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು. ಸ್ಯಾಂಡಲ್‌ವುಡ್‌ನಿಂದ ನಟನೆಯ ಜರ್ನಿ ಆರಂಭಿಸಿದ ಶ್ರೀಲೀಲಾ, ಈಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.
ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಚಿತ್ರದಲ್ಲಿ ಶ್ರೀಲೀಲಾ ಡ್ಯಾನ್ಸ್ ಸಖತ್ ಹಿಟ್ ಆಗಿದ್ದು, ಇದೀಗ ಟ್ರೆಂಡಿಂಗ್‌ನಲ್ಲಿರುವ ಪುಷ್ಪ 2 ಸಿನಿಮಾದಲ್ಲಿ ಕೂಡ ಅಲ್ಲು ಅರ್ಜುನ್ ಜೊತೆ ಐಟಂ ಸಾಂಗ್‌ನಲ್ಲಿ ಸಖತ್ ಡಾನ್ಸ್ ಮಾಡಿದ್ದಾರೆ. ಪುಷ್ಪ 2 ಸಿನಿಮಾದ ಹಾಡಿನಲ್ಲಿ ಶ್ರೀಲೀಲಾ ಡಾನ್ಸ್‌ಗೆ ಮನಸೋಲದವರಿಲ್ಲ ಎನ್ನುವಂತಾಗಿದೆ. ಅಲ್ಲದೇ ಸದ್ಯ ಶ್ರೀಲೀಲಾ ಡಾನ್ಸ್‌ಗೆ ಸರಿಸಾಟಿ ಯಾರೂ ಇಲ್ಲ ಎನ್ನುವ ಮಾತು ಕೂಡ ಇದೆ.

ಕಿಸ್ ಕನ್ನಡ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ, ಭರಾಟೆ, ಬೈಟು ಲವ್, ಜೇಮ್ಸ್ ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಡರು. ಈ ನಡುವೆ ತೆಲುಗು ಚಿತ್ರರಂಗದತ್ತ ಮುಖ ಮಾಡಿದ ಶ್ರೀಲೀಲಾಗೆ ಅವಕಾಶಗಳ ಸುರಿಮಳೆಯೇ ಬಂದಿದ್ದು, ಒಂದಾದ ಮೇಲೊಂದು ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.
ಚಿತ್ರರಂಗದಲ್ಲಿ ಇಷ್ಟೆಲ್ಲಾ ಬ್ಯೂಸಿ ಇರುವ ನಟಿ ಶ್ರೀಲೀಲಾ ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರು ಮಕ್ಕಳಿಗೆ ತಾಯಾಗಿದ್ದಾರೆ ಎಂದರೆ ನೀವು ನಂಬುತ್ತೀರಾ..? ಖಂಡಿತಾ ಇದು ಸತ್ಯ. ನಟಿ ಶ್ರೀಲೀಲಾ ಇಬ್ಬರು ಮಕ್ಕಳನ್ನು ದತ್ತು ಪಡೆದು ಆ ಮಕ್ಕಳಿಗೆ ತಾಯಿ ಪ್ರೀತಿಯನ್ನು ಧಾರೆ ಎರೆಯುತ್ತಿದ್ದಾರೆ. ಅಲ್ಲದೇ ಆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ನಟಿಯೇ ಹೊತ್ತಿದ್ದು, ಅತೀ ಚಿಕ್ಕ ವಯಸ್ಸಿನಲ್ಲಿ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಇನ್ನು ಶ್ರೀಲೀಲಾ ಮಕ್ಕಳನ್ನು ದತ್ತು ಪಡೆಯಲು ಕಾರಣ ಕೂಡ ಇದೆ. ಧನ್ವೀರ್ ಅಭಿನಯದ ಬೈ ಟು ಲವ್ ಚಿತ್ರದಲ್ಲಿ ಶ್ರೀಲೀಲಾ ದತ್ತು ಮಗುವಿನ ತಾಯಿಯ ಪಾತ್ರ ನಿರ್ವಹಿಸಿದ್ದರು. ಈ ಪಾತ್ರದಿಂದ ಪ್ರೇರೇಪಿತರಾದ ಅವರು ಇಬ್ಬರು ಮಕ್ಕಳನ್ನು ದತ್ತು ಪಡೆಯಲು ನಿರ್ಧರಿಸಿದರು. ಬೈ ಟು ಲವ್ ಚಿತ್ರದ ಪ್ರಚಾರದ ಸಮಯದಲ್ಲಿ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಶ್ರೀಲೀಲಾ ಭೇಟಿ ನೀಡಿದ್ದರು. ಈ ವೇಳೆ ಇಲ್ಲಿಯ ಇಬ್ಬರ ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದುಕೊಂಡಿದ್ದರು. ಅಂದಿನಿಂದ ಈ ಇಬ್ಬರು ಮಕ್ಕಳ ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಶ್ರೀಲೀಲಾ ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ತಾಯಿ ಪ್ರೀತಿ ನೀಡುತ್ತಿದ್ದಾರೆ.











Click it and Unblock the Notifications